ಸಾರಾಂಶ
ಬೇವಿನಮರದಲ್ಲಿ ನೊರೆ ಬರುತ್ತಿರುವುದು ಭಾನುವಾರ ಕಂಡುಬಂದಿದೆ.
ಕಂಪ್ಲಿ: ಪಟ್ಟಣದ ಬೆಳಗೋಡು ರಸ್ತೆಯಲ್ಲಿರುವ ಜಮೀನೊಂದರಲ್ಲಿ ಬೇವಿನಮರದಿಂದ ಬರುತ್ತಿರುವ ನೊರೆ ನೋಡಲು ಜನತೆ ನೂಕು ನುಗ್ಗಲಾಗಿದೆ. ಅನೇಕರು ದೇವರೆಂದು ನಂಬಿ ಪೂಜೆ ಸಲ್ಲಿಸುತ್ತಿದ್ದಾರೆ.
ಕೇಳಲು ಹಾಸ್ಯಾಸ್ಪದವೆನಿಸಿದರೂ ಈ ಘಟನೆ ನಡೆದಿರುವುದು ನಿಜ. ಬೇವಿನಮರದಲ್ಲಿ ನೊರೆ ಬರುತ್ತಿರುವುದು ಭಾನುವಾರ ಕಂಡುಬಂದಿದೆ. ಈ ವಿಷಯ ಜನ ಮರಳೋ ಜಾತ್ರೆ ಮರಳೋ ಎನ್ನುವಂತೆ ಪಟ್ಟಣದ ವಿವಿಧೆಡೆಯಿಂದ ಜನರು ಮರ ವೀಕ್ಷಿಸಲು ಸಾಲುಗಟ್ಟಿ ಬರುತ್ತಿದ್ದಾರೆ. ಇನ್ನು ಮರಕ್ಕೆ ಕುಂಕುಮ, ಅರಿಶಿಣ ಹಚ್ಚಿ, ಎಲೆ-ಅಡಿಕೆ, ದಕ್ಷಿಣೆ ಇರಿಸಿ ಊದುಬತ್ತಿ ಹಚ್ಚಿ ಪೂಜೆ ಸಲ್ಲಿಸುತ್ತಿದ್ದಾರೆ.ಈ ಹಿಂದೆ ಇದೇ ರೀತಿ ಸಂತೆ ಮಾರುಕಟ್ಟೆ ಅಗಸಿಕಟ್ಟೆಯ ಬಳಿಯ ಬೇವಿನಮರದಲ್ಲೂ ನೊರೆ ಕಾಣಿಸಿಕೊಂಡಿತ್ತು.
ವೈಜ್ಞಾನಿಕ ಹಿನ್ನೆಲೆ:ಭೂಮಿಯ ಒಳಗಿನ ನೀರಿನ ಹರಿವು ಪಲ್ಲಟಗೊಂಡಾಗ ಮಣ್ಣಿನಲ್ಲಿ ಪವರ್ ಆಫ್ ಹೈಡ್ರೋಜನ್ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದಾಗಿ ಮರದಲ್ಲಿನ ತ್ಯಾಜ್ಯವಸ್ತು (ಮೆಟೊಮಲೈಸ್) ನೊರೆಯ ರೂಪದಲ್ಲಿ ಆಚೆ ಬರುತ್ತವೆ. ಇನ್ನು ಕೆಲ ಮರಗಳಲ್ಲಿನ ತ್ಯಾಜ್ಯವು ಹಾಲಿನ ರೀತಿಯಲ್ಲಿ, ಅಂಟಿನ ರೂಪದಲ್ಲಿ, ಬಿಳಿ ಬಣ್ಣದ ದ್ರವದ ರೂಪದಲ್ಲಿ ಬಿಡುಗಡೆಗೊಳ್ಳುತ್ತದೆ. ಈ ರೀತಿಯ ಲಕ್ಷಣಗಳನ್ನು ನಾವು ಹೆಚ್ಚಾಗಿ ವಯಸ್ಸಾದ ಮರಗಳಲ್ಲಿ ಕಾಣಬಹುದು. ಆಯಾ ಮರಗಳ ಕೆಳಗಿನ ಮಣ್ಣಿನ ಫಲವತ್ತತೆ ಆಧಾರದಲ್ಲಿ ಈ ರೀತಿಯ ಲಕ್ಷಣ ಕಾಣಸಿಗುತ್ತವೆ. ಆದರೆ ಎಲ್ಲ ರೀತಿಯ ಮರಗಳಲ್ಲಿ ಇದು ಕಾಣಲಾಗುವುದಿಲ್ಲ ಎಂದು ವಿಜ್ಞಾನ ಶಿಕ್ಷಕ ಡಾ.ಬಿ. ಸುನಿಲ್ ತಿಳಿಸಿದ್ದಾರೆ.