ಇಂದು ಸ್ಪೀಕರ್‌ ಭ್ರಷ್ಟರ ರಕ್ಷಣೆ ಮಾಡುವ ಪರಿಸ್ಥಿತಿ ಬಂದಿದೆ: ಮಾಜಿ ಸ್ಪೀಕರ್‌ ರಮೇಶ್ ಕುಮಾರ್ ಬೇಸರ

| Published : Jul 02 2024, 01:37 AM IST

ಇಂದು ಸ್ಪೀಕರ್‌ ಭ್ರಷ್ಟರ ರಕ್ಷಣೆ ಮಾಡುವ ಪರಿಸ್ಥಿತಿ ಬಂದಿದೆ: ಮಾಜಿ ಸ್ಪೀಕರ್‌ ರಮೇಶ್ ಕುಮಾರ್ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಪ್ರಾಮಾಣಿಕ ರಾಜಕಾರಣಿಗಳು ಜೀವಂತ ಜ್ವಾಲೆಗಳಂತೆ ಬದುಕಬೇಕಾಗಿದೆ. ಸಾಮಾಜಿಕ ಮೌಲ್ಯದ ತಂಬೆಳಕಿನ ದೀಪ ಆರಿಹೋಗದಂತೆ ನೋಡಿಕೊಳ್ಳಬೇಕಾಗಿದೆ. ಆದರೆ, ಬೀಸುವ ಗಾಳಿ ಮಾತ್ರ ಚಂಡಮಾರುತದಂತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಳಂಕ ರಹಿತವಾಗಿ ಕೆಲಸ ಮಾಡಬೇಕಾದ ವಿಧಾನ ಸಭಾಧ್ಯಕ್ಷರು ಇಂದು ತಪ್ಪು ಮಾಡಿದ ಭ್ರಷ್ಟ ಮಂತ್ರಿಗಳು, ಶಾಸಕರನ್ನು ಹಾಗೂ ಸರ್ಕಾರವನ್ನು ರಕ್ಷಿಸಬೇಕಾದ ಜವಾಬ್ದಾರಿ ಬಿದ್ದಿದೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಮಾಜಿ ಸ್ಪೀಕರ್ ದಿ.ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದಿಂದ ಕೃಷ್ಣ ಅವರ 84ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ಮತ್ತು ಕೃಷ್ಣ ಅವರು ಸ್ಪೀಕರ್ ಹುದ್ದೆಯ ಗೌರವಕ್ಕೆ ಚ್ಯುತಿಬಾರದಂತೆ ಕೆಲಸ ಮಾಡಿದ್ದೇವೆ. ಇಂದು ಸ್ಪೀಕರ್ ಹುದ್ದೆಯಲ್ಲಿ ಕುಳಿತುಕೊಂಡವರು ಎಷ್ಟೇ ತಪ್ಪುಗಳು ನಡೆದರೂ ಕಣ್ಣುಮುಚ್ಚಿ ಕುಳಿತುಕೊಳ್ಳಬೇಕಿದೆ. ತಪ್ಪು ಮಾಡಿದ ಮಂತ್ರಿಗಳು, ಶಾಸಕರು ಮತ್ತು ಸರ್ಕಾರವನ್ನು ರಕ್ಷಿಸುವ ಕೆಲಸಗಳು ಸ್ಪೀಕರ್‌ಗಳ ಮೇಲೆ ಹೆಚ್ಚಾಗಿದೆ ಎಂದು ವಿಷಾದಿಸಿದರು.

ಇಂದು ಪ್ರಾಮಾಣಿಕ ರಾಜಕಾರಣಿಗಳು ಜೀವಂತ ಜ್ವಾಲೆಗಳಂತೆ ಬದುಕಬೇಕಾಗಿದೆ. ಸಾಮಾಜಿಕ ಮೌಲ್ಯದ ತಂಬೆಳಕಿನ ದೀಪ ಆರಿಹೋಗದಂತೆ ನೋಡಿಕೊಳ್ಳಬೇಕಾಗಿದೆ. ಆದರೆ, ಬೀಸುವ ಗಾಳಿ ಮಾತ್ರ ಚಂಡಮಾರುತದಂತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕಿದೆ ಎಂದು ಎಚ್ಚರಿಸಿದರು.

