ಅಕ್ರಮ ಮರಳುಗಾರಿಕೆ ತಡೆಯಲುಹೋದ ಅಧಿಕಾರಿ ಮೇಲೆ ಹಲ್ಲೆ ಯತ್ನ

| Published : Apr 25 2024, 01:08 AM IST

ಸಾರಾಂಶ

ಆರೋಪಿತರು, ಅಧಿಕಾರಿಗಳಿಗೆ ಲಂಚಕೋರಿ, ಮುಂತಾದ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಕೈ ತೋರಿಸಿದ್ದಾರೆ. ಅಲ್ಲದೇ ಮತ್ತೊಮ್ಮೆ ಬಂದರೆ ಲಾರಿ ಹತ್ತಿಸಿ ಸಾಯಿಸುತ್ತೇವೆ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಹೊನ್ನಾವರ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಆಶಾ ಎಂ.ಎಸ್. ಅವರ ಕಾರಿನ ಟೈರ್ ಪಂಚರ್ ಮಾಡಿ, ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು 12 ಜನರ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಆಶಾ ಹಾಗೂ ಸಿಬ್ಬಂದಿಯವರಾದ ವಿನೋದ ನಾಯಕ, ಸಂತೋಷ ನಾಯ್ಕ ಹಾಗೂ ಕಾರಿನ ಚಾಲಕರಾದ ಸಂಜಯ ನಾಯ್ಕ ಅವರೊಂದಿಗೆ ಅನಧಿಕೃತ ಮರಳು ಪ್ರದೇಶವಾದ ತಾಲೂಕಿನ ಕೆಳಗಿನ ಮೂಡ್ಕಣಿಗೆ ಬುಧವಾರ ಬೆಳಗ್ಗೆ 7.10ಕ್ಕೆ ಭೇಟಿ ನೀಡಿದ್ದರು.

