ಹಿಂದೂ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಜೀವನದ ಸಾರ್ಥಕತೆ ಪಡೆಯಲು ಧರ್ಮಾಚರಣೆ ಮಾಡಬೇಕು ಎಂದು ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ ನುಡಿದರು.

ತಾಲೂಕಿನ ಭರತನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಮಾವಿನಕಟ್ಟಾ ಮಂಡಳದ ಬೃಹತ್ ಹಿಂದೂ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹಿಂದೂ ಎಂದರೆ ಜಾತಿಯಲ್ಲ, ಅದೊಂದು ಸಂಸ್ಕೃತಿ. ಕೆಟ್ಟ ವಿಚಾರಗಳಿಂದ ದೂರ ಇರುವವನೇ ಹಿಂದೂ. ಧರ್ಮವನ್ನು ರಕ್ಷಿಸುವವರಿಗೆ ಧರ್ಮವೇ ರಕ್ಷಣೆ ನೀಡುತ್ತದೆ. ಹಾಗೆಯೇ ಧರ್ಮವನ್ನು ಆಚರಿಸದೇ ಇದ್ದವರನ್ನು ಧರ್ಮವೇ ನಾಶ ಮಾಡುತ್ತದೆ. ಮನುಷ್ಯನಿಗೆ ಮನರಂಜನೆಯೇ ಜೀವನವಲ್ಲ. ಅದರೊಂದಿಗೆ ಧರ್ಮಾಚರಣೆಯೂ ಅಗತ್ಯ ಎಂದರು.


ಯುವ ವಾಗ್ಮಿ ಹಾರಿಕಾ ಮಂಜುನಾಥ ದಿಕ್ಸೂಚಿ ಮಾಡಿ, ಪೂರ್ವಜರು ವೇದ, ಉಪನಿಷತ್ತು, ಪುರಾಣಗಳು ಆಚಾರ-ವಿಚಾರಗಳ ಮುಖಾಂತರ ನಮ್ಮ ಪರಂಪರೆ ಉಳಿಸಿದ್ದಾರೆ. ನಾವು ಅದನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಹಿಂದೂಗಳು ಒಗ್ಗಟ್ಟಾಗಿ ಬಾಳಬೇಕಿದೆ ಎಂದರು.

ಮಾವಿನಕಟ್ಟಾ ಮಂಡಳದ ವಿವಿಧ ಕ್ಷೇತ್ರಗಳ ಸಾಧಕರಾದ ಸುಬ್ರಮಣ್ಯ ಭಟ್ಟ, ಹುಲಿಯಾ ಮರಾಠಿ, ಶ್ರೀಪಾದ ಕೊಡಿಯಾ, ಕೊಂಡುಬಾಯಿ ದಾವು ಬೋರೆ, ಚಂದ್ರಕಾಂತ ಶೇಟ್, ಸಿದ್ದೇಶ್ವರ ಠಕ್ಕು ಮರಾಠಿ, ನಾರಾಯಣ ಕೊಡಿಯಾ ಅವರನ್ನು ಸನ್ಮಾನಿಸಲಾಯಿತು.

ಹಿಂದೂ ಸಮಾಜೋತ್ಸವದ ಸಮಿತಿ ಅಧ್ಯಕ್ಷ ಗಣಪತಿ ಹೆಗಡೆ ಬಾಳೆಕೊಪ್ಪ, ಗೌರವಾಧ್ಯಕ್ಷ ಹೇರಂಭ ಹೆಗಡೆ, ಉಪಾಧ್ಯಕ್ಷರಾದ ನಿರ್ಮಲಾ ನಾಯ್ಕ, ನರಸಿಂಹ ನಾಯ್ಕ ಇದ್ದರು. ನಟರಾಜ ಗೌಡರ್, ವಿನಾಯಕ ಭಟ್ಟ, ಕುಮಾರ ಗೌಡರ್ ಸತೀಶ ಹೆಗಡೆ ನಿರ್ವಹಿಸಿದರು. ಇದಕ್ಕೂ ಮುನ್ನ ಮಲ್ಲಿಕಾರ್ಜುನ ದೇವಸ್ಥಾನದಿಂದ ಭ್ರಮರಾಂಬಾ ದೇವಸ್ಥಾನದ ಮೂಲಕ ವೇದಿಕೆಯವರೆಗೆ ಶೋಭಾಯಾತ್ರೆ ನಡೆಯಿತು.