ಮಾದಕವಸ್ತು ಮುಕ್ತ ರಾಜ್ಯವಾಗಿಸಲು ಎಲ್ಲರ ಸಹಕಾರ ಅಗತ್ಯ: ಸಿದ್ದರಾಮಯ್ಯ

| Published : Mar 11 2024, 01:20 AM IST

ಮಾದಕವಸ್ತು ಮುಕ್ತ ರಾಜ್ಯವಾಗಿಸಲು ಎಲ್ಲರ ಸಹಕಾರ ಅಗತ್ಯ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರು ಮಾದಕವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕವನ್ನು ಮಾದಕವಸ್ತು ಮುಕ್ತವಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯುವಕರು ಮಾದಕವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕವನ್ನು ಮಾದಕವಸ್ತು ಮುಕ್ತವಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಪೊಲೀಸ್‌ ಇಲಾಖೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಭಾರತೀಯ ಸ್ಟೇಟ್‌ ಬ್ಯಾಂಕ್‌ ಸಹಯೋಗದೊಂದಿಗೆ ಆಯೋಜಿಸಿದ್ದ ‘ಪೊಲೀಸ್‌ ರನ್‌’ (5 ಕಿ.ಮೀ. ಮತ್ತು 10 ಕಿ.ಮೀ.) ಓಟ ಸ್ಫರ್ಧೆಗೆ ಭಾನುವಾರ ಬೆಳಗ್ಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರೇ ಈ ದೇಶದ ಸಂಪತ್ತು. ಅವರು ಮಾದಕವಸ್ತುಗಳ ವ್ಯಸನಿಗಳಾಗದಂತೆ ಜಾಗೃತಿ ಮೂಡಿಸಲು ಸರ್ಕಾರದ ಜತೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.

ಹಸಿರು ಕಡಿಮೆಯಾಗುತ್ತಿರುವ ಬೆಂಗಳೂರನ್ನು ಪುನಃ ಹಸಿರು ನಗರವನ್ನಾಗಿಸಬೇಕು ಮತ್ತು ಯುವಕರು ಆರೋಗ್ಯವಂತರಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ಪೊಲೀಸ್ ಓಟ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರ ದೈಹಿಕ ಕ್ಷಮತೆಗಾಗಿ ಓಟ ಅಗತ್ಯವಿದೆ. ವಿಶೇಷವಾಗಿ ಯುವಕರು ಸಮಾಜದಲ್ಲಿ ಅರ್ಧ ಸಂಖ್ಯೆಯಲ್ಲಿದ್ದಾರೆ. ಎಷ್ಟು ವರ್ಷ ಬದುಕುತ್ತೇವೆಯೋ ಅಷ್ಟು ವರ್ಷವೂ ಆರೋಗ್ಯವಂತರಾಗಿ ಜೀವಿಸಬೇಕು ಎಂದು ತಿಳಿಸಿದರು.

ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಅದು ಕಡಿಮೆಯಾಗಬೇಕು ಎಂದರೆ ಜನರಲ್ಲಿ ಜಾಗೃತಿ ಅಗತ್ಯ. ಪೊಲೀಸರು ತಡೆಗೆ ಪ್ರಯತ್ನ ಪಟ್ಟರೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದರೂ ಸೈಬರ್ ಅಪರಾಧಗಳು ಕಡಿಮೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಅಗತ್ಯ. ಅಪರಾಧ ಮಾಡಬಾರದು, ಉತ್ತಮ ಪ್ರಜೆಗಳಾಗಿ ಬದುಕಬೇಕು ಎಂದು ಜನರಲ್ಲಿ ಅರಿವು ಮೂಡಬೇಕು. ಎಲ್ಲರೂ ಆರೋಗ್ಯವಂತರಾಗಿ ಸಮಾಜದ ಆಸ್ತಿಯಾಗಿ ಬಾಳಬೇಕು. ಅಂತಿಮವಾಗಿ ಎಲ್ಲ ಅಪರಾಧಗಳ ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ವಿನಯ್‌ ಟೊನ್ಸೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ಗೋವಿಂದರಾಜು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಪ್ರತಿ ವರ್ಷದ ಓಟ ಆಯೋಜನೆ: ಪರಂ

ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಮಾತನಾಡಿ, ರಾಜ್ಯ ಪೊಲೀಸ್‌ ಇಲಾಖೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಪ್ರಥಮ ಬಾರಿಗೆ ಈ ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಮಾದಕವಸ್ತು ಮುಕ್ತವಾಗಬೇಕು. ಸೈಬರ್‌ ಅಪರಾಧ ಮುಕ್ತ ಕರ್ನಾಟಕವಾಗಬೇಕು. ಯುವಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಓಟ ಆಯೋಜಿಸಲಾಗಿದೆ. ಪ್ರತಿ ವರ್ಷ ಈ ಓಟ ಹಮ್ಮಿಕೊಳ್ಳಬೇಕು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಇದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮುಂದೆ ಯಾರೇ ಡಿಜಿಪಿ ಬಂದರೂ ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.

ಈ ಓಟದಲ್ಲಿ ಬೆಂಗಳೂರಿನಲ್ಲೇ ಸುಮಾರು ಹತ್ತು ಸಾವಿರ ಜನ ಭಾಗವಹಿಸಿದ್ದಾರೆ. ರಾಜ್ಯಾದ್ಯಂತ 50-60 ಸಾವಿರ ಜನರ ಭಾಗವಹಿಸಿದ್ದಾರೆ. ಇನ್ನು ಸೈಬರ್‌ ಅಪರಾಧ ತಡೆಯುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಸೈಬರ್‌ ಪೊಲೀಸ್‌ ಠಾಣೆ ಮಾಡಿದ್ದೇವೆ. ಯಾವುದೇ ಪೊಲೀಸ್‌ ಠಾಣೆಯಲ್ಲಿ ಸೈಬರ್‌ ಪ್ರಕರಣ ದಾಖಲಿಸಿ ಬಳಿಕ ಸೈಬರ್‌ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಬಹುದು. ಇನ್ನು ಸೈಬರ್‌ ಅಪರಾಧಗಳನ್ನು ಭೇದಿಸುವ ನಿಟ್ಟಿನಲ್ಲಿ ಅಧಿಕಾರಿ-ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೈಬರ್‌ ಅಪರಾಧಗಳ ತಡೆಗೆ ಇದು ಸಹಾಯವಾಗಲಿದೆ ಎಂದು ಹೇಳಿದರು.