ಸಾರಾಂಶ
ರೈತರ ನಾನಾ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸಾಮೂಹಿಕ ನಾಯಕತ್ವದ ಗುಂಡ್ಲುಪೇಟೆ ತಾಲೂಕು ರೈತಸಂಘದ ಕಾರ್ಯಕರ್ತರು ಬೇಗೂರಿಂದ ಗುಂಡ್ಲುಪೇಟೆಗೆ ಬೈಕ್ ರ್‍ಯಾಲಿ ನಡೆಸಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರೈತರ ನಾನಾ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸಾಮೂಹಿಕ ನಾಯಕತ್ವದ ತಾಲೂಕು ರೈತಸಂಘದ ಕಾರ್ಯಕರ್ತರು ಬೇಗೂರಿಂದ ಗುಂಡ್ಲುಪೇಟೆಗೆ ಬೈಕ್ ರ್‍ಯಾಲಿ ನಡೆಸಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದರು. ತಾಲೂಕಿನ ಬೇಗೂರು ಬಳಿಯ ಬಂಡಿಗೆರೆ ಮಾದೇಶ್ವರಸ್ವಾಮಿ ದೇವಸ್ಥಾನದಿಂದ ಬೈಕ್ ರ್‍ಯಾಲಿಗೆ ಜಿಲ್ಲಾ ರೈತಸಂಘದ ಮುಖಂಡ ಹೊನ್ನೂರು ಪ್ರಕಾಶ್ ಬೈಕ್‌ಗಳಿಗೆ ಹಸಿರು ರುಮಾಲು ಬೀಸುವ ಮೂಲಕ ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು. ಮೈಸೂರು-ಊಟಿ ಹೆದ್ದಾರಿಯ ಗರಗನಹಳ್ಳಿ ಗೇಟ್ ಬಳಿ ರೈತರು ದಿಢೀರ್ ರಸ್ತೆತಡೆ ನಡೆಸಿ, ರಾಜ್ಯ,ಕೇಂದ್ರ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತಗಳ ವಿರುದ್ಧ ರೈತರು ಧಿಕ್ಕಾರದ ಘೋಷಣೆ ಮೊಳಗಿಸಿದರು. ನಂತರ ಗುಂಡ್ಲುಪೇಟೆ ಪಟ್ಟಣಕ್ಕೆ ಆಗಮಿಸಿದ ಜಾಥಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಚಾಮರಾಜನಗರ ರಸ್ತೆಯ ಟಿಪ್ಪು ಸರ್ಕಲ್ ನಂತರ ಎಂಸಿಡಿಸಿಸಿ ಬ್ಯಾಂಕ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ತಾಲೂಕು ಆಡಳಿತದ ವಿರುದ್ಧ ಧಿಕ್ಕಾರ ಕೂಗಿದರು.ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅನಮತಿ ನೆಪದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ತಾಲೂಕು ಆಡಳಿತ ಗಣಿಗಾರಿಕೆ ತಡೆಯುವ ಕೆಲಸ ಮಾಡುತ್ತಿಲ್ಲ. ಮತ್ತಷ್ಟು ಗಣಿಗಾರಿಕೆಗೆ ಅನುಮತಿ ನೀಡುತ್ತಿದೆ ಎಂದು ಆರೋಪಿಸಿದರು.
ಓಂಕಾರ ವಲಯದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮೀತಿ ಮೀರಿದೆ. ಕಾಡು ಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಸಬೂಬು ಹೇಳಿ ರೈತರನ್ನು ಕಳುಹಿಸುತ್ತಿದ್ದಾರೆ ಇದು ಆಗಬಾರದು ಎಂದು ಗುಡುಗಿದರು. ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.