ಪಾಂಡವಪುರ:
ರೈತರು ಬೆಳೆದ ಸಾವಯವ ಬೆಳೆಗಳಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ಗ್ರಾಹಕರಿಗೆ ವಿಷ ರಹಿತ ಆಹಾರ ಮತ್ತು ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಜೂ.1ರಂದು ಪಟ್ಟಣದ ತಾಪಂ ಆವರಣದಲ್ಲಿ ಸಾವಯವ ಸಂತೆ ಆಯೋಜಿಸಲಾಗಿದೆ ಎಂದು ರೈತ ಸ್ವರಾಜ್ಯ ವೇದಿಕೆಯ ಕವಿತಾ ಕುರಗಂಟಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಯವ ಕೃಷಿಕರು ಸಂಘಟಿತರಾಗಿ 15 ದಿನಗಳಿಗೊಮ್ಮೆಯಂತೆ ಮೂರು ತಿಂಗಳು 3 ಗಂಟೆಗಳ ಕಾಲ ಮಾತ್ರ ಸಂತೆ ನಡೆಸುತ್ತಿದ್ದಾರೆ. ನೈಸರ್ಗಿಕವಾಗಿ ಬೆಳೆದ ಬೆಳೆಗಳು, ನಾಟಿ ಹಸು ಹಾಲು, ಬೆಣ್ಣೆ, ತುಪ್ಪ, ಹುರುಳಿ, ತಣ್ಣಿ ಸೇರಿದಂತೆ ಸಾವಯವ ಆಹಾರ ಪದಾರ್ಥಗಳನ್ನು ಮಾತ್ರ ತಂದು ರೈತರು ನೇರ ಮಾರಾಟ ಮಾಡಬಹುದು. ಯಾವ ದಲ್ಲಾಳಿಗಳು ಇರುವುದಿಲ್ಲ. ರೈತರಿಗೆ ಉತ್ತೇಜಿಸಲು ನಡೆಯುತ್ತಿರುವ ಸಂತೆಯಲ್ಲಿ ಜಿಲ್ಲೆ ಮತ್ತು ತಾಲೂಕಿನ ರೈತರು ಭಾಗವಹಿಸಬಹುದು ಎಂದು ವಿವರಿಸಿದರು.
ಜನ ರುಕಡಿಮೆ ದರಕ್ಕೆ ಸಿಗುವ ಆಹಾರ ಪದಾರ್ಥಗಳನ್ನು ಖರೀದಿಸಿ ಅದರಿಂದ ಆರೋಗ್ಯ ಹಾಳು ಮಾಡಿಕೊಳ್ಳುವ ಜತೆಗೆ ಆಸ್ಪತ್ರೆಗಳಿಗೆ ಲಕ್ಷಾಂತರ ರು ಹಣ ವ್ಯಯಿಸುತ್ತಿದ್ದಾರೆ. ರಾಸಾಯಿನಿಕ ಗೊಬ್ಬರ, ಅತಿಯಾದ ಕ್ರಿಮಿನಾಶಕಗಳ ಬಳಕೆಯಿಂದ ನಮ್ಮ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಜತೆಗೆ ನಾವು ವಿಷಯುಕ್ತ ಆಹಾರ ಖರೀದಿಸುವಂತಾಗಿದೆ ಎಂದರು.ರೈತರು ಸಾವಯವ, ನೈಸರ್ಗಿಕ ಮತ್ತು ಜೈವಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಿಂದ ಬೆಳೆದ ಬೆಳೆಗಳು ಮನುಷ್ಯರ ಆರೋಗ್ಯಕ್ಕೆ ಒಳ್ಳೆಯದು. ಸಂತೆಯಿಂದ ರೈತರಿಗೆ ಉತ್ತೇಜನ, ಗ್ರಾಹಕರಿಗೆ ಗುಣಮಟ್ಟದ ಆಹಾರ ಸಿಗಲಿದೆ. ಸಾವಯವ ಬೆಳೆಗೆ ಮಾರುಕಟ್ಟೆಯಲ್ಲಿ ತುಂಬ ಬೇಡಿಕೆ ಇದೆ. ಬೇಡಿಕೆ ಇರುವ ಕಾರಣ ಉತ್ತಮ ದರವೂ ಸಿಗಲಿದೆ. ಹೀಗಾಗಿ ರೈತರು ಸಾವಯವ ಕೃಷಿಗೆ ಹೊಂದಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘ ಜಿಲ್ಲಾದ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಮುಖಂಡರಾದ ಮುರುಳೀಧರ್, ರಾ.ಸ.ಹನುಮಂತೇಗೌಡ ಇತರರು ಇದ್ದರು.