ರಾಜಕಾರಣದಲ್ಲಿಂದು ಎರಡು ಪಕ್ಷಗಳಿವೆ. ಶ್ರೀಮಂತರು, ಭ್ರಷ್ಟರು, ಶಿಕ್ಷಣ ವ್ಯಾಪಾರಿಗಳು, ಅಮಾನವೀಯ ಗುಣಗಳನ್ನು ಉಳ್ಳ ವೈದ್ಯಕೀಯ ವ್ಯವಸ್ಥೆ ಕಟ್ಟಿಕೊಂಡಿರುವರು, ಗಣಿಗಾರಿಕೆ ನಡೆಸುತ್ತಿರುವವರು, ಕಳ್ಳ ವ್ಯಾಪಾರಿಗಳು ಒಂದು ಪಕ್ಷವಾದರೆ, ಪ್ರಾಮಾಣಿಕ ರಾಜಕಾರಣಿಗಳು ಮತ್ತೊಂದು ಪಕ್ಷವಾಗಿದೆ ಎಂದರು.

ರಾಜಕೀಯ ಪಕ್ಷಗಳಲ್ಲಿ ಶಿಸ್ತು ಇಲ್ಲವಾಗಿದೆ. ಶಾಸಕರಾದ ಕೂಡಲೇ ಅವರಲ್ಲಿ ಪಾಳೆಯಗಾರಿಕೆ ಮನಸ್ಥಿತಿ ಬೆಳೆಯುತ್ತಿದೆ. ಬಹುತೇಕ ಶಾಸಕರು ಸದನಕ್ಕೆ ಬರುವುದೇ ಇಲ್ಲ. ಆದರೆ, ಹಾಜರಾತಿ ಪುಸ್ತಕದಲ್ಲಿ ಮಾತ್ರ ಅವರ ಸಹಿ ಇರುತ್ತದೆ. ದೇಶದ ಕಾನೂನನ್ನು ಗೌರವಿಸಿ ನ್ಯಾಯಯುತ ರಾಜಕಾರಣ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಾಮಾಣಿಕರು ಸರ್ಕಾರದಲ್ಲಿ ಮಂತ್ರಿಗಳಾದರೆ ಭ್ರಷ್ಟರ ಮಾತುಗಳನ್ನು ಕೇಳುವುದಿಲ್ಲ. ಅವರನ್ನು ಮಂತ್ರಿ ಮಾಡಬೇಕೆ, ಮಾಡಿದರೆ ಕೆಲವೊಮ್ಮೆ ಅಪಾಯ ಬರುತ್ತದೆ ಎಂಬ ಆತಂಕದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ರಾಜಕಾರಣಿಗಳನ್ನು ಶಾಸನ ಸಭೆಗಳ ಸ್ಪೀಕರ್ ಆಗಿಸಿ ಬಿಡುವ ಸಂಪ್ರದಾಯ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ರಾಜಕಾರಣಕ್ಕೆ ಜಿಲ್ಲೆಯ ಕೊಡುಗೆ ದೊಡ್ಡದು:

ಮೌಲ್ಯಯುತ ರಾಜಕಾರಣಕ್ಕೆ ಮಂಡ್ಯ ಜಿಲ್ಲೆಯ ಕೊಡುಗೆ ದೊಡ್ಡದಾಗಿದೆ. ಕೆ.ವಿ.ಶಂಕರೇಗೌಡ, ಎಚ್.ಕೆ.ವೀರಣ್ಣಗೌಡ, ಜಿ.ಮಾದೇಗೌಡ, ಎಚ್.ಡಿ.ಚೌಡಯ್ಯ, ಇಂಡುವಾಳು ಹೊನ್ನಪ್ಪ, ಎಸ್.ಎಂ.ಲಿಂಗಪ್ಪ, ಎಂ.ಕೆ ಬೊಮ್ಮೇಗೌಡ, ಎಸ್.ಎಂ. ಕೃಷ್ಣ, ಕೆ.ಆರ್.ಪೇಟೆ ಕೃಷ್ಣ, ಸಿಂಗಾರಿಗೌಡ ಸೇರಿದಂತೆ ಹತ್ತು ಹಲವು ಆದರ್ಶ ನಾಯಕರನ್ನು ಮಂಡ್ಯ ಜಿಲ್ಲೆ ರಾಜ್ಯ ರಾಜಕಾರಣಕ್ಕೆ ನೀಡಿದೆ ಎಂದರು.

ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸಂಸದೀಯ ವ್ಯವಸ್ಥೆಗೆ ಹೊಸ ಮೆರಗು ತಂದವರು. ಪುಟ್ಟಣ್ಣಯ್ಯ ಮಾತನಾಡುತ್ತಿದ್ದರೆ ಮಂಡ್ಯದ ನೆಲವೇ ಎದ್ದು ಮಾತನಾಡುತ್ತಿರುವಂತೆ ಕಣುತ್ತಿತ್ತು. ಶಾಸನ ಸಭೆಗೆ ಆಯ್ಕೆಯಾಗುವವರಲ್ಲಿ ಶೇ.80ರಷ್ಟು ರೈತ ಕುಟುಂಬದವರೇ, ಕೃಷಿಕರೇ ಶಾಸನ ಸಭೆಗೆ ಆರಿಸಿ ಬಂದರೂ ರೈತಕುಲಕ್ಕೆ ಮಾತ್ರ ಅನುಕೂಲವಾಗುತ್ತಿಲ್ಲ ಎಂದು ವಿಷಾದಿಸಿದರು.

ಇಂದು ಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಮಾರುವವರು, ಡಾಬಾ ನಡೆಸುವವರು, ಬಾರ್ ಮಾಲೀಕರು ಮತ್ತು ದಳ್ಳಾಳಿಗಳು ಉತ್ತಮವಾಗಿ ಬದುಕುತ್ತಿದ್ದಾರೆ. ಆದರೆ, ರೈತರು ಮಾತ್ರ ಸಾಲಗಾರರಾಗುತ್ತಿರುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು.

ಒಕ್ಕಲಿಗರು ಜಾತಿವಾದಿಗಳಲ್ಲ:

ನಾನು ಕೋಲಾರ ಜಿಲ್ಲೆಯ ಶ್ರೀನಿವಾಸಪುರದವನು. ನನ್ನ ಮಾತೃಭಾಷೆ ತೆಲುಗು. ಕನ್ನಡವನ್ನು ಇಂಗ್ಲೀಷಿನಂತೆ ಕಷ್ಟಪಟ್ಟು ಕಲಿತವನು. ಜಾತಿಯಲ್ಲಿ ನಾನು ಬ್ರಾಹ್ಮಣ. ಆದರೆ, ವೃತ್ತಿಯಲ್ಲಿ ಒಕ್ಕಲಿಗ. ನನ್ನ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ್‍ಯಾರೂ ಜಾತಿವಾದಿಗಳಲ್ಲ. ಒಕ್ಕಲಿಗರು ಜಾತಿವಾದಿಗಳಾಗಿದ್ದರೆ ನಾನು ಶ್ರೀನಿವಾಸಪುರ ಕ್ಷೇತ್ರದಲ್ಲಿ ರಾಜಕೀಯ ಮಾಡಲಾಗುತ್ತಿರಲಿಲ್ಲ ಎಂದರು.

ಕೆಂಗಲ್ ಹನುಮಂತಯ್ಯ, ಕುವೆಂಪು ಅವರಂತಹ ಶ್ರೇಷ್ಠರಿಗೆ ಜನ್ಮ ಕೊಟ್ಟಿದ್ದು ಒಕ್ಕಲಿಗ ಜನಾಂಗ. ಒಕ್ಕಲಿಗ ಜನಾಂಗವನ್ನು ಜಾತಿವಾದಿಗಳೆಂದು ದೂರುವವರು ಅವಿವೇಕಿಗಳು. ಒಕ್ಕಲುತನದ ಬಗ್ಗೆ ವಿಚಾರ ಬಂದಾಗ ಒಕ್ಕಲಿಗ ರಾಜಕಾರಣಿಗಳು ಧ್ವನಿಯೆತ್ತಿದ್ದಾರೆ. ಆದರೆ, ಅವರೆಂದು ಜಾತಿವಾದದ ರಾಜಕಾರಣ ಮಾಡಿಲ್ಲ ಎಂದರು.

ಶ್ರೀನಿವಾಸಪುರದಲ್ಲಿ ನಾನು ಸೋತಿರಬಹುದು. ಅದು ಕ್ಷೇತ್ರದ ಜನರ ತೀರ್ಮಾನ. ಪ್ರಾಮಾಣಿಕ ರಾಜಕಾರಣಿಗಳ ಸೋಲು ಗೆಲುವುಗಳು ಜನರಿಗೆ ಸೇರಿದ್ದು. ಸಿದ್ಧಾಂತದ ತಳಹದಿ ಮೇಲೆ ರಾಜಕಾರಣ ಮಾಡಿದವರನ್ನು ಇತಿಹಾಸದಿಂದ ಅಳಿಸಲು ಸಾಧ್ಯವಿಲ್ಲ ಎಂಬುದಕ್ಕೆ ಕೆ.ಆರ್.ಪೇಟೆ ಕೃಷ್ಣ ಅವರ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮವೇ ಸಾಕ್ಷಿ ಎಂದರು.