ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮತ್ತು ಭ್ರಷ್ಟಾಚಾರದ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಪಕ್ಷವು ವಕ್ಫ್ ಬೋರ್ಡ್ ಆಸ್ತಿ ವಿವಾದ ಮುನ್ನೆಲೆಗೆ ತಂದು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಶಾಸಕ ಬಿ.ಪಿ.ಹರೀಶ್ ಆರೋಪಿಸಿದರು.ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಗಾಂದಿ ಪ್ರಧಾನಿಯಾಗಿದ್ದಾಗ ಅನೇಕ ಭ್ರಷ್ಟಾಚಾರ ಹಗರಣದ ಸುಳಿಯಲ್ಲಿ ಸಿಲುಕಿದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಲ್ಲದೆ, ವಕ್ಫ್ ಬೋರ್ಡ್ ಆಸ್ತಿಗಳ ಗೆಜೆಟ್ ನೋಟಿಫಿಕೇಶನ್ ಮಾಡುವುದನ್ನು ಜಾರಿಗೊಳಿಸಿದ್ದರು. ಅದೆ ರೀತಿ ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಹಗರಣ, ಮೂಡಾ ಹಗರಣ ಮರೆಮಾಚಲು ವಕ್ಫ್ ಬೋರ್ಡ್ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಹೇಳಿದರು.
ಪ್ರಮಾಣಿಕವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೆ, ವಿದೇಶಿಯರ ಓಲೈಕೆಯಲ್ಲಿ ತೊಡಗಿದ್ದ ನೆಹರೂ ಮನೆತನ ಸ್ವಾತಂತ್ರ್ಯಾನಂತರ ದೇಶದ ಪ್ರಧಾನಿ ಹುದ್ದೆ ಏರಿರುವುದು ದುರದೃಷ್ಟಕರ. ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ಬಹುಸಂಖ್ಯಾತ ಹಿಂದುಗಳಿಗೆ ಒಂದಿಲ್ಲೊಂದು ತೊಂದರೆ ಕೊಡುತ್ತಲೆ ಬಂದಿದೆ ಎಂದು ಹೇಳಿದರು.ಮುಸ್ಲಿಂಮರ ಓಲೈಕೆ ಮನಸ್ಥಿತಿ ಹೊಂದಿರುವ ಸಿದ್ದರಾಮಯ್ಯ ವಿಜಯಪುರ, ಹಾವೇರಿ, ಕೊಪ್ಪಳ ಸೇರಿದಂತೆ ಅನೇಕ ಜಿಲ್ಲೆಗಳ ರೈತರ ಜಮೀನುಗಳು, ದೇವಸ್ಥಾನಗಳು, ಮಠ ಮಾನ್ಯಗಳ ಆಸ್ತಿಯನ್ನು ವಕ್ಫ್ ಬೋರ್ಡ್‍ಗೆ ಕೊಡಿಸುವ ಹುನ್ನಾರ ನಡೆಸಿದ್ದಾರೆ. ರಾಜ್ಯಾದ್ಯಂತ ರೈತರು ಭಯದಲ್ಲಿದ್ದಾರೆ. ಆದರೆ ವಕ್ಫ್ ಬೋರ್ಡ್ ರೈತರ ಒಂದಿಂಚು ಜಾಗವನ್ನೂ ಕಬಳಿಸಲು ಬಿಜೆಪಿ ಅವಕಾಶ ನೀಡುವುದಿಲ್ಲ. ರೈತರು ಹೆದರಬೇಕಿಲ್ಲ ಎಂದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಹಿಂದೆ, ಭ್ರಷ್ಟ ಅಲ್ಪಸಂಖ್ಯಾತ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕಬಳಿಸಿದ್ದ ವಕ್ಫ್ ಬೋರ್ಡ್ ಆಸ್ತಿಯನ್ನು ಹಿಂಪಡೆಯಲು ಸಲಹೆ ನೀಡಿದ್ದನ್ನೆ, ಕಾಂಗ್ರೆಸ್ ತಿರುಚಿ ಪ್ರಚಾರ ಮಾಡುತ್ತಿದೆ. ಆದರೆ ಬಿಜೆಪಿ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಿ ಜನರಿಗೆ ಸತ್ಯವನ್ನು ತಿಳಿಸಲಿದೆ. ಕೇಂದ್ರ ಸರ್ಕಾರದ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಲು ಕಾಂಗ್ರೆಸ್ ವಕ್ಫ್ ವಿವಾದ ಸೃಷ್ಟಿಸಿದೆ ಎಂದರು.ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ, ನಗರ ಸೇರಿದಂತೆ ತಾಲೂಕಿನಾದ್ಯಂತ ರಸ್ತೆಗಳು ಕಿತ್ತುಹೋಗಿವೆ. ಸೇತುವೆಗಳು ಮುರಿದು ಬಿದ್ದಿವೆ. ನಾಲೆಗಳಲ್ಲಿ ನೀರು ತುಂಬಿದೆ. ಆದರೆ ಈ ಯಾವ ಅಭಿವೃದ್ಧಿ ಕಾಮಗಾರಿ ನಡೆಸಲೂ ಸರ್ಕಾರದ ಬಳಿ ಹಣವಿಲ್ಲ. ಎಲ್ಲಾ ಗ್ಯಾರಂಟಿಗಳಿಗೆ ಖಾಲಿಯಾಗುತ್ತಿದೆ. ಗ್ಯಾರಂಟಿ ಯೋಜನೆ ಜಾರಿಯಲ್ಲೂ ಸರ್ಕಾರ ಮಾತು ತಪ್ಪಿದೆ ಎಂದರು.
ತಾಲೂಕಿನಲ್ಲಿ ವಕ್ಫ್ ಆಸ್ತಿ ಎಷ್ಟಿದೆ ಎಂದು ಮಾಹಿತಿ ನೀಡಲು ತಹಸೀಲ್ದಾರ್ ಅವರನ್ನು ಕೇಳಲಾಗಿದ್ದು, ವರದಿ ನೀಡಿದ ನಂತರ ಪರಿಶೀಲಿಸಲಾಗುವುದು ಎಂದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಎಚ್.ಮಂಜನಾಯ್ಕ, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ್, ರಾಜು ರೋಖಡೆ, ನಗರಸಭಾ ಸದಸ್ಯ ಆಟೋ ಹನುಮಂತಪ್ಪ, ಮಹಂತೇಶ್ ಆದಪುರ್, ಪರಶುರಾಮ್ ಕಾಟ್ವೆ, ಬಾತಿ ಚಂದ್ರಶೇಖರ್ ಇತರರಿದ್ದರು.