ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ನಮ್ಮ ಆಧಾರ ಸ್ತಂಭಗಳಿದ್ದಂತೆ. ಚುನಾವಣೆಗಳು ಪಾರದರ್ಶಕವಾಗಿ ನಡೆದಲ್ಲಿ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ನಂಬಿಕೆಯಿಂದ ದೃಢವಾಗಿ ಕೆಲಸ ಮಾಡುತ್ತದೆ. ಆದರೆ ಇಂದು ಚುನಾವಣಾ ವ್ಯವಸ್ಥೆಯ ಮೇಲೆ ನಾನಾ ರೀತಿಯ ಪ್ರಶ್ನೆಗಳು ಏಳುತ್ತಿವೆ. ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎನ್ನುವುದು ಪ್ರತಿಯೊಬ್ಬ ಪ್ರಜೆಯ ಆಶಯವಾಗಿದೆ ಎನ್ನುವ ಮೂಲಕ ಕಂದಾಯ ಸಚಿವ ಹಾಗೂ ಜಿಲ್ಲೆಯ ನೂತನ ಉಸ್ತುವಾರಿ ಸಚಿವರೂ ಆದ ಕೃಷ್ಣಭೈರೇಗೌಡರು ರಾಹುಲ್ ಗಾಂಧಿ ಎತ್ತಿರುವ ಮತಗಳ್ಳತನದ ಆರೋಪಕ್ಕೆ ಇಂಬು ನೀಡಿದರು.ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ, ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಲು ಮುಂದಾದ ಸಚಿವರು ಸಂದೇಶ ನೀಡುವುದನ್ನು ಬಿಟ್ಟು ತಮ್ಮ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಮಾಡಿರುವ ಮತಗಳ್ಳತನದ ಆರೋಪಕ್ಕೆ ಪುಷ್ಠಿ ನೀಡುವ ದಾಟಿಯಲ್ಲಿ ಮಾತನಾಡಿದರು. ಮಾತನಾಡುವ ಭರಾಟೆಯಲ್ಲಿ ಚುನಾವಣಾ ಆಯೋಗದ ಮೇಲೆಯೇ ಶಂಕೆ ವ್ಯಕ್ತಪಡಿಸಿದರು.ಚುನಾವಣೆ ಆಯೋಗ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣೆಗಳು ಪಾರದರ್ಶಕವಾಗಿ ನ್ಯಾಯ ಸಮ್ಮತವಾಗಿ ನಡೆದಲ್ಲಿ ಮಾತ್ರ ನಾವು ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದಲ್ಲಿ ನಾವೇ ಅದನ್ನು ಕಳೆದುಕೊಳ್ಳುವಂತೆ ಆಗಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಜೀವ ಕಳೆದುಕೊಳ್ಳದ ರೀತಿಯಲ್ಲಿ ಚುನಾವಣಾ ಆಯೋಗ ಕೆಲಸ ಮಾಡಬೇಕು ಎಂದು ತಿಳಿಸಿದರು. ಗ್ಯಾರಂಟಿಗಳ ಭುಜ ತಟ್ಟಿಕೊಂಡ ಸಚಿವರು:ದೇಶದಲ್ಲಿ ಅತೀ ಹೆಚ್ಚು ಸರಾಸರಿ ತಲಾ ಆದಾಯ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಮೊದಲ ಸ್ಥಾನದಲ್ಲಿದೆ. ಅದೇ ರೀತಿಯಾಗಿ ದೇಶದಲ್ಲಿ ಎರಡನೇ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕವಾಗಿದೆ. ಇದಕ್ಕೆ ಗ್ಯಾರೆಂಟಿ ಯೋಜನೆಗಳು ಮತ್ತು ಕಷ್ಟಪಟ್ಟು ದುಡಿಯುವ ನಮ್ಮ ಕನ್ನಡಿಗರು ಕಾರಣರಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಭುಜ ತಟ್ಟಿದರು. ದೇಶದ ಆರ್ಥಿಕತೆಯಲ್ಲಿ ಪ್ರತಿಯೊಬ್ಬರಿಗೂ ಸಮಪಾಲು ಸಿಗಬೇಕು ಎಂದು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡಿ ಜನರಲ್ಲಿ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡುತ್ತಿದೆ. ನಮ್ಮ ಸರ್ಕಾರ ಬಂದು ಎರಡು ವರ್ಷ ಪೂರೈಸಿದೆ. ಈ ಎರಡು ವರ್ಷದಲ್ಲಿ ನಾಲ್ಕುವರೆ ಕೋಟಿ ಕನ್ನಡಿಗರಿಗೆ ಇಲ್ಲಿಯವರೆಗೆ ಒಂದು ಲಕ್ಷ ಕೋಟಿ ರುಪಾಯಿಗಳನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡುವ ಮೂಲಕ ಕನ್ನಡಿಗರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು. ನಮ್ಮ ಗ್ಯಾರಂಟಿ ಯೋಜನೆಗಳ ಪ್ರಯೋಜನಕ್ಕಾಗಿ ಯಾವ ಕಚೇರಿಯ ಬಳಿಯಲ್ಲಿಯೂ ಸಾಲಾಗಿ ನಿಲ್ಲುವ, ಬಾಗಿಲನ್ನು ಕಾಯುವಂತಹ ಅವಶ್ಯಕತೆಯೂ ಇಲ್ಲ. ಜೊತೆಗೆ ಯಾವುದೇ ರೀತಿಯ ಲಂಚವಿಲ್ಲದೆಯೇ ಯಾವ ಮಧ್ಯವರ್ತಿಗೂ ಕೈಜೋಡಿಸುವ ಅವಶ್ಯಕತೆ ಇಲ್ಲದಂತೆ ಯೋಜನೆಗಳ ಪಡೆದುಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದ್ದೇವೆ. ಬಹುಶಃ ಪ್ರಪಂಚದಲ್ಲಿ ಈ ರೀತಿಯಲ್ಲಿ ಜನರಿಗೆ ಪಾರದರ್ಶಕವಾಗಿ ಆರ್ಥಿಕ ಶಕ್ತಿಯನ್ನು ತುಂಬುವ ಯೋಜನೆ ಮತ್ತೊಂದು ಇಲ್ಲ ಎಂದು ತಿಳಿಸಿದರು.
