2026-27ನೇ ಸಾಲಿನ ತೀರ್ಥಹಳ್ಳಿ ಪಪಂಯ ಮುಂಗಡಪತ್ರವನ್ನು ಮಂಗಳವಾರ ಮಂಡಿಸಲಾಗಿದ್ದು 1.14 ಕೋಟಿ ರು.ಗಳ ಮಿಗತೆ ಬಜೆಟ್ಟನ್ನು ಸರ್ವಾನುಮತದ ಒಪ್ಪಿಗೆಯೊಂದಿಗೆ ಅಂಗೀಕರಿಸಲಾಗಿದೆ.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
2026-27ನೇ ಸಾಲಿನ ತೀರ್ಥಹಳ್ಳಿ ಪಪಂಯ ಮುಂಗಡಪತ್ರವನ್ನು ಮಂಗಳವಾರ ಮಂಡಿಸಲಾಗಿದ್ದು 1.14 ಕೋಟಿ ರು.ಗಳ ಮಿಗತೆ ಬಜೆಟ್ಟನ್ನು ಸರ್ವಾನುಮತದ ಒಪ್ಪಿಗೆಯೊಂದಿಗೆ ಅಂಗೀಕರಿಸಲಾಗಿದೆ.ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ ಮಂಡಿಸಿದ ಮುಂಗಡ ಪತ್ರದಲ್ಲಿ ಆರಂಭದ ಶಿಲ್ಕು 12,93,24,620 ರು. ಇದ್ದು 21,88,40,000 ರು. ನಿರೀಕ್ಷಿತ ಆದಾಯ ಸೇರಿ ಒಟ್ಟು ಆದಾಯ 34,81,64,620 ರು.ಗಳಾಗಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ 33,67,50,000 ರೂಗಳ ಯೋಜನೆಯನ್ನು ರೂಪಿಸಲಾಗಿದೆ ಎಂದು ಮುಂಗಡ ಪತ್ರದ ಮುಖ್ಯಾಂಶವನ್ನು ಸಭೆಯಲ್ಲಿ ಮಂಡಿಸಿದರು. ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಪ್ರತಿಪಕ್ಷದ ಬಿಜೆಪಿ ಸದಸ್ಯರು ಬಜೆಟ್ ವಾಸ್ತವತೆಗೆ ಪೂರಕವಾಗಿಲ್ಲ, ಸಂಪನ್ಮೂಲ ಹೆಚ್ಚಿಸಿಕೊಳ್ಳುವ ಮೂಲಕ ಅಭಿವೃದ್ಧಿ ಕಾರ್ಯ ನೆರವೇರಿಸಿ ಎಂದು ಆಗ್ರಹಿಸಿದರು.
ಆದಾಯ ಮೂಲದಿಂದ ಪ್ರಮುಖವಾಗಿ ಆಸ್ತಿ ತೆರಿಗೆ ಹಾಗೂ ಖಾತಾ ವರ್ಗಾವಣೆ ಮತ್ತು ನಕಲು ಶುಲ್ಕದಿಂದ 2.39 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದ್ದು 2025ರ ಡಿಸೆಂಬರ್ ಅಂತ್ಯದ ವೇಳೆಗೆ 1.82 ಕೋಟಿ ರು. ಸಂಗ್ರಹವಾಗಿದೆ. 24*7 ನೀರಿನ ಯೋಜನೆಯಿಂದ ಒಂದು ಕೋಟಿ ರು. ನಿರೀಕ್ಷೆ ಇದೆ. ರಾಜ್ಯ ಸರ್ಕಾರದಿಂದ ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ ಪಾವತಿಗೆ 1.97 ಕೋಟಿ, 15ನೇ ಹಣಕಾಸು ಆಯೋಗದಡಿ 1.15 ಕೋಟಿ ರು. ನಿರೀಕ್ಷೆ ಇದೆ. ಪಪಂ ವ್ಯಾಪ್ತಿಯ ನಿವೇಶನಗಳ ಮಾರಾಟದಿಂದ 4.00 ಕೋಟಿ ರು. ನಿರೀಕ್ಷೆ ಮಾಡಲಾಗಿದೆ ಎಂದರು.ಪಟ್ಟಣದಲ್ಲಿ ನಡೆಯುವ ಅಪರಾಧಗಳ ನಿಯಂತ್ರಣದ ಸಲುವಾಗಿ ಸಿಸಿ ಟಿವಿ ಅಳವಡಿಕೆ, ರಥಬೀದಿಯಲ್ಲಿ 1 ಕೋಟಿ ರು. ವೆಚ್ಚದ ವಾಣಿಜ್ಯ ಕಟ್ಟಡ, ವಿಕಲಚೇತನರಿಗೆ ವಸತಿ ಗೃಹ ಹಿಂದೂ ರುದ್ರಭೂಮಿಯಲ್ಲಿ ಸ್ನಾನಗೃಹ ನಿರ್ಮಾಣ, 1.50 ಕೋಟಿ ವೆಚ್ಚದಲ್ಲಿ ಶೀಬಿನಕೆರೆ ಕೆರೆ ಅಭಿವೃದ್ದಿ, ಈಜುಕೊಳ ನಿರ್ಮಾಣ,ಬಡ ವಿಧ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್, ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯ ನಾಗರಿಕರಿಗೆ ಔಷಧ ಸಹಾಯಧನ, ಫುಡ್ ಕೋರ್ಟ್ ನಿರ್ಮಾಣಕ್ಕೆ 1.00 ಕೋಟಿ, ಮಾನವ ತ್ಯಾಜ್ಯ ಕಲ್ಮಶಗಳ ಸಂಸ್ಕರಣೆ ಘಟಕ ಮತ್ತು ನಿರ್ವಹಣೆ 3 ಕೋಟಿ ರು., ಆಶ್ರಯ ನಿವೇಶನ ಖರೀದಿಗೆ 3.50 ಕೋಟಿ ರು.ಕಾದಿರಿಸಲಾಗಿದೆ ಎಂದರು.
ಹಿರಿಯ ಬಿಜೆಪಿ ಸದಸ್ಯ ಸಂದೇಶ್ ಜವಳಿ, ಬಿಜೆಪಿ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಮುಂಗಡ ಪತ್ರವನ್ನು ಸಮರ್ಥಿಸಿ ಉಪಾಧ್ಯಕ್ಷೆ ಗೀತಾ ರಮೇಶ್, ಕಾಂಗ್ರೆಸ್‍ನ ರಾಘವೇಂದ್ರ ಶೆಟ್ಟಿ, ಬಿ.ಗಣಪತಿ ಮಾತನಾಡಿದರು.ಅಧ್ಯಕ್ಷ ರತ್ನಾಕರ ಶೆಟ್ಟಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಇತರರು ಇದ್ದರು.