ಸಾರಾಂಶ
ರಾಣಿಬೆನ್ನೂರು: ಬೀದಿ ನಾಯಿಗಳ ಹಾವಳಿ ತಪ್ಪಿಸಿ. ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣ ವರೆಗಿನ ರಸ್ತೆಯಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಬೇಕು. ಸಿಎ ಸೈಟ್‌ಗಳ ರಕ್ಷಣೆ ಮಾಡಬೇಕು. ಕಳ್ಳತನ ಪ್ರಕರಣ ನಿಯಂತ್ರಣಕ್ಕೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಎಲ್ಲ ಬಡಾವಣೆಗಳಲ್ಲಿ ವಿದ್ಯುತ್ ದೀಪ ಅಳವಡಿಸಿ. ಮುನ್ಸಿಪಲ್ ಹೈಸ್ಕೂಲ್ ಅಭಿವೃದ್ಧಿಪಡಿಸಿಬೇಕು. ಶುದ್ಧ ಕುಡಿಯುವ ನೀರು ಘಟಕ ದುರಸ್ತಿಪಡಿಸಿಬೇಕು!
ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ನಗರಸಭೆ ಆಯುಕ್ತರ ಎದುರು ಬೇಡಿಕೆ ಇಟ್ಟರು.ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ೨೦೨೫-೨೬ನೇ ಸಾಲಿನ ಆಯವ್ಯಯ ಪೂರ್ವ ಸಿದ್ಧತೆ ಸಭೆಯಲ್ಲಿ ಪಾಲ್ಗೊಂಡ ಸ್ಥಳೀಯ ನಾಗರಿಕರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದರು.
ನಗರಸಭೆ ಸದಸ್ಯ ನೂರವುಲ್ಲಾ ಖಾಜಿ ಮಾತನಾಡಿ, ನಗರದಲ್ಲಿ ಹಂದಿ ಮತ್ತು ನಾಯಿಗಳ ಕಾಟದಿಂದ ಮಕ್ಕಳನ್ನು ಹೊರಗಡೆ ಬಿಡಲು ಆಗದ ದುಸ್ಥಿತಿ ಎದುರಾಗಿದೆ. ಇದಕ್ಕಾಗಿ ನಗರಸಭೆಯಿಂದ ಹಣ ಖರ್ಚಾಗುತ್ತಿದೆ ಹೊರತು ಹಂದಿ, ನಾಯಿಗಳ ಕಾಟ ಕಡಿಮೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಫಕ್ಕೀರಪ್ಪ ಇಂಗಳಗಿ, ನ್ಯಾಯಾಲಯದ ಆದೇಶದ ಪ್ರಕಾರ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಆದರೆ, ಅವುಗಳನ್ನು ಕೊಲ್ಲುವುದು ಹಾಗೂ ಸ್ಥಳಾಂತರಿಸಲು ಬರುವುದಿಲ್ಲ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಕಾರ್ಯಾಚರಣೆ ಮಾಡಲಾಗುವುದು ಎಂದರು.ಪ್ರಭಾವತಿ ತಿಳವಳ್ಳಿ ಮಾತನಾಡಿ, ಸಿಎ ಸೈಟ್‌ಗಳನ್ನು ಗುರುತಿಸಿ ಬೇಲಿ ಹಾಕಬೇಕು. ಇಲ್ಲವಾದರೆ ಸೈಟುಗಳು ಅತಿಕ್ರಮಣವಾಗಿ ನಗರಸಭೆ ಆಸ್ತಿ ನಷ್ಟವಾಗಲಿದೆ. ವಿದ್ಯುತ್ ಖರ್ಚು ಉಳಿಸಲು ಸೋಲಾರ್ ಪ್ಯಾನಲ್ ಹಾಕಬೇಕು. ಇದರಿಂದ ನಗರಸಭೆಗೆ ವರ್ಷಕ್ಕೆ ₹೪ ಲಕ್ಷ ಉಳಿತಾಯವಾಗಲಿದೆ ಎಂದರು.
