ಇಂದು ಶಾಂತಲಿಂಗ ಶ್ರೀಗಳ ಮೌನಲಿಂಗಾನುಷ್ಠಾನ ಮಂಗಲೋತ್ಸವ

| Published : Aug 05 2024, 12:33 AM IST

ಸಾರಾಂಶ

ಲಿಂ. ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪ್ರಭಾವಕ್ಕೊಳಗಾದ ಆನಂತರ ಶ್ರೀಗಳು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಯನ್ನು ನಿರಂತರವಾಗಿ ನಡೆಸಲಾರಂಭಿಸಿದರು

ಎಸ್.ಜಿ. ತೆಗ್ಗಿನಮನಿ ನರಗುಂದ

ತಾಲೂಕಿನ ಭೈರನಹಟ್ಟಿ ಶಾಂತಲಿಂಗ ಶ್ರೀಗಳ ೧೫ನೇ ಮೌನಲಿಂಗಾನುಷ್ಠಾನ ಮಂಗಲೋತ್ಸವ ಕಾರ್ಯಕ್ರಮವು ಆ. 5ರಂದು ಶಿರೋಳ ಶ್ರೀಮಠದಲ್ಲಿ ಜರುಗಲಿದೆ.

ಜಗದ್ಗುರು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಲಿದ್ದು. ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಸಮ್ಮುಖತ್ವ ವಹಿಸಲಿದ್ದು, ನವಲಗುಂದ ಗವಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದು, ಸಿಂಧನೂರ ಕಲ್ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯರು, ದೇವರಶೀಗೆ ಹಳ್ಳಿ ಮಡಿವಾಳೇಶ್ವರ ಮಠದ ಶ್ರೀವೀರೇಶ್ವರ ಮಹಾಸ್ವಾಮಿಗಳು, ಶಿರೋಳ ಹಿರೇಮಠದ ಶ್ರೀಅಪ್ಪಯ್ಯನವರು, ಗವಿಮಠದ ಶ್ರೀ ಅಭಿನವ ಯಚ್ಚರೇಶ್ವಸ್ವಾಮಿಗಳು, ಶಿವಯೋಗಾಶ್ರಮದ ಮಾತೆ ಅಕ್ಕಮಹಾದೇವಿ ಶರಣಮ್ಮನವರು, ಕಿತ್ತಲಿ ಸಿದ್ಧರಾಮೇಶ್ವರ ಮಠದ ಶ್ರೀ ಮಂಜುನಾಥ ಸ್ವಾಮಿಗಳು, ನರಗುಂದ ಮೈಹಬೂಬ್‌ ಸುಭಾನಿ ದರ್ಗಾದ ಬಾಬು ಅಜ್ಜನವರು ಹಾಗೂ ಅನೇಕ ಹರ-ಗುರು ಚರಮೂರ್ತಿಗಳು ಭಾಗವಹಿಸುವರು. ಶಾಸಕ ಸಿ.ಸಿ .ಪಾಟೀಲ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ, ವಿಪ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ್‌, ನಿವೃತ್ತ ಉಪನ್ಯಾಸಕ ಎಸ್.ಎಸ್ .ಹರ್ಲಾಪುರ, ಮೃತ್ಯುಂಜಯ ಹಿರೇಮಠ ಉಪಸ್ಥಿತರಿರುವರು.

1500ರಿಂದ 2000 ಜನಸಂಖ್ಯೆ ಹೊಂದಿದ ಭೈರನಹಟ್ಟಿ ಗ್ರಾಮದ ಹಿರೇಮಠದ ಶ್ರೀಭದ್ರಯ್ಯ ಹಾಗೂ ಮಾತೋಶ್ರೀ ಮಹಾದೇವಿ ತಾಯಿಯವರ ಗರ್ಭದಲ್ಲಿ ಜ. 6, 1976ರಲ್ಲಿ ಜನಿಸಿ ಶಿವಪುತ್ರಯ್ಯ ಎಂಬ ನಾಮದಿಂದ ಸ್ವಾಮಿತ್ವ ಸ್ವೀಕರಿಸುವ ಮೂಲಕ ನಾಡಿಗೆ ಚಿರಪರಿಚಿತರಾಗಿದ್ದಾರೆ.

ಬಾಲ್ಯದ ಶಿಕ್ಷಣವನ್ನು ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಮುಗಿಸಿ, ಆನಂತರ ಆಧ್ಯಾತ್ಮಿಕ ಶಿಕ್ಷಣವನ್ನು ಹಾವೇರಿಯ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಧಾರ್ಮಿಕ ಶಾಲೆಯಲ್ಲಿ ಪೂರೈಸಿ, 1996ರಲ್ಲಿ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯೋಜನೆಗೊಂಡರು. ಅಲ್ಲಿಂದ ಪ್ರಾರಂಭವಾದ ಸ್ವಾಮಿತ್ವದ ಹೆಜ್ಜೆಗಳು, ಅವರಲ್ಲಿ ಧಾರ್ಮಿಕ ಶ್ರದ್ಧೆ ಪಕ್ವಗೊಳಿಸಿದವು.

