ಇಂದು ವರಮಹಾಲಕ್ಷ್ಮಿ: ಭರ್ಜರಿ ಖರೀದಿ

| Published : Aug 08 2025, 01:02 AM IST

ಇಂದು ವರಮಹಾಲಕ್ಷ್ಮಿ: ಭರ್ಜರಿ ಖರೀದಿ
Share this Article
  • FB
  • TW
  • Linkdin
  • Email

ಸಾರಾಂಶ

ದುರ್ಗದಬೈಲ್‌, ಗಾಂಧಿ ಮಾರ್ಕೆಟ್‌, ಜನತಾ ಬಜಾರ್‌ನಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಎಂದಿಗಿಂತ ಜನಸಂದಣಿ ಹೆಚ್ಚಿತ್ತು. ವಿಶೇಷವಾಗಿ ಹೂವು- ಹಣ್ಣು, ಬಾಳೆದಿಂಡು, ತಳಿರು- ತೋರಣ ಖರೀದಿಗೆ ಜನತೆ ಮುಗಿಬಿದ್ದಿದ್ದು ಕಂಡು ಬಂತು.

ಹುಬ್ಬಳ್ಳಿ: ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಮಹಾನಗರದ ಮಾರುಕಟ್ಟೆಯಲ್ಲಿ ಗುರುವಾರ ಭರ್ಜರಿ ಖರೀದಿ ನಡೆಯಿತು. ಹೂವು- ಹಣ್ಣು, ತರಕಾರಿ ಬೆಲೆ ಏರಿಕೆ ಮಧ್ಯೆಯೂ ಹಬ್ಬದ ಸಂಭ್ರಮ ಇಮ್ಮಡಿಸಿದ್ದು ಮಾರುಕಟ್ಟೆಯಲ್ಲಿ ಕಂಡು ಬಂತು.

ಇಲ್ಲಿಯ ದುರ್ಗದಬೈಲ್‌, ಗಾಂಧಿ ಮಾರ್ಕೆಟ್‌, ಜನತಾ ಬಜಾರ್‌ನಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಎಂದಿಗಿಂತ ಜನಸಂದಣಿ ಹೆಚ್ಚಿತ್ತು. ವಿಶೇಷವಾಗಿ ಹೂವು- ಹಣ್ಣು, ಬಾಳೆದಿಂಡು, ತಳಿರು- ತೋರಣ ಖರೀದಿಗೆ ಜನತೆ ಮುಗಿಬಿದ್ದಿದ್ದು ಕಂಡು ಬಂತು.

ಅದರಲ್ಲೂ ಸಂಜೆ ಹೊತ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಕೆಟ್‌ನತ್ತ ಧಾವಿಸಿದ್ದರಿಂದ ಜನಸಂದಣಿ ಹೆಚ್ಚಳಗೊಂಡು, ವಾಹನ ಸವಾರರು ಟ್ರಾಫಿಕ್‌ ಕಿರಿಕಿರಿ ಸಹ ಅನುಭವಿಸಬೇಕಾಯಿತು.

ಸಾಮಾನ್ಯ ದಿನಕ್ಕಿಂತ ಹೂವು-ಹಣ್ಣು ₹30 ರಿಂದ ₹80ರ ವರೆಗೆ ಹೆಚ್ಚಿನ ಬೆಲೆಗೆ ಮಾರಾಟಗೊಂಡವು. ಮಲ್ಲಿಗೆ ಹೂವು ₹100ಕ್ಕೆ (ಮಾರು), ಸೇವಂತಿ ₹100-150, ಕನಕಾಂಬರ ₹150-200 ಹಾಗೂ ಚೆಂಡು ಹೂವು ₹20-40ರ ವರೆಗೆ ಮಾರಾಟಗೊಂಡವು. ಅದರಂತೆ ಸೇಬುಹಣ್ಣು ₹250-300(ಕೆಜಿ), ಮೋಸಂಬಿ-₹100-150, ಕಿತ್ತಳೆ ₹200, ಬಾಳೆಹಣ್ಣು ₹100, ದಾಳಿಂಬೆ- ₹200-250 ಮಾರಾಟಗೊಂಡಿತು.

ಈ ಕುರಿತು ಪ್ರತಿಕ್ರಿಯಿಸಿದ ವ್ಯಾಪಾರಿ ರಮೇಶ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವು ಮತ್ತು ಹಣ್ಣುಗಳ ಪೂರೈಕೆ ಆಗುತ್ತಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಮತ್ತು ಹೂವು ತರಿಸಿಕೊಂಡರೆ, ಅವುಗಳ ಮಾರಾಟವಾಗದಿದ್ದರೆ, ಅವುಗಳ ಸಂಗ್ರಹಣೆ, ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಅಲ್ಪ ಪ್ರಮಾಣದಲ್ಲಿ ತರಲಾಗಿತ್ತು. ಆದರೆ, ಎಂದಿಗಿಂತ ಬೇಡಿಕೆ ಜಾಸ್ತಿ ಇದೆ ಎಂದು ಹೇಳಿದರು.

ಟ್ರಾಫಿಕ್‌ ಕಿರಿಕಿರಿ: ದುರ್ಗದಬೈಲ್‌, ಜನತಾ ಬಜಾರ್‌, ಗಾಂಧಿ ಮಾರ್ಕೆಟ್‌, ಬಟರ್‌ ಮಾರ್ಕೆಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿ ಸೇರಿದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಟ್ರಾಫಿಕ್‌ ಸಮಸ್ಯೆ ಉಂಟಾಯಿತು. ಇಲ್ಲಿಯ ಕೊಪ್ಪಿಕರ ರಸ್ತೆ, ದಾಜಿಬಾನಪೇಟೆ, ಸ್ಟೇಷನ್‌, ಲ್ಯಾಮಿಂಗ್ಟನ್‌, ಪಿಂಟೋ ರಸ್ತೆ, ಚನ್ನಮ್ಮ ವೃತ್ತ, ಕಾರವಾರ ರಸ್ತೆಗಳಲ್ಲಿ ಸಂಜೆ ವೇಳೆಗೆ ತೀವ್ರ ಟ್ರಾಫಿಕ್‌ ಸಮಸ್ಯೆ ಉಂಟಾಗಿ ವಾಹನ ಸವಾರರು ಪರದಾಡಿದರು.