ಮಲ್ಲಣ್ಣ ಅಂಗಡಿ ಮಾತನಾಡಿ, ಸಭೆಗೆ ಜಿಲ್ಲಾಧಿಕಾರಿ ಬರುತ್ತಾರೆ ಎಂದು ಹೇಳಿದ್ದೀರಿ. ಅವರು ಅಧ್ಯಕ್ಷರಾದ ಬಳಿಕ ಒಮ್ಮೆಯೂ ಬಂದಿಲ್ಲ. ಹೀಗಾದರೆ, ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಬೇಕು. ಎಲ್ಲ ವಾರ್ಡ್‌ಗಳಿಗೆ ವಿದ್ಯುತ್ ದೀಪ ನೀಡಿ, ಸದ್ಯ ಹಾಳಾಗಿರುವ ದೀಪಗಳನ್ನು ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದರು.ರಕ್ಷವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣ ವರೆಗೆ ಮಹಿಳೆಯರಿಗೆ ಶೌಚಾಲಯ, ಬಸ್ ನಿಲ್ದಾಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಗರದ ಕೋಟೆ ಓಣಿ ಬಳಿಯಿರುವ ಬ್ರಾಹ್ಮಣ ಸಮಾಜದ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲ. ಇದಕ್ಕೆ ದಾರಿ ವ್ಯವಸ್ಥೆ ಮಾಡಬೇಕು. ತಾಪಂ ಎದುರಿಗೆ ಇರುವ ಶೌಚಾಲಯಕ್ಕೆ ಕಾಲಿಡಲು ಆಗಲ್ಲ. ಅದನ್ನು ಬಂದ್ ಮಾಡಿ ತಾಪಂ ಆವರಣದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಮೈಲಪ್ಪ ದಾಸಪ್ಪನವರ ಮಾತನಾಡಿ, ನಗರದ ಎಲ್ಲ ವೃತ್ತಗಳನ್ನು ಅಭಿವೃದ್ಧಿ ಪಡಿಸಬೇಕು. ಮಾಸೂರು-ಮುಂಡರಗಿ ತೆರಳುವ ರಸ್ತೆ ಮಾರ್ಗದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದರು.ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಬಡವರ ಅನುಕೂಲಕ್ಕಾಗಿ ನಗರಸಭೆಯಿಂದ ಮುಕ್ತಿ ವಾಹನ ಕೊಡಬೇಕು. ಇ-ಸ್ವತ್ತು ಕೊಡಲು ಆರು ತಿಂಗಳು ಕಾಯಿಸುತ್ತಿದ್ದಾರೆ. ಅದನ್ನು ತ್ವರಿತವಾಗಿ ಆನ್‌ಲೈನ್ ಮೂಲಕ ಕೊಡುವ ವ್ಯವಸ್ಥೆ ಮಾಡಬೇಕು. ನಗರದ ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ಅಗಲೀಕರಣ ಮಾಡಬೇಕು ಎಂದರು.
ಕೊನೆಯಲ್ಲಿ ಮಾತನಾಡಿದ ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ, ರಾಣಿಬೆನ್ನೂರನ್ನು ಮಾದರಿ ನಗರ ಮಾಡುವ ದೃಷ್ಟಿಯಿಂದ ಸಾರ್ವಜನಿಕರು, ಸದಸ್ಯರು ಸೂಚಿಸಿದ ಸಲಹೆಗಳನ್ನು ಸ್ವೀಕರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಬಜೆಟ್ ಸಿದ್ಧಪಡಿಸಲಾಗುವುದು ಎಂದರು.ನಗರಸಭೆ ಎಇಇ ಎಸ್.ಬಿ. ಮರಿಗೌಡ್ರ, ಲೆಕ್ಕಾಧಿಕಾರಿ ವಾಣಿಶ್ರೀ ಹಾಗೂ ಸದಸ್ಯರು, ಅಧಿಕಾರಿಗಳು ಮತ್ತಿತರರು ಸಭೆಯಲ್ಲಿದ್ದರು.