ಹೊನ್ನಾವರ ಎಸ್‌ಡಿಎಂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ

ಕನ್ನಡಪ್ರಭ ವಾರ್ತೆ ಹೊನ್ನಾವರ

ಯಶಸ್ಸನ್ನು ಪಡೆಯಬೇಕು ಎನ್ನುವವರಿಗೆ ಜ್ಞಾನದ ಹಸಿವಿರಬೇಕು. ತಮ್ಮಲ್ಲಿದ್ದ ಜ್ಞಾನವನ್ನು ಬೇರೆಯವರಿಗೆ ಹಂಚಿದರೆ ನಮ್ಮ ಜ್ಞಾನ ಇನ್ನಷ್ಟು ಹೆಚ್ಚಾಗುವುದು ಎಂದು ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ಯಾಧರ ರಾವ್ ಜಲವಳ್ಳಿ ಹೇಳಿದರು.

ಪಟ್ಟಣದ ಎಂಪಿಇ ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜಿನ ಡಾ. ಎನ್.ಆರ್. ನಾಯಕ್ ಬಯಲು ರಂಗ ಮಂದಿರದಲ್ಲಿ ನಡೆದ ಎಸ್.ಡಿ.ಎಂ. ಕಾಲೇಜಿನ 2025-26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಶಿಲೆಯೊಂದು ಶಿಲ್ಪವಾಗಿ ಬದಲಾಗಬೇಕಾದರೆ ಅದು ಶಿಲ್ಪಿಯ ಕೈಗೆ ಸಿಗಬೇಕು. ಅಂದಾಗ ಮಾತ್ರ ಶಿಲೆ ಸಹ ದೇವರಾಗಿ ಮಾರ್ಪಾಡಾಗುತ್ತದೆ. ನಾವು ಜೀವನದಲ್ಲಿ ಕಳೆದುಕೊಂಡ ವಸ್ತುಗಳನ್ನು ಪ್ರಯತ್ನದಿಂದ ಮತ್ತೆ ಪಡೆಯಬಹುದು. ಆದರೆ ಸಮಯವನ್ನು ನಾವು ಮತ್ತೆ ಪಡೆಯಲು ಸಾಧ್ಯವಿಲ್ಲ. ಸಮಯಕ್ಕೆ ನಾವು ಕೈಗೊಂಬೆಯಾಗದೆ ಸಮಯವನ್ನು ಸಾಧನೆಯನ್ನು ಮಾಡಲು ಬಳಸಿಕೊಳ್ಳುವುದು ಉತ್ತಮ ಎಂದು ಹೇಳಿದರು.

ಶಿಸ್ತು, ಸಂಯಮ, ತಾಳ್ಮೆ, ಆಸಕ್ತಿ, ಶ್ರದ್ಧೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ವಿಶ್ವವಿದ್ಯಾಲಯ ನೀಡುವ ಪದವಿ ಕೇವಲ ಒಂದು ಹಂತಕ್ಕೇರಲು ಅಷ್ಟೆ ಎನ್ನುವುದನ್ನು ಅರ್ಥ ಮಾಡಿಕೊಂಡಿರಬೇಕು. ಆದರೆ ವಿಶ್ವ ಎಂಬ ವಿದ್ಯಾಲಯ ನೀಡುವ ವಿದ್ಯೆ ಅತ್ಯಂತ ಮಹತ್ವದ್ದು. ನಾವು ಸಮಾಜದ ಜತೆ ಇರುವುದನ್ನು ಕಲಿಸುತ್ತದೆ. ಸಮಾಜಕ್ಕೆ ಏನಾದರೂ ಕೊಡಲು ಸಮಾಜ ನನಗೇನು ಕೊಟ್ಟಿದೆ ಎಂದು ಕೇಳುತ್ತಾರೆ. ಆದರೆ ಸಮಾಜ ನಮಗೆ ಏನು ಕೊಟ್ಟಿದೆ ಎಂದು ಕೇಳುವುದು ಅಧಿಕ ಪ್ರಸಂಗವಾಗುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.


ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಿ.ಡಿ. ಭಟ್ಟ ಮಾತನಾಡಿ, ನಮ್ಮ ಆಚರಣೆಗಳು ನಮ್ಮನ್ನು ಮೇಲ್ಮಟ್ಟಕ್ಕೆ ಏರಿಸುತ್ತದೆ. ಅವಕಾಶಗಳು ನಮಗೆ ಬೇಕಾದಷ್ಟು ಸಿಗುತ್ತದೆ. ಆದರೆ ಅದನ್ನು ಸದುಪಯೋಗ ಪಡಿಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು ಎಂದು ಹೇಳಿದರು.

ಎಂಪಿಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ, ವಿದ್ಯಾರ್ಥಿಗಳು ಶಿಕ್ಷಕರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದರು.

ಕಾಲೇಜಿನ ಪೂರ್ವ ವಿದ್ಯಾರ್ಥಿ ಚಂದ್ರಶೇಖರ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ. ಜಿ.ಎನ್. ಭಟ್ ಅಧ್ಯಕ್ಷತೆ ವಹಿಸಿದ್ದರು.

ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಇದೇ ವೇಳೆ ಕಾಲೇಜಿನ ವಾರ್ಷಿಕ ಸಂಚಿಕೆ ಶರಾವತಿ ಪುಸ್ತಕ ಬಿಡುಗಡೆಗೊಳಿಸಲಾಯಿತು. ಯೂನಿಯನ್ ಸಲಹೆಗಾರ ಡಾ. ಸುರೇಶ್ ಎಸ್. ಸ್ವಾಗತಿಸಿದರು. ವಿದ್ಯಾರ್ಥಿ ಒಕ್ಕೂಟದ ಉಪಾದ್ಯಕ್ಷ ಡಾ. ಎಂ.ಜಿ. ಹೆಗಡೆ ವರದಿ ವಾಚಿಸಿದರು. ಕ್ರೀಡಾ ಸಲಹೆಗಾರ ಆರ್.ಕೆ. ಮೇಸ್ತ ಪರಿಚಯಿಸಿದರು.

ಕಲಾ ಕಾರ್ಯದರ್ಶಿ ಎಚ್. ಮನೋಜ್, ಒಳಾಂಗಣ ಕ್ರೀಡಾ ಕಾರ್ಯದರ್ಶಿ ವೆಂಕಟೇಶ್ ಭಟ್, ಹೊರಾಂಗಣ ಕ್ರೀಡಾ ಕಾರ್ಯದರ್ಶಿ ವಿಶಾಲ್ ಹೆಗಡೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಗೌಡ ವಂದಿಸಿದರು.