ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹೇಮಾವತಿ ಎಡದಂಡೆ ನಾಲೆಗೆ ಬೇಸಿಗೆ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿ, 54ನೇ ವಿತರಣಾ ನಾಲೆಯ ಕಳಪೆ ಕಾಮಗಾರಿ ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪಟ್ಟಣದ ಎಚ್.ಎಲ್.ಬಿ.ಸಿ ನಂ 03 ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿ ಧರಣಿ ಸತ್ಯಾಗ್ರಹ ನಡೆಸಿದ ಕಾರ್ಯಕರ್ತರು ಭ್ರಷ್ಟ ಎಂಜಿನಿಯರುಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.
ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಹೇಮಾವತಿ ಜಲಾಶಯದಲ್ಲಿ ಪೂರ್ಣ ಪ್ರಮಾಣದ ನೀರಿದೆ. ಕೃಷಿ ಚಟುವಟಿಕೆಗಳಿಗೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಇದುವರೆಗೂ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಆರ್‌ಎಸ್ ಜಲಾನಯನ ಪ್ರದೇಶದ ರೈತರಿಗೆ ಬೇಸಿಗೆ ಬೆಳೆಗೆ ನೀರು ಹರಿಸಿದ ರಾಜ್ಯ ಸರ್ಕಾರ ಹೇಮಾವತಿ ಜಲಾನಯನ ಪ್ರದೇಶದ ರೈತರ ಬಗ್ಗೆ ತನ್ನ ಕಾಳಜಿ ಪ್ರದರ್ಶಿಸಿಲ್ಲ. ಹೇಮಾವತಿ ಜಲಾಶಯದ ಎಡದಂಡೆ ನಾಲೆ ಮತ್ತು ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು, ಹೇಮಗಿರಿ ನಾಲಾ ವ್ಯಾಪ್ತಿಯ ರೈತರು ಬೇಸಿಗೆಯಲ್ಲಿ ಯಾವ ಬೆಳೆ ಬೆಳೆಯಬೇಕೆಂಬ ಗೊಂದಲದಲ್ಲಿದ್ದಾರೆ ಎಂದರು.
ಹೇಮೆಯಿಂದ ನಾಲೆಗಳಿಗಳಿಗೆ ನೀರು ಹರಿಸಿದರೆ ಕೆರೆ-ಕಟ್ಟೆಗಳು ತುಂಬಿ ಅಂತರ್ಜಲ ವೃದ್ಧಿಯಾಗುತ್ತದೆ. ಅಲ್ಲದೇ, ಜನ-ಜಾನುವಾರುಗಳಿಗೂ ಅನುಕೂಲವಾಗುತ್ತದೆ. ಹೇಮೆ ನೀರಿನ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಒಗ್ಗಟ್ಟಿನ ಧ್ವನಿಯೆತ್ತಿ ರೈತರ ಪರ ನಿಲ್ಲುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾವೇರಿ ಜಲ ವಿವಾದಕ್ಕೂ ನದಿ ಅಣೆಕಟ್ಟೆ ನಾಲೆಗಳಿಗೂ ಯಾವುದೇ ಸಂಬಂಧವಿಲ್ಲ. ನಾಲೆಗಳ ನೀರು ನಿಲುಗಡೆ ಮಾಡದೆ ಕಾಯಂ ನೀರು ನೀಡಬೇಕು ಮತ್ತು ತಕ್ಷಣವೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಹೇಮಾವತಿ ಜಲಾಶಯದ ಎಡದಂಡೆ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿದರು.
ಎ.ಜೆ.ರಾಮಚಂದ್ರಾವ್ 54ನೇ ವಿತರಣಾ ನಾಲೆ ಅಧುನಿಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಸುಮಾರು 54 ಕೋಟಿ ಅಂದಾಜು ವೆಚ್ಚದ ಕಾಮಗಾರಿ ಕಳಪೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಎಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು. ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ಆರಂಭಗೊಂಡಿರುವ ಕಾಮಗಾರಿಯನ್ನು ಮತ್ತೆ ನಿಲ್ಲಿಸುವಂತೆ ಕಾಮಗಾರಿ ಸ್ಥಳಳಲ್ಲಿ ರೈತರು ಮತ್ತೆ ಹೋರಾಟಕ್ಕಿಳಿಯಬೇಕಾಗುತ್ತದೆಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕರೋಟಿ ತಮ್ಮಯ್ಯ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಲಕ್ಷ್ಮೀಪುರ ನಾಗರಾಜು, ಚೌಡೇನಹಳ್ಳಿ ಕೃಷ್ಣೇಗೌಡ, ಹಿರೀಕಳಲೆ ಚೇತನ್ ಕುಮಾರ್ ಸೇರಿದಂತೆ ಹಲವರು ಇದ್ದರು.