ಕನ್ನಡಪ್ರಭ ವಾರ್ತೆ ಹಿರಿಯೂರು

ಸಾಹಿತ್ಯಾಸಕ್ತರಿಗೆ ಶನಿವಾರ ಹಬ್ಬದ ವಾತಾವರಣ. ನಗರದ ನೆಹರೂ ಮೈದಾನದಲ್ಲಿ ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು ಸಮ್ಮೇಳನ ಅಧ್ಯಕ್ಷರಾಗಿ ಪ್ರೊ.ಎಂ.ಜಿ.ರಂಗಸ್ವಾಮಿ ಕನ್ನಡದ ತೇರು ಎಳೆಯಲು ನಿಯೋಜನೆಗೊಂಡಿದ್ದಾರೆ.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೆಹರೂ ಮೈದಾನದಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಜೃಂಭಣೆಯ ಸಿದ್ಧತೆ ನಡೆದಿದೆ. ಮೈಸೂರಿನ ಬಂಡಾಯ ಸಾಹಿತಿ ಡಾ,ಕಾಳೇಗೌಡ ನಾಗವಾರ ಉದ್ಘಾಟನೆ ಮಾಡಲಿದ್ದು ಕಾರ್ಯಕ್ರಮದ ಉಸ್ತುವಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ವಹಿಸಲಿದ್ದಾರೆ. ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಆರ್ ಮಹೇಶ್ ಆಶಯ ನುಡಿಗಳನ್ನು ಮಾತಾಡಲಿದ್ದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ರುದ್ರಣ್ಣ ಹರ್ತಿಕೋಟೆ, ಲೋಕಸಭಾ ಸದಸ್ಯ ಗೋವಿಂದ ಎಂ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ಡಿ,ಟಿ, ಶ್ರೀನಿವಾಸ್, ಎಂ ಚಿದಾನಂದ ಗೌಡ, ಕೆಎಸ್ ನವೀನ್, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್ ಇತರರು ಹಾಜರಿರಲಿದ್ದಾರೆ.

ಮೊದಲಿಗೆ ತಾಲೂಕಿನ ಇತಿಹಾಸ ಮತ್ತು ಸಂಸ್ಕೃತಿ ಗೋಷ್ಠಿ ನಡೆಯಲಿದ್ದು ಹಿರಿಯೂರಿನ ಜಾನಪದ ಮತ್ತು ಸಂಸ್ಕೃತಿ ಕುರಿತು ಚಂದ್ರಯ ಬೆಳವಾಡಿ, ತಾಲೂಕಿನ ನೀರಾವರಿ ಅಭಿವೃದ್ಧಿಯ ಚಿಂಥನ ಮಂಥನ ಕುರಿತು ರೈತ ಮುಖಂಡ ಕೆ.ಸಿ. ಹೊರಕೇರಪ್ಪ, ತಾಲೂಕಿನ ಬುಡಕಟ್ಟು ಸಂಸ್ಕೃತಿಯ ವಿಶಿಷ್ಟತೆ ಕುರಿತು ಉಪನ್ಯಾಸಕ ಜಿಡಿ ಚಿತ್ತಣ್ಣ,ರಂಗಭೂಮಿಗೆ ಹಿರಿಯೂರು ತಾಲೂಕಿನ ಕೊಡುಗೆ ಕುರಿತು ಎಸ್.ಜಿ. ರಂಗಸ್ವಾಮಿ ಸಕ್ಕರ ವಿಷಯ ಮಂಡನೆ ಮಾಡಲಿದ್ದು ಅಧ್ಯಕ್ಷತೆಯನ್ನು ಡಾ. ಡಾ ವಿ ಬಸವರಾಜ್ ವಹಿಸಲಿದ್ದಾರೆ. ಆಶಯ ನುಡಿಗಳನ್ನು ಡಾ.ಡಿ.ಧರಣೇಂದ್ರಯ್ಯ ಆಡಲಿದ್ದಾರೆ. ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ನಿರ್ಣಯ ಮಂಡನೆ ಹಾಗೂ ಸಮಾರೋಪ ಸಮಾರಂಭದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

ಸಮ್ಮೇಳನದ ವಿಶೇಷತೆ:


ಹಿರಿಯೂರಿನ ಇತಿಹಾಸದಲ್ಲಿ 2003ರಲ್ಲಿ ಮೊದಲನೇ ಸಾಹಿತ್ಯ ಸಮ್ಮೇಳನ ನಡೆದಿದ್ದು ಸರ್ವಾಧ್ಯಕ್ಷರಾಗಿ ಪ್ರೊ.ಚಿ. ರಾಮಸ್ವಾಮಿ ಆಯ್ಕೆಯಾಗಿದ್ದರು. ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹರ್ತಿಕೋಟೆ ವೀರಭದ್ರಪ್ಪ, ಮೂರನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮಾರೇನಹಳ್ಳಿ ಭೀಮಯ್ಯ, ನಾಲ್ಕನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಣಜನಹಳ್ಳಿ ನಾಗರಾಜ್, ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ ಜಿ ಶರಣಪ್ಪ ,ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ ಜೆ. ಕರಿಯಪ್ಪ ಮಾಳಿಗೆ, ಏಳನೇ ಕನ್ನಡ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ ಎಂ.ಜಿ.ರಂಗಸ್ವಾಮಿ ಆಯ್ಕೆಯಾಗಿದ್ದಾರೆ.

ಸಾಹಿತ್ಯ ಸಮ್ಮೇಳನದ ದೃಷ್ಟಿಯಿಂದ ನಗರದಲ್ಲಿ ಸಡಗರ ಮತ್ತು ಸಂಭ್ರಮ ಮನೆ ಮಾಡಿದ್ದು ಸಾಹಿತ್ಯಾಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಸಾಹಿತ್ಯಾಸಕ್ತಿ ಕಡಿಮೆ ಹೊತ್ತಲ್ಲಿ ಸಮ್ಮೇಳನ ಶ್ಲಾಘನೀಯ

ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಸಕ್ಕರ ರಂಗಸ್ವಾಮಿ ಪ್ರತಿಕ್ರಿಯಿಸಿ ಹಿರಿಯೂರಿನಲ್ಲಿ 2003ರಂದು ಮೊದಲ ಸಾಹಿತ್ಯ ಸಮ್ಮೇಳನ ನಡೆಯಿತು. ಅಲ್ಲಿಂದ ಇಲ್ಲಿಯವರೆಗೆ ಏಳು ಸಮ್ಮೇಳನಗಳು ನಡೆದಿವೆ. ಏಳು ಸಾಹಿತ್ಯ ಸಮ್ಮೇಳನಗಳನ್ನು ಸಹ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ನಾನು ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವುದು ಸಂತೋಷ ತಂದಿದೆ. ಸಾಹಿತ್ಯ ಸಮ್ಮೇಳನಗಳ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕಿದೆ. ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿರುವ ಈ ಹೊತ್ತಲ್ಲಿ ಸಮ್ಮೇಳನ ನಡೆಯುತ್ತಿರುವುದು ಜನತೆಗೆ ಸಂತೋಷ, ಸಡಗರ ತಂದಿದೆ ಎಂದರು.