ಇಂದು ಪ್ರಸಿದ್ಧ ಬೆಂಗ್ಳೂರು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗ ಶಕ್ತ್ಯೋತ್ಸವ

| N/A | Published : Apr 12 2025, 01:30 AM IST / Updated: Apr 12 2025, 07:42 AM IST

ಇಂದು ಪ್ರಸಿದ್ಧ ಬೆಂಗ್ಳೂರು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗ ಶಕ್ತ್ಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗ ಶಕ್ತ್ಯೋತ್ಸವ (ಹೂವಿನ ಕರಗ) ಹಾಗೂ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅರ್ಚಕ ವಿ. ಜ್ಞಾನೇಂದ್ರ ಅವರು ಶನಿವಾರ ತಡರಾತ್ರಿ 15ನೇ ಬಾರಿಗೆ ಹೂವಿನ ಕರಗ ಹೊತ್ತು ಸಾಗಲಿದ್ದಾರೆ.

  ಬೆಂಗಳೂರು : ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗ ಶಕ್ತ್ಯೋತ್ಸವ (ಹೂವಿನ ಕರಗ) ಹಾಗೂ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅರ್ಚಕ ವಿ. ಜ್ಞಾನೇಂದ್ರ ಅವರು ಶನಿವಾರ ತಡರಾತ್ರಿ 15ನೇ ಬಾರಿಗೆ ಹೂವಿನ ಕರಗ ಹೊತ್ತು ಸಾಗಲಿದ್ದಾರೆ.

ಪೌರ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಮಲ್ಲಿಗೆ ಕಂಪು ಸೂಸುತ್ತ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಶನಿವಾರ ಮಧ್ಯರಾತ್ರಿ 12.30ಕ್ಕೆ ಚಾಲನೆ ದೊರೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಸೇರಿ ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಉತ್ಸವ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದಲೇ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಲಿವೆ. ಬೆಳಗ್ಗೆ 10.30ಕ್ಕೆ ಕರಗ ನಡೆಸಿಕೊಡುವ ಪೂಜಾರಿ ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು ಕಬ್ಬನ್​ ಪಾರ್ಕ್​ನ ಕರಗದ ಕುಂಟೆಯಲ್ಲಿ ದ್ರೌಪದಿದೇವಿಗೆ ಗಂಗೆ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಹೊತ್ತು ತಂದು ವಿಶೇಷ ಪೂಜೆ ನೆರವೇರಿಸಿ ದೇವಾಲಯಕ್ಕೆ ತೆರಳಲಿದ್ದಾರೆ. ಬಳಿಕ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ರಾತ್ರಿ ಹೂವಿನ ಕರಗ ಶಕ್ತ್ಯೋತ್ಸವ ಜರುಗಲಿದೆ.

ಮುಂಜಾನೆಯಿಂದಲೇ ಬಣ್ಣ ಬಣ್ಣದ ವಸ್ತುಗಳಿಂದ 40 ಅಡಿಯ ತೇರನ್ನು ಸಿಂಗರಿಸುವ ಕಾರ್ಯ ಆರಂಭವಾಗಲಿದೆ. ತೇರಿನ ಮೇಲೆ, ಕಲಶದ ಕೆಳಗೆ ಅರ್ಜುನ ಮತ್ತು ದ್ರೌಪದಿಯರ ಮೂರ್ತಿಗಳೊಂದಿಗೆ ವೀರ ಹನುಮಂತನ ಮೂರ್ತಿಯನ್ನೂ ವಿಶೇಷವಾಗಿ ಅಲಂಕರಿಸಲಾಗುತ್ತದೆ.

ಉತ್ಸವಕರ್ತರು ಮತ್ತು ವೀರಕುಮಾರರು ಪೂಜಾರಿಗಳೊಂದಿಗೆ ಸಾಗುವ ಮೆರವಣಿಗೆಯಲ್ಲಿ ಛತ್ರಿ, ಚಾಮರ, ಧ್ವಜದ ಜತೆಗೆ ನಾದಸ್ವರ ಮೊಳಗಲಿದೆ. ಅಲ್ಲಿಂದ ವಾಪಸ್​ ಬರುವಾಗ ವೀರಕುಮಾರರು ಹೊಂಗೆ ಹೂವಿನ ಗೊಂಚಲು ಕಿತ್ತುತಂದು ದೇವಸ್ಥಾನದಲ್ಲಿ ಮಂಟಪವನ್ನು ನಿರ್ಮಿಸುತ್ತಾರೆ. ಬಳಿಕ ಅರ್ಜುನ ಮತ್ತು ದ್ರೌಪದಿಯರ ವಿವಾಹ ಮಹೋತ್ಸವ ಕಾರ್ಯ ನೆರವೇರಲಿದೆ.

