ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಗೀತಾ ರಮೇಶ್ ಅಧ್ಯಕ್ಷತೆಯಲ್ಲಿ ಗುರುವಾರ ಮಂಡಿಸಲಾದ ಪಟ್ಟಣ ಪಂಚಾಯಿತಿಯ 2024-25 ಸಾಲಿನ 13,66,587 ರು.ಗಳ ಉಳಿತಾಯ ಮುಂಗಡ ಪತ್ರವನ್ನು ಪ್ರತಿಪಕ್ಷದ ವಿರೋಧದ ನಡುವೆಯೇ ಅಂಗಿಕರಿಸಲಾಗಿದೆ.ಮುಂಗಡ ಪತ್ರವನ್ನು ಮಂಡಿಸಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಿದ್ಧಪಡಿಸಲಾಗಿರುವ ಕಾರ್ಯ ಯೋಜನೆಗೆ ಎಲ್ಲರ ಸಹಕಾರವನ್ನು ಕೋರಿದ ಅಧ್ಯಕ್ಷರು ಆರಂಭದ ಶಿಲ್ಕು 11,46,40,723 ರೂ ಆಗಿದ್ದು, 2024-25ನೇ ಸಾಲಿನಲ್ಲಿ ಸರ್ಕಾರದ ಅನುದಾನ ಮತ್ತು ಪ.ಪಂ.ಯ ವಿವಿಧ ಆದಾಯ ಮೂಲದಿಂದ 22,39,6500 ಆದಾಯವನ್ನು ನಿರೀಕ್ಷಿಸಲಾಗಿದೆ. ನಿರೀಕ್ಷಿತ ಆದಾಯದಲ್ಲಿ 33,72,39,723 ಕೋಟಿ ವೆಚ್ಚದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷದ ಸದಸ್ಯರು ಆಯವ್ಯಯ ಪತ್ರದ ಅಂಕಿ ಅಂಶಗಳು ಸೇರಿದಂತೆ ಯೋಜಿತ ಉದ್ದೇಶಗಳು ವಾಸ್ತವತೆಗೆ ದೂರವಾಗಿದೆ ಎಂದು ದೂರಿದರು. ಮುಂಗಡ ಪತ್ರದ ಬಗ್ಗೆ ಆಡಳಿತ ಪಕ್ಷದ ಸದಸ್ಯರು ಸಾಮಾಜಿಕ ನ್ಯಾಯ ಮತ್ತು ಬದ್ಧತೆಯೊಂದಿಗೆ ಅಭಿವೃದ್ಧಿಯಿಂದ ಕೂಡಿದ್ದು, ಮಾದರಿ ಆಯವ್ಯಯವಾಗಿದೆ ಎಂದೂ ಪ್ರಶಂಸೆ ವ್ಯಕ್ತಪಡಿಸಿದರು.ಮುಂಗಡ ಪತ್ರವನ್ನು ಸಮರ್ಥಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಮಹಿಳಾ ಆದ್ಯಕ್ಷರ ಕಳಕಳಿ ಮತ್ತು ಚಿಂತನೆಯಲ್ಲಿ ಮಂಡಿಸಲಾದ ಬಜೆಟ್ ಮಾದರಿ ಯಾಗಿದ್ದು, ಇದರಲ್ಲಿ ತುಳಿತಕ್ಕೊಳಗಾದ ವರ್ಗದ ಹಿತವನ್ನು ಬಯಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಬದ್ಧತೆ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಇದು ಮಾದರಿಯಾಗಿದೆ ಎಂದರು. ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ ಸೇರಿದಂತೆ ಆಡಳಿತ ಪಕ್ಷದ ಎಲ್ಲ ಸದಸ್ಯರು ದನಿಗೂಡಿಸಿದರು.
ಆದಾಯ: ಪ್ರಮುಖವಾಗಿ ರಾಜ್ಯ ಸರ್ಕಾರದ ಎಸ್‍ಎಫ್‍ಸಿ ವಿಶೇಷ ಅನುದಾನದ 2.50 ಕೋಟಿ, ಕೇಂದ್ರ ಸರ್ಕಾರದ ಸ್ವಚ್ಚ ಭಾರತ್ ಮಿಷನ್ ಅನುದಾನ 25.00 ಲಕ್ಷ, ಸಣ್ಣ ನೀರಾವರಿ ಇಲಾಖೆಯಿಂದ 50.00 ಲಕ್ಷ, ಪ.ಪಂ. ನಿವೇಶನಗಳ ಮಾರಾಟದಿಂದ 4.00 ಕೋಟಿ ರು., ಪಪಂ ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ 95.00 ಲಕ್ಷ ರೂ, ಆಸ್ತಿ ತೆರಿಗೆ, ಖಾತಾ ವರ್ಗಾವಣೆಯಿಂದ 1.90 ಕೋಟಿ, ರಾಜ್ಯ ಸರ್ಕಾರದಿಂದ ವಿದ್ಯುಚ್ಚಕ್ತಿ ಬಿಲ್ ಪಾವತಿ 1.58 ಕೋಟಿ, 24/7 ಕುಡಿಯುವ ನೀರು ಸಂಬಂಧಿತ ಇತರೆ ಬಾಬ್ತಿನಿಂದ 1.00 ಕೋಟಿ ರು., 15 ನೇ ಹಣಕಾಸು ಯೋಜನೆಯಡಿ 57.00 ಲಕ್ಷ ರು.