ಇಂದು ವಿದ್ಯಾಭ್ಯಾಸಕ್ಕಿಂತ ಸಂಸ್ಕಾರ ಮುಖ್ಯ

| Published : Apr 28 2025, 12:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಇಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಕಡಿಮೆಯಾದರೂ ಪರವಾಗಿಲ್ಲ, ಸಂಸ್ಕಾರ ನೀಡುವುದು ಬಹಳ ಮುಖ್ಯವಾಗಿದೆ ಎಂದು ಕೆರೂರು ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಇಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಕಡಿಮೆಯಾದರೂ ಪರವಾಗಿಲ್ಲ, ಸಂಸ್ಕಾರ ನೀಡುವುದು ಬಹಳ ಮುಖ್ಯವಾಗಿದೆ ಎಂದು ಕೆರೂರು ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದರು.

ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಲಿಂ.ಗುರು ಮಹಾಂತೇಶ್ವರ ಸ್ವಾಮೀಜಿ ಪುಣ್ಯಸ್ಮರಣೆಯ ಅಮೃತ ಮಹೋತ್ಸವದಂಗವಾಗಿ ಹಮ್ಮಿಕೊಂಡಿದ್ದ 75 ವಿದ್ಯಾರ್ಥಿಗಳಿಗೆ ಗುರುರಕ್ಷೆ ಮತ್ತು ಧರ್ಮ ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದು ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ. ಮೊಬೈಲ್ ದಾಸರಾಗಿ ಕಾಲಹರಣ ಮಾಡುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಕಲಿಸಬೇಡಿ. ಅವರು ಕಲಿಯುವಂತೆ ಮಾಡಬೇಕು. ಅವರು ಇಚ್ಛೆ ಪಟ್ಟು ಅಧ್ಯಯನ ಮಾಡಿದಾಗ ಮಾತ್ರ ವಿದ್ಯಾವಂತರಾಗಲು ಸಾಧ್ಯ ಎಂದು ಹೇಳಿದರು.ತಂದೆ-ತಾಯಿ ಜೀವಂತ ದೇವರು. ಅವರ ಸೇವೆ ಮಾಡಿದಾಗ ಮಾತ್ರ ಪರಮಾತ್ಮನ ಮೆಚ್ಚುಗೆಗೆ ಪಾತ್ರರಾಗಬಹುದು. ಗುರು-ಹಿರಿಯರ ಸೇವೆ ಮಾಡುವದು ಶ್ರೇಷ್ಠ ಎಂದ ಸಂಪತ್ತು ಜನರನ್ನು ಚಿಂತೆಗೀಡು ಮಾಡುತ್ತದೆ ಎಂದರು.

ಸಿಂದಗಿಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಗುರುವಿನ ಕೃಪೆ ಎಲ್ಲರಿಗೂ ಸಿಗುವುದಿಲ್ಲ. ಅದನ್ನು ಸಂಕಲ್ಪ ಮಾಡಿಕೊಂಡು ಪಡೆಯಬೇಕು. ಕಿಂಕರ ಭಾವದಲ್ಲಿ ಶಂಕರ ಭಾವವಿದೆ. ಇಲ್ಲಿನ ಶ್ರೀಮಠದ ಪ್ರಸ್ತುತ ಶ್ರೀಗಳು ಗುರುವಿನಂತೆ ಶ್ರೀಮಠವನ್ನು ಬೆಳಗುತ್ತಿದ್ದಾರೆ. ಗುರುವಿನ ಪುಣ್ಯಸ್ಮರಣೋತ್ಸವದಂಗವಾಗಿ ೭೫ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ನೀಡುವ ಮೂಲಕ ಶಿಕ್ಷಣಕ್ಕೆ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಪಟ್ಟೀಕಂಥಿ ಹಿರೇಮಠದ ಲಿಂ.ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರು ತಮ್ಮ ೫೦ನೇ ಪಟ್ಟಾಧಿಕಾರ ಮಹೋತ್ಸವದಂಗವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಗಳಿಗೆ ದಕ್ಷಿಣೆ ಬದಲಾಗಿ ಪ್ರತಿಯೊಬ್ಬರಿಗೂ ಆಕಳು ನೀಡಿದ್ದರು. ನನ್ನ ಮಠಕ್ಕೂ ಆಕಳು ಕಳುಹಿಸಿಕೊಟ್ಟಿದ್ದರು. ಅವರು ಮುಂಬರುವ ದಿನಗಳಲ್ಲಿ ನಿಮ್ಮ ಮಠದಲ್ಲಿ ೧೦೦ ಆಕಳು ಇರುತ್ತವೆ ಎಂದು ಹೇಳಿದ್ದರು. ಅದರಂತೆ ನಮ್ಮ ಶ್ರೀಮಠದಲ್ಲಿ ಇಂದು ೧೦೦ ಆಕಳು ಇವೆ ಎಂದು ತಿಳಿಸಿದರು.ಪಟ್ಟೀಕಂಥಿ ಹಿರೇಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಗೆ ವಿಜಯಪುರ ಜಿಲ್ಲೆಯ ಕೊಡುಗೆಯು ಅನುಪಮವಾಗಿದೆ. ತಪಸ್ವಿಗಳನ್ನು, ಆಚಾರ್ಯರನ್ನು, ಶರಣರನ್ನು ಸಂತ-ಮಹಾಂತರನ್ನು ನೀಡಿ ಜಗತ್ತಿನ ಧಾರ್ಮಿಕ ಸಂಪತನ್ನು ವೃದ್ಧಿ ಗೊಳಿಸಿದೆ. ಈ ನಿಟ್ಟಿನಲ್ಲಿ ಶ್ರೀಮಠದ ತಪಸ್ವಿಗಳಾದ ಗುರು ಮಹಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಉಭಯ ಶ್ರೀಗಳು ಅದ್ವೀತಿಯ. ಉಭಯ ಶ್ರೀಗಳ ಆಶೀರ್ವಾದ ಸದಾ ಭಕ್ತರ ಮೇಲೆ ಇರಲಿದೆ ಎಂದು ಆಶಿಸಿದರು.ಗುಳೇದಗುಡ್ಡ ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯರು ಮಾತನಾಡಿ, ಶ್ರೀಮಠದ ಪ್ರಸ್ತುತ ಪೀಠಾಧಿಪತಿಗಳು ಮಾತೃಹೃದಯಿ ಹೊಂದುವ ಮೂಲಕ ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಂಘಟನೆ, ಸ್ನೇಹದಲ್ಲಿ ಸೂಕ್ಷ್ಮವಾಗಿ ವಿಚಾರ ಮಾಡಿ ಯಾರಿಗೂ ಕೆಟ್ಟದ್ದನ್ನು ಬಯಸದೇ, ಕಾರ್ಯ ಮಾಡುತ್ತಿರುವುದು ವಿಶೇಷವಾಗಿದೆ ಎಂದರು.ಭೃಂಗೀಶ್ವರಲಿಂಗ ಶಿವಾಚಾರ್ಯ ಸ್ವಾಮೀಜಿ, ಅಶೋಕ ವಾರದ, ಸುಭಾಸಗೌಡ ಪಾಟೀಲ, ವಿಶ್ವನಾಥಗೌಡ ಪಾಟೀಲ, ರಾಜಶೇಖರ ಮಗಿಮಠ, ಎಸ್.ಎಸ್.ಗೊಳಸಂಗಿಮಠ, ಗುರು ಗಚ್ಚಿನಮಠ, ಅಪ್ಪುಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ, ಸಾಯಿರಾಂ ಯಾದವಾಡ ಸೇರಿದಂತೆ ಇತರರು ಇದ್ದರು. ಮಡಿವಾಳಯ್ಯಸ್ವಾಮೀಜಿ ಸ್ವಾಗತಿಸಿ, ನಿರೂಪಿಸಿದರು. ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಎಲ್ಲ ಶ್ರೀಗಳ, ಗಣ್ಯರ ಸಮ್ಮುಖದಲ್ಲಿ ಭಕ್ತರ ಜಯಘೋಷದೊಂದಿಗೆ ಪೀಠಾರೋಹಣ ಮಾಡಿದರು. ನಂತರ ಶ್ರೀಗಳಿಗೆ ಭಕ್ತರಿಂದ ನಾಣ್ಯಗಳಿಂದ, ಓಂ ನಮಃ ಶಿವಾಯ ಎಂಬ ಮಂತ್ರ ಬರೆದ ೫೦೦ ಕ್ಕೂ ಹೆಚ್ಚಿನ ಪುಸ್ತಕಗಳಿಂದ ಮಂತ್ರ ತುಲಾಭಾರ ನಡೆಯಿತು.

ಗುರು ಮಹಾಂತೇಶ್ವರರ ಹಾಗೂ ಗುರು ಸಂಗನಬಸವ ಶಿವಾಚಾರ್ಯರ ರಜತ ಮೂರ್ತಿಗಳ ಅಡ್ಡಪಲ್ಲಕ್ಕಿ ಮಹೋತ್ಸ ವಿವಿಧ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.