ರಾತ್ರಿಯಿಂದ ಬೆಳಗ್ಗೆವರೆಗೆ ಉತ್ಸವ:

ಕರಗ ಶಕ್ತ್ಯೋತ್ಸವ ಎಂದರೆ ಶಕ್ತಿ ದೇವತೆಯಾದ ದ್ರೌಪದಿ ಕರಗ, ಕುಂಭದಲ್ಲಿ ದುರ್ಗೆಯನ್ನು (ದ್ರೌಪದಿ) ಆವಾಹಿಸಿ, ಪೂಜಿಸಿ, ಹೂವಿನಿಂದ ಅಲಂಕಾರಗೊಂಡ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಶ್ರೀ ಧರ್ಮರಾಯ ದೇವಸ್ಥಾನದ ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಅರ್ಚಕ ಜ್ಞಾನೇಂದ್ರ ಕತ್ತಿ ಹಿಡಿದ ವೀರಕುಮಾರರ ನಡುವೆ ತಲೆಯ ಮೇಲೆ ಕರಗ ಹೊತ್ತು ಸಾಗಲಿದ್ದಾರೆ. ಹೀಗೆ ಮಧ್ಯರಾತ್ರಿ ದೇವಾಲಯದಿಂದ ಸಾಗುವ ಕರಗ ಉತ್ಸವ ಹಲವು ಪೇಟೆ ಬೀದಿಗಳಲ್ಲಿ ಸಂಚರಿಸಿ. ದೇವಾಲಯಗಳು ಹಾಗೂ ಕುಲಪುರೋಹಿತರ ಮತ್ತು ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ ಸೂಯೋರ್ದಯದ ವೇಳೆಗೆ ದೇವಾಲಯ ತಲುಪಲಿದೆ.

ಕರಗ ಸಂಚಾರ ಮಾರ್ಗ

ಧರ್ಮರಾಯಸ್ವಾಮಿ ದೇವಾಲಯದಿಂದ ಮಧ್ಯರಾತ್ರಿ ಬಿಜಯ ಮಾಡಿಸಿ ಹೊರಡುವ ಕರಗ ಉತ್ಸವ ಹಲಸೂರು ಪೇಟೆಯ ಆಂಜನೇಯಸ್ವಾಮಿ, ಶ್ರೀ ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್​ಪೇಟೆ, ಗಾಣಿಗರಪೇಟೆ, ದೊಡ್ಡಪೇಟೆಯಿಂದ ಕೆ.ಆರ್​. ಮಾರುಕಟ್ಟೆ ತಲುಪಲಿದ್ದ್ದು, ಈ ಮಾರ್ಗಗಳಲ್ಲಿನ ಎಲ್ಲ್ಲ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ನಂತರ ಮಸ್ತಾನ್​ ಸಾಹೇಬರ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯಕ್ಕೆ ತೆರಳಲಿದೆ. ಬಳಿಕ ಕಿಲಾರಿ ರಸ್ತೆ, ಯಲಹಂಕ ಗೇಟ್​, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆಗಳಲ್ಲಿರುವ ಕುಲಬಾಂಧವರ ಮನೆಗಳಲ್ಲಿ ಮತ್ತು ಭಕ್ತರಿಂದ ಪೂಜೆ ಮಾಡಿಸಿಕೊಂಡು ಹಾಲುಬೀದಿ, ಕಬ್ಬನ್​ಪೇಟೆ, ಸುಣ್ಣಕಲ್​ ಪೇಟೆ ಮಾರ್ಗವಾಗಿ ಕುಲಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ, ನರಸಿಂಹ ಜೋಯಿಸ್​ಗಲ್ಲಿ ಮೂರ್ಗವಾಗಿ ಸೂಯೋರ್ದಯದ ವೇಳೆಗೆ ದೇವಾಲಯವನ್ನು ತಲುಪಲಿದೆ.

ವಿಜೃಂಭಣೆಯಿಂದ ಜರುಗಿದ ಹಸಿ ಕರಗ

ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಗುರುವಾರ ತಡರಾತ್ರಿಯಿಂದ ಹಸಿ ಕರಗದ ಪೂಜಾ ವಿಧಾನಗಳು ನಡೆದವು. ಶುಕ್ರವಾರ ನಸುಕಿನಲ್ಲಿ ಹಸಿ ಕರಗ ಮೆರವಣಿಗೆ ಮೂಲಕ ಶ್ರೀ ಧರ್ಮ ರಾಯಸ್ವಾಮಿ ದೇವಸ್ಥಾನಕ್ಕೆ ತಲುಪಿತು. ವಿಶೇಷ ಪೂಜೆಯ ನಂತರ ಹೂವಿನ ವೇಷಭೂಷಣದೊಂದಿಗೆ ಸಿದ್ಧರಾಗಿದ್ದ ಅರ್ಚಕ ಎ. ಜ್ಞಾನೇಂದ್ರ ಒಂದು ಕೈಯಲ್ಲಿ ಕತ್ತಿ ಹಿಡಿದು, ಸೊಂಟದಲ್ಲಿ ಹಸಿ ಕರಗವನ್ನು ಹೊತ್ತು ಸಾಗಿದರು.

ಸಂಪಂಗಿ ಕೆರೆಯ ನಂತರ ಹಡ್ಸನ್ ವೃತ್ತದತ್ತ ಸಾಗಿ ಬಿಬಿಎಂಪಿಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿತು. ನಂತರ, ಶ್ರೀ ಧರ್ಮ ರಾಯಸ್ವಾಮಿ ದೇವಸ್ಥಾನವನ್ನು ತಲುಪಿತು.