ಸತತ ಹೋರಾಟ ಮತ್ತು ಒತ್ತಡದ ಫಲವಾಗಿ ಖರೀದಿ ಕೇಂದ್ರ ಆರಂಭವಾಗಿದೆ
ಹನುಮಸಾಗರ: ರೈತರಿಗೆ ನ್ಯಾಯಸಮ್ಮತ ಬೆಲೆ ದೊರಕಿಸಿ ಕೊಡುವ ಉದ್ದೇಶದಿಂದ ತೊಗರಿ ಬೆಳೆಯನ್ನು ಪ್ರತಿ ಕ್ವಿಂಟಲ್‌ಗೆ 8,000 ದರದಲ್ಲಿ ಖರೀದಿಸಲು ಪ್ರಾರಂಭಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.
ಪಟ್ಟಣದ ಕೃಷಿ ಪತ್ತಿನ ಸಂಘದ ಕಚೇರಿಯಲ್ಲಿ ಶುಕ್ರವಾರ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಬೆಂಬಲ ಬೆಲೆ ಯೋಜನೆ ೨೦೨೫–೨೬ನೇ ಸಾಲಿನ ಸಾಲಿನ ಗುಣಮಟ್ಟದ ತೊಗರಿ ಬೆಳೆಯ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೆಳೆಯುವಾಗ, ಕಡಿಮೆ ಬೆಲೆ ಕಾರಣದಿಂದ ರೈತರು ನಷ್ಟ ಅನುಭವಿಸುತ್ತಾರೆ. ಖರೀದಿ ಕೇಂದ್ರದಿಂದ ರೈತರಿಗೆ ನೇರವಾಗಿ ಸರ್ಕಾರದ ಬೆಂಬಲ ಬೆಲೆ ದೊರೆಯಲಿದೆ ಎಂದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಜೀರಸಾಬ ಮೂಲಿಮನಿ ಮಾತನಾಡಿ, ರಾಜ್ಯ ಸರ್ಕಾರ ವಿರುದ್ಧ ರೈತ ಸಂಘ ನಡೆಸಿದ ಸತತ ಹೋರಾಟ ಮತ್ತು ಒತ್ತಡದ ಫಲವಾಗಿ ಖರೀದಿ ಕೇಂದ್ರ ಆರಂಭವಾಗಿದೆ. ಇದರಿಂದ ಈ ಭಾಗದ ರೈತ ಸಮುದಾಯದಲ್ಲಿ ಸಂತಸ ಮನೆ ಮಾಡಿದ್ದು, ರೈತರ ಬೇಡಿಕೆಗೆ ಸ್ಪಂದಿಸಿದ ಸರ್ಕಾರದ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಪಟ್ಟೇದ ಮಾತನಾಡಿ, ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಕ್ಕಾಗ ಮಾತ್ರ ಕೃಷಿ ಲಾಭದಾಯಕ. ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಲ್‌ಗೆ ₹8,000 ದರದಲ್ಲಿ ಖರೀದಿ ನಡೆಯುತ್ತಿದೆಎಂದು ವಿವರಿಸಿದರು.ಗ್ರಾಮ ಘಟಕದ ಅಧ್ಯಕ್ಷ ಯಮನೂರು ಮಡಿವಾಳರ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪರಸಪ್ಪ ಹೊಸಮನಿ, ರಾಮಣ್ಣ ವಡ್ಡರ, ಚಂದಪ್ಪ ತಳವಾರ, ಮೈಬುಸಾಬ್ ಮುಲ್ಲಾ, ಉಮೇಶ್ ಬಾಚಾಲಾಪುರ, ಈರಣ್ಣ ಸಂಗಮದ, ಬದ್ರಿನಾಥ ಪುರೋಹಿತ, ಸಂಗಪ್ಪ ಮಾನ್ವಿ, ಶಿವಪ್ಪ ಕಂಪ್ಲಿ, ಶರಣಪ್ಪ ಬಾಚಲಾಪುರ, ಸಲೀಂ ಖಾಜಿ, ದಾದೇಸಾಬ್ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.