ಇಂದು ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಚಾಲನೆ
KannadaprabhaNewsNetwork | Published : Oct 15 2023, 12:45 AM IST
ಇಂದು ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಚಾಲನೆ
ಸಾರಾಂಶ
ಮಡಿಕೇರಿಯ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವತೆಗಳ ಕರಗವು ನಗರದ ಪಂಪಿನ ಕೆರೆಯಿಂದ ಭಾನುವಾರ ಸಂಜೆ 5 ಗಂಟೆಗೆ ಹೊರಡಲಿದ್ದು, ಮುಂದಿನ ಒಂಬತ್ತು ದಿನಗಳ ಕಾಲ ನಗರ ಪ್ರದಕ್ಷಿಣೆ ನಡೆಸಲಿದೆ.
ಮೋಹನ್ ರಾಜ್ ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಅ.15ರಂದು ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರವನ್ನು ಆರಂಭಿಸುವ ಮೂಲಕ ದಸರಾ ಉತ್ಸವಕ್ಕೆ ವೈಭವದ ಚಾಲನೆ ಸಿಗಲಿದೆ. ಮಡಿಕೇರಿಯ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವತೆಗಳ ಕರಗವು ನಗರದ ಪಂಪಿನ ಕೆರೆಯಿಂದ ಭಾನುವಾರ ಸಂಜೆ 5 ಗಂಟೆಗೆ ಹೊರಡಲಿದ್ದು, ಮುಂದಿನ ಒಂಬತ್ತು ದಿನಗಳ ಕಾಲ ನಗರ ಪ್ರದಕ್ಷಿಣೆ ನಡೆಸಲಿದೆ. ಈ ಬಾರಿ ಮಡಿಕೇರಿ ದಸರಾಗೆ ಸರ್ಕಾರದಿಂದ 75 ಲಕ್ಷ ರು. ಅನುದಾನ ಘೋಷಣೆ ಮಾಡಲಾಗಿದೆ. ನಗರದ ಗಾಂಧಿ ಮೈದಾನದಲ್ಲಿ ಅ.16ರಿಂದ 24ರ ವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾಡ ಹಬ್ಬವನ್ನು ಯಶಸ್ವಿಗೊಳಿಸುವಂತೆ ಮಡಿಕೇರಿ ನಗರ ದಸರಾ ಸಮಿತಿ ಮನವಿ ಮಾಡಿದೆ. * ಐತಿಹಾಸಿಕ ಹಿನ್ನೆಲೆ ಮಡಿಕೇರಿ ದಸರಾಕ್ಕೂ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇರುವಷ್ಟೇ ಮಹತ್ವವಿದೆ. ಐತಿಹಾಸಿಕ ಮಡಿಕೇರಿ ದಸರಾಕ್ಕೆ ಸುಮಾರು ಇನ್ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಕೊಡಗಿನಲ್ಲಿ ರಾಜರ ಆಳ್ವಿಕೆಯ ಕಾಲದಲ್ಲಿ ಮಡಿಕೇರಿ ಜನರನ್ನು ಸಾಂಕ್ರಾಮಿಕ ರೋಗವೊಂದು ಕಾಡಿತ್ತು. ಇದರಿಂದ ಅಪಾರ ಸಾವು ನೋವು ಉಂಟಾಗಿತ್ತು. ಈ ಸಂದರ್ಭ ರಾಜರು ನಗರದ ನಾಲ್ಕು ಶಕ್ತಿ ದೇವೆತಗಳನ್ನು ಮಡಿಕೇರಿಯಲ್ಲಿ ಪ್ರತಿಷ್ಠಾಪಿಸಿ ಕರಗಹೊರಡಿಸಿ ಪೂಜಿಸುತ್ತಿದ್ದರು. ಈ ದೇವತೆಗಳ ಕರಗಗಳು ನಗರ ಪ್ರದಕ್ಷಿಣ ನಡೆಸಿದ ನಂತರ ಸಾಂಕ್ರಾಮಿಕ ರೋಗ ಮಾಯವಾಯಿತೆಂಬ ಐತಿಹ್ಯವಿದೆ. ಅಂದಿನಿಂದ ಪ್ರತಿ ವರ್ಷ ಮಡಿಕೇರಿಯಲ್ಲಿ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ಸತತ 50 ವರ್ಷಗಳ ಕಾಲ ದಂಡಿನಮಾರಿಯಮ್ಮ ದೇವಾಲಯದ ಕರಗ ಹೊತ್ತಿರುವ ಉಮೇಶ್ ಪೂಜಾರಿ ಅವರು 51ನೇ ವರ್ಷ ಕರಗ ಹೋರುತ್ತಿರುವುದು ವಿಶೇಷವಾಗಿದೆ. ಇವರು ತಮ್ಮ 14ನೇ ವಯಸ್ಸಿನಿಂದಲೂ ಕರಗ ಹೊರುತ್ತಿದ್ದಾರೆ. * ಚುರುಕುಗೊಂಡ ಪ್ರವಾಸೋದ್ಯಮ: ದಸರಾ ಹಾಗೂ ಕಾವೇರಿ ಸಂಕ್ರಮಣ ಹಿನ್ನೆಲೆ ಕೊಡಗಿನ ಬಹುತೇಕ ಎಲ್ಲಾ ರೆಸಾರ್ಟ್ ಹಾಗೂ ಹೋಂ ಸ್ಟೇಗಳು ಈಗಾಗಲೇ ಮುಂಗಡವಾಗಿ ಬುಂಕಿಂಗ್ ಆಗಿದ್ದು, ಪ್ರವಾಸೋದ್ಯಮ ಅವಲಂಬಿತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿರುವ ಹಿನ್ನೆಲೆ ಜನ ಕುಟುಂಬಸ್ಥರಾಗಿ ಜಿಲ್ಲೆಯತ್ತ ಆಗಮಿಸುತ್ತಿದ್ದಾರೆ ಇದರಿಂದಾಗಿ ಪ್ರವಾಸೋದ್ಯಮ ಚುರುಕು ಪಡೆದುಗೊಂಡಿದ್ದು, ಜಿಲ್ಲೆಯ ವ್ಯಾಪಾರೋದ್ಯಮಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಸೇರಿದಂತೆ ಹಲವು ಮಂದಿಯ ಆರ್ಥಿಕತೆಗೂ ಇದು ಅನುಕೂಲವಾಗಲಿದೆ. ಇಂದಿನಿಂದ ಐತಿಹಾಸಿಕ ದಸರಾ ಪ್ರಾರಂಭವಾಗಲಿದೆ. ಜತೆಗೆ 17ರಂದು ಕಾವೇರಿ ಸಂಕ್ರಮಣ ಇರುವ ಹಿನ್ನೆಲೆ ಜಿಲ್ಲೆಗೆ ಲಕ್ಷಾಂತರ ಮಂದಿ ಭೇಟಿ ನೀಡಲಿದ್ದಾರೆ. ಇದರಿಂದಾಗಿ ಮಡಿಕೇರಿಯಲ್ಲಿ ಜನಜಂಗುಳಿ ಹೆಚ್ಚಾಗಲಿದ್ದು, ಈ ಸಂದರ್ಭ ಜನತೆಗೆ ತೊಂದರೆ ಆಗದಂತೆ ತಡೆಯಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಪೊಲೀಸ್ ಕಣ್ಗಾವಲನ್ನು ಹೆಚ್ಚಿಸಲಾಗಿದೆ. । ಕೆ.ರಾಮರಾಜನ್, ಪೊಲೀಸ್ ವರಿಷ್ಠಾಧಿಕಾರಿ ಕೊಡಗು ಜಿಲ್ಲೆ