ಸಾರಾಂಶ
ನಾಗಾರಾಧನೆಯ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯ । ಪುರಾಣ ಪ್ರಸಿದ್ಧ ತಾಣದ ರಮಣೀಯ ನಿಸರ್ಗ ಪ್ರವಾಸಿಗರ ಆಕರ್ಷಣೆ । ಧಾರ್ಮಿಕ ಇಚ್ಛಾಶಕ್ತಿಯ ನೆಲೆವೀಡು ಈ ಮಧ್ಯ ಸುಬ್ರಹ್ಮಣ್ಯ
ಕೆ.ಆರ್.ರವಿಕಿರಣ್ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ದಕ್ಷಿಣ ಭಾರತದ ಸುಪ್ರಸಿದ್ಧ ನಾಗಾರಾಧನೆಯ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಹ್ಮಣ್ಯ ದೊಡ್ಡಬಳ್ಳಾಪುರದಿಂದ 14 ಕಿ.ಮೀ, ಬೆಂಗಳೂರಿನಿಂದ 51 ಕಿ.ಮೀ ದೂರದಲ್ಲಿರುವ ನಿಸರ್ಗ ರಮಣೀಯ ತಾಣಗಳಲ್ಲಿ ಒಂದು. ಮಧ್ಯ ಸುಬ್ರಹ್ಮಣ್ಯ ಎಂದೇ ಖ್ಯಾತಿ ಹೊಂದಿರುವ ಈ ಸುಕ್ಷೇತ್ರ, ತನ್ನ ಪಾರಂಪರಿಕ ಮತ್ತು ಪೌರಾಣಿಕ ಹಿನ್ನಲೆಯಿಂದ ಭಕ್ತರನ್ನು ಆಕರ್ಷಿಸುತ್ತಿದೆ.ಧಾರ್ಮಿಕ ಕ್ಷೇತ್ರವಾಗಿ ಗಮನ ಸೆಳೆದಿರುವ ಘಾಟಿ, ತನ್ನ ಸುತ್ತಲಿನ ಸರಳ ಪ್ರಾಕೃತಿಕ ಸೌಂದರ್ಯದಿಂದಲೂ ಗಮನ ಸೆಳೆಯುತ್ತದೆ. ಸಮೀಪದಲ್ಲೇ ಇರುವ ಮಾಕಳಿದುರ್ಗ ಚಾರಣಪ್ರಿಯ ಸ್ವರ್ಗ ಎನಿಸಿದೆ. ಘಾಟಿಗೆ ಹೋದವರು ದೇವರ ದರ್ಶನ ಮಾಡಿಕೊಂಡು ಅಲ್ಲಿಂದ ಎರಡು ಕಿಮೀ ದೂರದಲ್ಲಿರುವ ವಿಶ್ವೇಶ್ವರಯ್ಯ ಪಿಕಪ್ ಅಣೆಕಟ್ಟೆಗೆ ಭೇಟಿ ನೀಡಬಹುದು.
ಐತಿಹ್ಯ:ಘಾಟಿ ಸುಬ್ರಮಣ್ಯ ಕ್ಷೇತ್ರವನ್ನು ಸುಮಾರು 600 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಸಂಡೂರು ಸಂಸ್ಥಾನದ ಘೋರ್ಪಡೆ ಮಹಾರಾಜರ ವಂಶಸ್ಥರು ಅಭಿವೃದ್ಧಿ ಪಡಿಸಿದರು ಎಂದು ಹೇಳಲಾಗುತ್ತದೆ. ಇಲ್ಲಿನ ಗರ್ಭಗುಡಿಯ ಮುಂಭಾಗದಲ್ಲಿ ಸರ್ಪರೂಪಿ ಸುಬ್ರಹ್ಮಣ್ಯಸ್ವಾಮಿ ದರ್ಶನವಾದರೆ, ಹಿಂಬದಿಯ ಕನ್ನಡಿಯಲ್ಲಿ ಲಕ್ಷ್ಮೀನರಸಿಂಹಸ್ವಾಮಿಯ ದರ್ಶನವಾಗುತ್ತದೆ. ಏಕಶಿಲೆಯಲ್ಲಿ ಸುಬ್ರಹ್ಮಣ್ಯ ಮತ್ತು ನರಸಿಂಹಸ್ವಾಮಿ ರೂಪಗೊಂಡಿರುವುದು ಅತ್ಯಂತ ವಿರಳ ಮತ್ತು ಆಕರ್ಷಣೀಯ. ಸಾವಿರಾರು ನಾಗರಕಲ್ಲುಗಳು, ಕುಮಾರಧಾರ ಕಲ್ಯಾಣಿ, ಹುತ್ತಗಳು ಇಲ್ಲಿನ ವಿಶೇಷ. ಸರ್ಪದೋಷ ನಿವಾರಣೆಗೂ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಘಾಟಿ ಕ್ಷೇತ್ರದಲ್ಲಿ ವಿವಾಹಗಳೂ ನಡೆಯುತ್ತವೆ.
