ಸ್ತ್ರೀಯರಿಂದ ಇಂದು ಸಮಾಜ ಸದೃಢವಾಗುತ್ತಿದೆ-ನ್ಯಾಯಾಧೀಶೆ ಅನಿತಾ

| Published : Mar 31 2024, 02:01 AM IST

ಸ್ತ್ರೀಯರಿಂದ ಇಂದು ಸಮಾಜ ಸದೃಢವಾಗುತ್ತಿದೆ-ನ್ಯಾಯಾಧೀಶೆ ಅನಿತಾ
Share this Article
  • FB
  • TW
  • Linkdin
  • Email

ಸಾರಾಂಶ

ಸ್ತ್ರೀಯರು ಎಲ್ಲಿ ಪೂಜಿಸಲ್ಪಡುತ್ತಾರೋ ಅಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ. ಅಂತಹ ಸ್ತ್ರೀಯರಿಂದ ಇಂದು ಸಮಾಜವು ಸದೃಢವಾಗುತ್ತಿದೆ ಎಂದು ಸಿವಿಲ್ ನ್ಯಾಯಾಧೀಶೆ ಅನಿತಾ ಓ.ಎ. ಹೇಳಿದರು.

ರಾಣಿಬೆನ್ನೂರು: ಸ್ತ್ರೀಯರು ಎಲ್ಲಿ ಪೂಜಿಸಲ್ಪಡುತ್ತಾರೋ ಅಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ. ಅಂತಹ ಸ್ತ್ರೀಯರಿಂದ ಇಂದು ಸಮಾಜವು ಸದೃಢವಾಗುತ್ತಿದೆ ಎಂದು ಸಿವಿಲ್ ನ್ಯಾಯಾಧೀಶೆ ಅನಿತಾ ಓ.ಎ. ಹೇಳಿದರು.ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸೊರಬದ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಟ್ರಸ್ಟ್‌ನ ಸ್ಥಳೀಯ ಮಹಿಳಾ ಘಟಕದ ನೂತನ ಶಾಖೆಯ ಉದ್ಘಾಟನೆ ಹಾಗೂ ಮಹಿಳಾ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಸಮಾಜದಲ್ಲಿ ಮಹಿಳೆಯರು ಕೌಟುಂಬಿಕವಾಗಿ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ ಸಶಕ್ತರಾಗುವ ಮೂಲಕ ಎಲ್ಲ ರಂಗಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಅವರಿಗಾಗಿಯೇ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕಾನೂನು ನೆರವು ನೀಡಲಾಗುತ್ತದೆ. ಅದರ ಪ್ರಯೋಜನ ಪಡೆದುಕೊಂಡು ಸಮಾಜದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಮುಖಿ ಕಾರ್ಯ ಹಮ್ಮಿಕೊಂಡು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಬಲರಾಗಿರಿ ಎಂದರು.

ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜರು ಮಾತನಾಡಿ, ಮಹಾತ್ಮಾಗಾಂಧಿ, ವಿವೇಕಾನಂದ ಮುಂತಾದ ಮಹಾನ್ ಪುರುಷರ ಶ್ರೇಯಸ್ಸಿನ ಹಿಂದೆ ಸ್ತ್ರೀಯರ ಪಾತ್ರವಿತ್ತು ಎಂಬುದನ್ನು ಮರೆಯುವಂತಿಲ್ಲ. ನಮ್ಮ ದೇಶದ ಸಂಸ್ಕೃತಿಯನ್ನು ಇಂದಿನ ಆಧುನಿಕತೆಯೊಂದಿಗೆ ಸಾಗಲು ಹಲವಾರು ಕೊರತೆಗಳು ಎದ್ದು ಕಾಣುತ್ತಿವೆ. ಜೀವನದಲ್ಲಿ ನೆಮ್ಮದಿ ಕಾಣಲು ಆಧ್ಯಾತ್ಮದ ಸ್ಪರ್ಶ ಅಗತ್ಯ. ಸ್ತ್ರೀಯರು ಕೌಟುಂಬಿಕ ನಿರ್ವಹಣೆಯ ಜೊತೆಗೆ ವಿಚಾರಗೋಷ್ಠಿಗಳು, ಚಿಂತನ-ಮಂಥನ, ಮಹಿಳಾ ಸಂಕೀರ್ಣಗಳನ್ನು ಆಯೋಜಿಸುವ ಮೂಲಕ ಸಮಾಜವನ್ನು ಪರಿವರ್ತಿಸಲು ಮುಂದಾಗಬೇಕು ಎಂದರು.ಶಹರ ಠಾಣೆಯ ಪಿಎಸ್‌ಐ ಗಡ್ಡೆಪ್ಪ ಗುಂಜಟಗಿ, ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಎಸ್.ಜಿ. ರಾಮಚಂದ್ರ, ಮಹಿಳಾ ಘಟಕದ ಅಧ್ಯಕ್ಷೆ ವಿನೂತಾ ರೇವಣಕರ, ಜ್ಯೋತಿ ಜಂಬಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯೋಗಪಟು ಕೆ.ಸಿ. ಕೊಮಲಾಚಾರ್ಯ, ನಿವೃತ್ತ ಸೈನಿಕರಾದ ಮಾಲತೇಶ ಸತಗಿ, ವೆಂಕಟೇಶ ಬ್ಯಾಡಗಿ ಹಾಗೂ ಕರಾಟೆ ಪಟು ಮೋನಿಕಾ ರೇವಣಕರ ಇವರನ್ನು ಸನ್ಮಾನಿಸಲಾಯಿತು.ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ರಾಜ್ಯ ಮಹಿಳಾ ಘಟಕದ ಗೌರವಾಧ್ಯಕ್ಷೆ ಪದ್ಮಾವತಿ ದೈವಜ್ಞ, ಅಧ್ಯಕ್ಷೆ ವಾಣಿಶ್ರೀ, ವತ್ಸಲ ಶೇಜವಾಡಕರ್, ರಾಧಾ ವಿಠ್ಠಲಕರ್, ರೇವತಿ, ಸಂಜನಾ ದೈವಜ್ಞ, ಪ್ರಕಾಶ ಗಚ್ಚಿನಮಠ ಮತ್ತಿತರರು ಇದ್ದರು.