ಸಾರಾಂಶ
ಹುಬ್ಬಳ್ಳಿ: ನಮ್ಮ (ಜೈನ ಸಮುದಾಯದ) ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಈ ವರೆಗೂ ಕ್ರಮ ಕೈಗೊಂಡಿಲ್ಲ. ಫೆ. 7ರೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಫೆ. 8ರಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವರೂರು ನವಗ್ರಹ ತೀರ್ಥಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಹೇಳಿದರು.
ತಾಲೂಕಿನ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.ಕಳೆದ ಜುಲೈ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನಮುನಿ ಹತ್ಯೆಯಾಗಿರುವುದನ್ನು ಖಂಡಿಸಿ ಹಾಗೂ ಜೈನ ಮುನಿಗಳಿಗೆ ರಕ್ಷಣೆ ನೀಡುವುದು ಸೇರಿದಂತೆ 4 ಪ್ರಮುಖ ಬೇಡಿಕೆ ಈಡೇರಿಸಲು ಒತ್ತಾಯಿಸಿ ಆಮರಣಾಂತ ಉಪವಾಸ ಕೈಗೊಳ್ಳಲಾಗಿತ್ತು. ಆಗ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿಯಾಗಿ ಎಲ್ಲ ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡಿದ್ದರು. ಅವರ ಮನವಿ ಮೇರೆಗೆ ಉಪವಾಸ ಕೈಬಿಟ್ಟಿದ್ದೆವು. ಆಗ ಕೊಟ್ಟ ಭರವಸೆ ಈ ವರೆಗೂ ಈಡೇರಿಸಿಲ್ಲ ಎಂದು ವಿಷಾಧಿಸಿದರು.
ಜೈನಮುನಿಗಳಿಗೆ ವೈಯಕ್ತಿಕ ಭದ್ರತೆ ನೀಡುವುದು. ಮುನಿಗಳ ಪಾದಯಾತ್ರೆ ನಡೆಸುವಾಗ ಸರ್ಕಾರಿ ಶಾಲಾ, ಕಾಲೇಜ್‌ಗಳ ಬಳಕೆಗೆ ಅವಕಾಶ ನೀಡಬೇಕು. ಜೈನ ಸಮಾಜಕ್ಕಾಗಿ ಪ್ರತ್ಯೇಕ ಆಯೋಗ ರಚನೆ ಮಾಡಬೇಕು. ಜೈನಮುನಿಗಳು ಪಾದಯಾತ್ರೆ ಕೈಗೊಂಡ ವೇಳೆ ತಂಗಲು ಬೇಕಾದ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವ್ಯವಸ್ಥೆ, ಜೈನರ ಆಯೋಗ ರಚನೆಗೆ ಕ್ರಮ ಕೈಗೊಂಡಿಲ್ಲ. ಒಂದು ತಿಂಗಳೊಳಗಾಗಿ ಬೇಡಿಕೆ ಈಡೇರಿಸುವುದಾಗಿ ತಿಳಿಸಿತ್ತು. ಆದರೆ, 6 ತಿಂಗಳಾದರೂ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡಿಲ್ಲ. ಈ ಕಾರಣದಿಂದ ಸರ್ಕಾರಕ್ಕೆ ಫೆ. 7ರ ವರೆಗೆ ಗಡುವು ನೀಡುತ್ತಿದ್ದು, ಬೇಡಿಕೆ ಈಡೇರದಿದ್ದಲ್ಲಿ ಫೆ. 8ರಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಆ ಪ್ರತಿಭಟನೆಯಲ್ಲಿ ಲಕ್ಷಕ್ಕೂ ಅಧಿಕ ಜೈನ ಸಮಾಜದವರು ಭಾಗವಹಿಸಲಿದ್ದಾರೆ ಎಂದರು.ರಾಮರಾಜ್ಯ ನಿರ್ಮಾಣವಾಗಲಿ
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಸ್ಥಾಪನೆಯಾಗುತ್ತಿರುವುದು ಸಂತಸ ತಂದಿದೆ. 500 ವರ್ಷಗಳ ಹೋರಾಟದ ಫಲವಾಗಿ ಇಂದು ಭವ್ಯವಾದ ಮಂದಿರ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕು ಎಂಬುದು ನಮ್ಮ ಬಯಕೆ ಎಂದು ವರೂರ ನವಗ್ರಹ ತೀರ್ಥಕ್ಷೇತ್ರದ ಗುಣಧರ ನಂದಿ ಮಹಾರಾಜರು ಹೇಳಿದರು.ಕಾರ್ಯಕ್ರಮಕ್ಕೆ ಕೆಲ ಮಠಾಧೀಶರನ್ನು ಆಹ್ವಾನಿಸಲು ತಾರತಮ್ಯ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈನ ಮುನಿಗಳು, ಈ ರೀತಿ ತಾರತಮ್ಯ ಮಾಡಿರುವುದಂತೆ ಕಾಣುತ್ತಿಲ್ಲ. ಈಗಾಗಲೇ ಹಲವು ಮಠಾಧೀಶರಿಗೆ, ಧರ್ಮಗುರುಗಳಿಗೆ, ಪ್ರಮುಖರಿಗೆ ಆಹ್ವಾನಿಸಲಾಗಿದೆ. ಹಾಗೆಯೇ ಹಲವು ಜೈನ ಮುನಿಗಳಿಗೂ ಆಹ್ವಾನ ನೀಡಿದ್ದು, ಅವರೆಲ್ಲರೂ ಈ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.