ವಸತಿ ವ್ಯವಸ್ಥೆ:ಘಾಟಿ ಕ್ಷೇತ್ರದಲ್ಲಿ ರಾತ್ರಿ ಉಳಿದುಕೊಳ್ಳಲು ಬಯಸುವವರಿಗೆ ಹಲವು ಧರ್ಮ ಛತ್ರಗಳಿವೆ. ಧಾರ್ಮಿಕ ದತ್ತಿ ಇಲಾಖೆಯ ಸುಸಜ್ಜಿತ ಯಾತ್ರಿ ನಿವಾಸ ಇದೆ. ಉತ್ತಮ ಸೌಲಭ್ಯವಿರುವ ಸರ್ಕಾರಿ ಪ್ರವಾಸಿ ಮಂದಿರವಿದೆ. ದೇವಸ್ಥಾನಕ್ಕೆ ಒಂದು ಕಿ.ಮೀ ದೂರದಲ್ಲಿ ಉತ್ತಮ ಸೌಲಭ್ಯಗಳಿರುವ ಹಲವು ಖಾಸಗಿ ಹೋಟೆಲ್‌ಗಳಿವೆ.
ಬಾಕ್ಸ್.....ಘಾಟಿ ಸುಬ್ರಹ್ಮಣ್ಯದಲ್ಲಿ ಇಂದು ರಥೋತ್ಸವ; ಸಕಲ ಸಿದ್ಧತೆ
ದೊಡ್ಡಬಳ್ಳಾಪುರ: ತಾಲೂಕಿನ ಪುರಾಣಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವ ಜ.16 ರ ಮಂಗಳವಾರ ಮಧ್ಯಾಹ್ನ 12.15 ರಿಂದ 12.30ರ ಮೇಷ ಲಗ್ನದಲ್ಲಿ ನಡೆಯಲಿದೆ.ಈಗಾಗಲೇ ಕ್ಷೇತ್ರದಲ್ಲಿ ರಥೋತ್ಸವ ಅಂಗವಾಗಿ ವಿವಿಧ ಸಿದ್ಧತಾ ಕಾರ್‍ಯಗಳು ಪೂರ್ಣಗೊಂಡಿವೆ. ರಥಾಲಂಕಾರ, ದೇಗುಲ ಅಲಂಕಾರ ಕಾರ್‍ಯಗಳು ನಡೆಯುತ್ತಿವೆ. ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಯಲ್ಲಿರುವ ಈ ದೇವಾಲಯದಲ್ಲಿ ಸರ್ಕಾರದ ವತಿಯಿಂದ ರಥೋತ್ಸವ ಇತ್ಯಾದಿ ಧಾರ್ಮಿಕ ಕಾರ್‍ಯಕ್ರಮಗಳು ನಡೆಯಲಿದ್ದು, ಪ್ರತಿನಿತ್ಯ ತ್ರಿಕಾಲ ಪೂಜೆ, ಬಿದಿಗೆಯಿಂದ ತ್ರಯೋದಶಿಯವರೆಗೆ ವಿವಿಧ ಉತ್ಸವಾದಿಗಳು ನಡೆಯಲಿವೆ. ಬ್ರಹ್ಮರಥೋತ್ಸವದ ನಂತರ ಜನವರಿ ಅಂತ್ಯದವರೆಗೂ ರಥೋತ್ಸವ ವಿಶೇಷ ಪೂಜಾ ಕಾರ್‍ಯಕ್ರಮಗಳು ನಡೆಯಲಿವೆ.