ಶ್ರೀಮಂತ-ಬಡವರ ನಡುವಿನ ಅಂತರ ಹೆಚ್ಚುತ್ತಿದೆ. ಇಂದು ದೇಶ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ ಎಂದರೆ ಅದರಲ್ಲಿ ಬಹಳ ದೊಡ್ಡ ಪಾಲನ್ನು ಕನ್ನಡಿಗರು ಕೊಡುತ್ತಿದ್ದಾರೆ. ನಮ್ಮ ದುಡಿಮೆ ಇಂದು ದೇಶದ ಪ್ರಗತಿಗೆ ಸಹಾಯವಾಗುತ್ತಿದೆ. ನಮ್ಮ ಕನ್ನಡಿಗರ ಕೊಡುಗೆ ಇಂದು ದೇಶವನ್ನು ಮೇಲಕ್ಕೆ ಎತ್ತುತ್ತಿದೆ. ತೆರಿಗೆ ಮತ್ತು ನೀರಿನ ವಿಷಯದಲ್ಲಿ ರಾಜ್ಯದ ಪಾಲು ಹೆಚ್ಚಿದ್ದು, ನಮ್ಮ ಪಾಲು ನಮಗೆ ಸಿಗಬೇಕು. ಅದನ್ನು ಪಡೆದುಕೊಳ್ಳುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎನ್ನುವ ಮೂಲಕ ರಾಜ್ಯದ ಪಾಲಿನ ಜಿಎಸ್‌ಟಿ ಹಣ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಬೆಂಬಲ ಸೂಚಿಸಿದಂತಿತ್ತು.ಸ್ವಾತಂತ್ರ್ಯ ಬಂದ ನಂತರ ಬಡವರು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಾ ಬಂದಿದ್ದೇವೆ. ಆದರೆ ಇಂದು ಪುನಃ ಶ್ರೀಮಂತರು ಬಡವರ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದೆ. ಸಾಮಾನ್ಯ ಜನರು ಕಷ್ಟಪಟ್ಟು ದುಡಿದ ದುಡಿಮೆ, ದೇಶದ ಸಂಪತ್ತಿನಲ್ಲಿ ಬಹುಪಾಲು ಇಂದು ಕೆಲವೇ ಕೆಲವು ಶ್ರೀಮಂತರ ಪಾಲಾಗುತ್ತಿದೆ. ಇದು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ. ಇಂದು ದೇಶ ಸುಭದ್ರವಾಗಿ ಇರಬೇಕೆಂದರೆ ಶ್ರೀಮಂತರು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಬೇಕು ಎಂದರು.ರಾಜ್ಯದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಉತ್ತಮ ಮಳೆಯಾಗಿರುವುದು ರೈತರ ಬದುಕನ್ನು ಹಸನಾಗಿಸಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ನಾವು ಭಾರತೀಯರಾಗಿ ಬದುಕುತ್ತಿದ್ದೇವೆ. ಸ್ವತಂತ್ರವಾಗಿ ಉಸಿರಾಡುತ್ತಿದ್ದೇವೆ, ಯಾರದೋ ದಾಸ್ಯದಲ್ಲಿ ಬದುಕುತ್ತಿಲ್ಲ ಎಂದರೆ ಅದಕ್ಕೆ ಕಾರಣ ಸ್ವಾತಂತ್ಯಕ್ಕಾಗಿ ಹೋರಾಟ ಮಾಡಿ ಮಡಿದಂತ ಮಾನ್ಯರು. ಮನೆ ಮಠ ಸರ್ವಸ್ವವನ್ನು ಬಿಟ್ಟು ಅವರು ಹೋರಾಟ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನದ ಹೋರಾಟವನ್ನು ಎಂದೆಂದಿಗೂ ಸ್ಮರಿಸುವಂತಹದ್ದು, ಅವರಿಗೆ ನಮನಗಳನ್ನು ಸಲ್ಲಿಸುವುದು ನಮ್ಮ ಕರ್ತವ್ಯ ಆಗಿದೆ ಎಂದು ತಿಳಿಸಿದರು.ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ರಾಜ್ಯ ಮತ್ತು ಹಾಸನ ಜಿಲ್ಲೆಯ ಅನೇಕ ಮಹನೀಯರು ಅವರದ್ದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಕೂಡ ಸ್ಮರಿಸಿಕೊಳ್ಳುವುದು ನಮ್ಮ ಧರ್ಮ ಎಂದರು.ಧ್ವಜಾರೋಹಣದ ಮಾಡಿದ ಸಚಿವರು ಭಾಷಣ ಮುಗಿಸಿದ ನಂತರ ಪೊಲೀಸ್, ಎನ್‌ಸಿಸಿ, ಸ್ಕೌಟ್ ಅಂಡ್ ಗೈಡ್ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿ ತಂಡಗಳು ಪಥ ಸಂಚಲನ ನಡೆಸಿದವು.ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಮಹಾನಗರ ಪಾಲಿಕೆಯ ಮಹಾಪೌರರಾದ ಚಂದ್ರೇಗೌಡ, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ಮತ್ತಿತರರು ಹಾಜರಿದ್ದರು.