ಗಳನ್ನು ನಿರೀಕ್ಷಿಸಲಾಗಿದೆ.ಉದ್ದೇಶ: ಮಹಿಳಾ ರೋಗಿಗಳ ಅನುಕೂಲದ ಸಲುವಾಗಿ 25 ಲಕ್ಷ ರು. ವೆಚ್ಚದಲ್ಲಿ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ವಾತ್ಸಲ್ಯ ವಿಶ್ರಾಂತಿ ಕೊಠಡಿ ನಿರ್ಮಾಣ, ಬೀಡಾಡಿ ಜಾನು ವಾರು ಮತ್ತು ಬೀದಿ ನಾಯಿಗಳ ನಿಯಂತ್ರಣ ಹಾಗೂ ಶುಶ್ರೂಷೆ ಸಲುವಾಗಿ ಪುಣ್ಯಕೋಟಿ ಹೆಸರಿನಲ್ಲಿ 10.00 ಲಕ್ಷ, ವಿಶೇಷ ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ಖರೀದಿಗೆ 8.00 ಲಕ್ಷ, ಸ್ತ್ರೀ ಶಕ್ತಿ ಸಂಘದ ಸಾಮಾಜಿಕ ಚಟುವಟಿಕೆಗೆ 10.00 ಲಕ್ಷ ರು.ಗಳನ್ನು ಮೀಸಲಾಗಿರಿಸಿದೆ.ಮುಖ್ಯಾಧಿಕಾರಿ ಕುರಿಯ ಕೋಸ್, ಸದಸ್ಯರುಗಳಾದ ಶಬನಂ, ಸುಶೀಲಾ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಯತಿರಾಜ್, ಜ್ಯೋತಿ ಮೋಹನ್, ರತ್ನಾಕರ ಶೆಟ್ಟಿ, ಮಂಜುಳಾ ನಾಗೇಂದ್ರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಉದ್ದೇಶಿತ ಪ್ರಮುಖ ಯೋಜನೆಗಳುವಿದ್ಯಾವಂತ ಯುವಕ ಯುವತಿಯರ ಉದ್ಯೋಗ ಅವಕಾಶ ಕಲ್ಪಿಸಲು ಬೆಟ್ಟಮಕ್ಕಿಯಲ್ಲಿರುವ ಬಿಪಿಓ ವಿಸ್ತರಣಾ ಕಟ್ಟಡ ನಿರ್ಮಾಣಕ್ಕೆ 50.00 ಲಕ್ಷ ರು., ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆಗೆ 45.00 ಲಕ್ಷ ರು., ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸಲುವಾಗಿ ಮನೆಗಳಿಗೆ ಡಸ್ಟ್ ಬಿನ್ ವಿತರಣೆ ಮತ್ತು ಕಸ ವಿಲೇವಾರಿ ವಾಹನ ಖರೀದಿಗೆ ಒಟ್ಟು 28.00 ಲಕ್ಷ ರು.,ಪಟ್ಟಣದಲ್ಲಿ ವಾಹನಗಳ ನಿಲುಗಡೆಗೆ ಪೇಪಾರ್ಕ್ ವ್ಯವಸ್ಥೆಗೆ 15.00 ಲಕ್ಷ ರು. ಮತ್ತು ಸಾರ್ವಜನಿಕರಿಗಾಗುವ ಅನಾನು ಕೂಲವನ್ನು ತಪ್ಪಿಸಲು ಆಧುನಿಕ ತಂತ್ರಾಂಶ ವ್ಯವಸ್ಥೆಗೆ 15.00 ಲಕ್ಷ ರು., ಮಾನವ ದಿನಗಳನ್ನು ಕಡಿತಗೊಳಿಸಿ ಅತ್ಯಾಧುನಿಕವಾದ ರಸ್ತೆ ಸ್ವಚ್ಛತೆ ಯಂತ್ರ ಖರೀದಿಗೆ 15.00 ಲಕ್ಷ ರು.ಗಳನ್ನು ಮುಂಗಡ ಪತ್ರದಲ್ಲಿ ಕಾಯ್ದಿರಿಸಲಾಗಿದೆ.
ವಾಸ್ತವಿಕತೆಗೆ ದೂರವಾದ ಬಜೆಟ್ಇನ್ನು, ಮುಂಗಡ ಪತ್ರ ವಾಸ್ತವಿಕತೆಗೆ ದೂರವಾಗಿದೆ ಎಂದು ಟೀಕಿಸಿದ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಈ ಮುಂಗಡ ಪತ್ರದಿಂದ ನಿರೀಕ್ಷಿತ ಆದಾಯ ಅಸಾಧ್ಯ. ಕಳೆದ ಎರಡು ವರ್ಷಗಳಿಂದ ತೆರಿಗೆಯನ್ನು ಯಾಕೆ ಕ್ರಮಬದ್ಧವಾಗಿ ವಸೂಲಿ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು. ಮುಂಗಡ ಪತ್ರದಲ್ಲಿ ಹೇಳಲಾದ ಆದಾಯದ ಮೂಲವನ್ನು ಪ್ರಶ್ನಿಸಿದ ಮತ್ತೊಬ್ಬ ಸದಸ್ಯ ಸಂದೇಶ್ ಜವಳಿ, ಮುಂಗಡ ಪತ್ರ ತಯಾರಿಯಲ್ಲೇ ಎಡವಿದ್ದೀರಿ. ಅಂಕಿ ಅಂಶಗಳಲ್ಲೇ ತಪ್ಪುಗಳಿವೆ. ರಾಜಸ್ವ ನಿರೀಕ್ಷೆ ವಾಸ್ತವತೆಗೆ ದೂರವಾಗಿದೆ ಎಂದರು.