ಷಷ್ಠಿಯ ದಿನದಂದು ಮುಂಜಾನೆ 3ರಿಂದ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ಹಾಗೂ ಅಭಿಷೇಕ ಆರಂಭಗೊಂಡು, 5.30ಕ್ಕೆ ಮಹಾಮಂಗಳಾರತಿ ನೆರವೇರಲಿದೆ. ಗರ್ಭಗುಡಿಯಲ್ಲಿನ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಗಳಿಗೆ ಪ್ರಾತಃ ಕಾಲದಲ್ಲಿ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಶ್ರೀಗಂಧಾಭಿಷೇಕ, ಭಸ್ಮಾಭಿಷೇಕದೊಂದಿಗೆ ಹೂವಿನ ಅಲಂಕಾರ ನೆರವೇರಿಸಲಾಗುತ್ತದೆ.ಅಗತ್ಯ ಮೂಲಸೌಕರ್ಯ:
ಬ್ರಹ್ಮರಥೋತ್ಸವದ ಪ್ರಯುಕ್ತ ರಾತ್ರಿ 8.30ರವರೆಗೂ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ದೊರೆಯಲಿದೆ. ಉತ್ಸವಕ್ಕೆ ಬರುವ ಸಹಸ್ರಾರು ಭಕ್ತಾದಿಗಳಿಗೆ ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಶುಧ್ಧ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.ಸಿಸಿ ಕ್ಯಾಮೆರಾ, ಪಾರ್ಕಿಂಗ್ ವ್ಯವಸ್ಥೆಗೆ ಒತ್ತು:
ಚಿನ್ನಾಭರಣ ಕಳವು ಸೇರಿದಂತೆ ಯಾವುದೇ ಅಪರಾಧ ಕೃತ್ಯಗಳು ನಡೆಯದಂತೆ ತಡೆಯಲು ದ್ರೋಣ್ ಕ್ಯಾಮೆರಾ ಮತ್ತು ದೇವಾಲಯದ ಸುತ್ತಾಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ . ಪಾರ್ಕಿಂಗ್ ವ್ಯವಸ್ಥೆ ಸಂಚಾರ ದಟ್ಟಣೆ ನಿಯಂತ್ರಿಸಲು ದೇವಾಲಯದಿಂದ 1 ಕಿಮೀ ಅಂತರದಲ್ಲಿ 14 ಕಡೆ ಬೈಕ್, ಕಾರು, ಬಸ್ ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.ಬಿಗಿ ಪೊಲೀಸ್ ಭದ್ರತೆ:
ಘಾಟಿ ಶ್ರೀ ಸುಬ್ರಮಣ್ಯ ಬ್ರಹ್ಮರಥೋತ್ಸವಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಿದ್ದು, 500 ಜನ ಪೊಲೀಸ್ ಸಿಬ್ಬಂದಿ, 100 ಜನ ಗೃಹ ರಕ್ಷಕ ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಪಡೆಯ 3 ತುಕಡಿ, ಕರ್ನಾಟಕ ರಾಜ್ಯ ಮೀಸಲು ಪಡೆಯಿಂದ ಒಂದು ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಗತ್ಯವಿರುವ ಕಡೆ ಬ್ಯಾರಿಕೇಡ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ:
ಜ.16ರಂದು ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕೆಎಸ್ಆರ್ಟಿಸಿ ವತಿಯಿಂದ ಘಾಟಿಯಿಂದ ದೊಡ್ಡಬಳ್ಳಾಪುರ, ಬೆಂಗಳೂರು, ಚಿಕ್ಕಬಳ್ಳಾಪುರ, ಗೌರಿಬಿದನೂರು, ಕೋಲಾರ ಮುಂತಾದ ಸ್ಥಳಗಳಿಗೆ 84 ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ದೊಡ್ಡಬಳ್ಳಾಪುರ ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕರು ತಿಳಿಸಿದ್ದಾರೆ.ನಾಟಕೋತ್ಸವ:
ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವದ ಅಂಗವಾಗಿ ನಾಟಕೋತ್ಸವ ಮತ್ತು ಸಾಂಸ್ಕೃತಿಕ ಉತ್ಸವಗಳು ಏರ್ಪಾಡಾಗಿವೆ. ವಿವಿಧ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳ ಪ್ರದರ್ಶನ, ಗಾಯನ, ನೃತ್ಯ, ಸಂಗೀತ, ಭಜನೆ ಇತ್ಯಾದಿ ಕಾರ್‍ಯಕ್ರಮಗಳು ನಡೆಯಲಿವೆ.-----ಫೋಟೋ-15ಕೆಡಿಬಿಪಿ3- ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ.
--15ಕೆಡಿಬಿಪಿ4- ಘಾಟಿ ಸುಬ್ರಹ್ಮಣ್ಯ ಸ್ವಾಮಿ ಮೂಲದೇವರು.