ಲಿಂ. ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪ್ರಭಾವಕ್ಕೊಳಗಾದ ಆನಂತರ ಶ್ರೀಗಳು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಯನ್ನು ನಿರಂತರವಾಗಿ ನಡೆಸಲಾರಂಭಿಸಿದರು.

ಮುಂದೆ 2011ರಲ್ಲಿ ಶಿವಪುತ್ರಯ್ಯ ಸ್ವಾಮೀಜಿಗಳ ಸ್ವಾಮಿತ್ವಕ್ಕೆ ಓರೆ ಹಚ್ಚುವ ಸಮಯ ಬಂತು. ಅದೇ ದೊರೆಸ್ವಾಮಿ ವಿರಕ್ತಮಠಕ್ಕೆ ಪೀಠಾಧಿಪತಿಗಳಾಗಿ ನೇಮಕಗೊಂಡು ಅಪ್ಪಟ ಬಸವ ತತ್ವ ಆರಾಧಕ ಲಿಂ. ಇಲಕಲ್ಲ ಮಹಾಂತಪ್ಪಗಳವರಿಂದ ಪೂಜನೀಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಎಂಬ ಅಭಿನಾಮದಿಂದ ಪೀಠಾರೋಹಣ ಕಾರ್ಯವು ಅದ್ಧೂರಿಯಾಗಿ ನೆರವೇರಿತು. ಈ ಹೊತ್ತಿಗಾಗಲೇ ಶ್ರೀಗಳ ಸಾಮಾಜಿಕ ಮತ್ತು ಧಾರ್ಮಿಕ ಕೆಲಸಗಳು ಈ ಭಾಗದ ಜನರ ಮನೆಮಾತಾಗಿ, ಇತರ ಯುವ ಮಠಾಧೀಶರು ನಿಬ್ಬೆರಗಾಗಿ ನೋಡುವಂತೆ ಮಾಡಿದವು. ಪಟ್ಟಾಧಿಕಾರಕ್ಕೂ ಮೊದಲೇ ಮೌನಲಿಂಗಾನುಷ್ಠಾನ ಆಚರಣೆ ಆರಂಭಿಸಿದ ಶ್ರೀಗಳು ಪ್ರತಿ ವರ್ಷ ಆಷಾಢ ಮಾಸದಲ್ಲಿ ಮೌನಲಿಂಗಾನುಷ್ಠಾನ ನಡೆಸುತ್ತಾರೆ.

ಸದ್ಯ ಶಿರೋಳ ಶ್ರೀ ತೋಂಟದಾರ್ಯ ಮಠದಲ್ಲಿ ಜು. 6ರಿಂದ ಪ್ರಾರಂಭಿಸಿದ್ದಾರೆ.

ಆಧುನಿಕ ಯುಗದಲ್ಲಿ ಜಾತಿ ವ್ಯವಸ್ಥೆ ಮೀರಿ ಎಲ್ಲ ಜಾತಿಯ ಸ್ವಾಮಿಗಳಂತೆ ಸಮಾಜಕ್ಕೆ ಸೇವೆ ಸಲ್ಲಿಸಿ, ಭಕ್ತರೆ ನಮ್ಮ ಮಠದ ಆಸ್ತಿ ಎಂದು ನೆರೆದಿರುವ ಶಾಂತಲಿಂಗ ಶ್ರೀಗಳ ಸೇವೆ ನಮಗೆಲ್ಲ ದಾರಿದೀಪವಾಗಿದೆ ಎಂದು ಶಿರೋಳ ಗಣ್ಯ ವ್ಯಾಪಾರಸ್ಥ ಲಾಲಸಾಬ್‌ ಅರಗಂಜಿ ತಿಳಿಸಿದ್ದಾರೆ.

ಕನ್ನಡ ಭಾಷೆಯನ್ನೆ ತಮ್ಮ ಉಸಿರಾಗಿಸಿಕೊಂಡು, ಭಾಷೆಗೆ ಅನ್ಯಾಯವಾದಾಗ ಧ್ವನಿ ಎತ್ತಿ ಕನ್ನಡ ಭಾಷೆ ರಕ್ಷಣೆ ಜತೆ ಬಡ ಜಂಗಮ ವಟುಗಳಿಗೆ ತಮ್ಮ ಭಿಕ್ಷೆಯಿಂದ ಬಂದಿರುವ ಹಣದಿಂದ ಉಚಿತ ವಸತಿ, ಪ್ರಸಾದ ಸೇವೆಯಿಂದ ನೂರಾರು ಜಂಗಮ ವಟುಗಳಿಂದ ಸಮಾಜ ಸುಧಾರಿಸುವ ಕಾರ್ಯ ಮಾಡಿದ್ದಾರೆ ಎಂದು ಶಿರೋಳದ ಕಲಾಲ ರೆಸಿಡೆನ್ಸಿ ಮಾಲೀಕ ಸಂಜಯ ಕಲಾಲ್‌ ಹೇಳಿದ್ದಾರೆ.