ಆ ಸ್ಥಳದಲ್ಲಿ ಅಕ್ರಮವಾಗಿ ಒಂದು ಲೋಡ್ ಮರಳು ದಾಸ್ತಾನು ಇದ್ದು, ಆಗ ತಾನೆ ಹಲವು ಗಾಡಿಗಳು ಮರಳನ್ನು ತುಂಬಿಕೊಂಡು ಹೋಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಸ್ಥಳದಲ್ಲಿ ಗಾಡಿಗೆ ಲೋಡ್ ಮಾಡುವ ಮೊದಲು ಬಳಸುವ ಕಬ್ಬಿಣದ ಒಟ್ಟೂ 7 ಸ್ಟೆಪ್ (ಕಬ್ಬಿಣದ ಮೆಟ್ಟಿಲುಗಳು) ಇದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲಿಂದ ಬರುವಾಗ ಕೆಲವರು ಅಧಿಕಾರಿ ಆಶಾ ಅವರ ಗಾಡಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಆರೋಳ್ಳಿಯಲ್ಲಿ ರಸ್ತೆಗೆ ಮೊಳೆಗಳನ್ನು ಹಾಕಿ ಗಾಡಿಯನ್ನು ಪಂಚರ್ ಮಾಡಿದ್ದಾರೆ. ನಂತರ ಆರೋಳ್ಳಿ ಗ್ಯಾರೇಜ್ ಹತ್ತಿರ ರಿಪೇರಿ ಮಾಡಿಸುವ ಸಮಯದಲ್ಲಿ ಆರೋಪಿಗಳು ಅಡ್ಡಗಟ್ಟಿದ್ದಾರೆ.ಆಗ ಆರೋಪಿತರು ಲಂಚಕೋರಿ, ಮುಂತಾದ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಕೈ ತೋರಿಸಿದ್ದಾರೆ. ಅಲ್ಲದೇ ಮತ್ತೊಮ್ಮೆ ಬಂದರೆ ಲಾರಿ ಹತ್ತಿಸಿ ಸಾಯಿಸುತ್ತೇವೆ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಆರೋಪಿಗಳನ್ನು ಹೊನ್ನಾವರ ತಾಲೂಕಿನ ಜಗದೀಶ ನಾಯ್ಕ ತುಂಬೊಳ್ಳಿ, ಮಂಜು ಶೆಟ್ಟಿ, ಮುರಳೀಧರ ಶೆಟ್ಟಿ, ನವೀನ ನಾಯ್ಕ, ಮಹೇಶ ನಾಯ್ಕ, ನಾಗರಾಜ ಮೇಸ್ತಾ, ಜಾಕಿ ಅಲ್ಮೇಡಾ, ಸುಬ್ರಹ್ಮಣ್ಯ ನಾಯ್ಕ, ಪ್ರದೀಪ ನಾಯ್ಕ, ಶೇಖರ ಗೌಡ, ಪ್ರೆಸ್ ರಿಪೋರ್ಟರ್ ವಿಶ್ವನಾಥ‌ ನಾಯ್ಕ ಎಂದು ಗುರುತಿಸಲಾಗಿದೆ.ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಆಶಾ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಅವರನ್ನು ಹೊನ್ನಾವರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪೊಲೀಸ್‌ ಠಾಣೆ ಎದುರು ವಾಗ್ವಾದಘಟನೆ ಕುರಿತಂತೆ ಅಧಿಕೃತ ಮರಳು ಪರವಾನಗಿದಾರರು ಹೊನ್ನಾವರ ಠಾಣೆ ಎದುರು ಜಮಾಯಿಸಿದ್ದರು. ಈ ವೇಳೆ ಅನಧಿಕೃತ ಮರಳು ಸಾಗಾಟದಾರರು ಠಾಣೆ ಎದುರಿದ್ದು, ಪೊಲೀಸರ ಎದುರೆ ಎರಡು ತಂಡಗಳ ನಡುವೆ ವಾಗ್ವಾದ ನಡೆಯಿತು. ಪಾಸ್ ಹೊಲ್ಡರ್ ಗಳು ಹತ್ತು ಟನ್‌ಗಿಂತ ಹೆಚ್ಚು ಮರಳು ಸಾಗಾಟ ಮಾಡುತ್ತಿದ್ದಾರೆ. ನಾವು ಕಳ್ಳರಾದರೆ ನೀವು ಲೀಗಲ್ ಕಳ್ಳರೇ ಎಂದು ಪಾಸ್ ಹೊಂದಿರುವವರ ವಿರುದ್ದ ಹರಿಹಾಯ್ದರು.

ಅಕ್ರಮ ಮರಳುಗಾರಿಕೆ ಕಡಿವಾಣ ಹಾಕಿ ಎಂದು ಸಿಪಿಐ, ಪಿಎಸ್‌ಐ ಎದುರು ಪಾಸ್ ಹೊಂದಿರುವವರು ವಾಗ್ವಾದ ನಡೆಸಿದರು. ಮರಳು ದಂಧೆಕೋರರು ದಕ್ಷ ಅಧಿಕಾರಿ ಆಶಾ ಅವರ ಮೇಲೆ ಹಾಡಹಗಲೇ ಹಲ್ಲೆಗೆ ಮುಂದಾಗಿರುವ ಕೃತ್ಯವನ್ನು ಖಂಡಿಸಿದರು‌.5 ಕಬ್ಬಿಣದ ಮೆಟ್ಟಿಲುಗಳ ವಶಹೆರಂಗಡಿ ಗ್ರಾಮ ಪಂಚಾಯಿತಿ ಮುಂಭಾಗ ಉಮೇಶ ಪುರಸಯ್ಯ ನಂಜೂರು ಅವರ ಪಟ್ಟಾ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ದಾಸ್ತಾನು ಸಾಗಾಣಿಕೆ ಬಗ್ಗೆ ದೂರು ಬಂದ ಹಿನ್ನೆಲೆ ಈ ಸ್ಥಳಕ್ಕೆ ಭೇಟಿ ನೀಡಿ ಬಾಡಿಗೆ ಮರಳನ್ನು ತುಂಬುವ ಕಬ್ಬಿಣದ ಒಟ್ಟು 5 ಮೆಟ್ಟಿಲುಗಳನ್ನುಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.