ವಿದ್ಯಾರ್ಥಿನಿ ಕೈಯಲ್ಲಿ ಶೌಚಾಲಯ ಸ್ವಚ್ಛಪಡಿಸಿಲ್ಲ: ಸ್ಪಷ್ಟನೆ

| Published : Oct 09 2023, 12:47 AM IST

ಸಾರಾಂಶ

ಮಾಗಡಿ: ವಿದ್ಯಾರ್ಥಿನಿ ಕೈಯಲ್ಲಿ ಶಾಲಾ ಶೌಚಾಲಯ ಸ್ವಚ್ಛಗೊಳಿಸಿಲ್ಲ ಎಂದು ತಾಲೂಕಿನ ತೂಬಿನಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಿದ್ದಲಿಂಗಯ್ಯ ಸ್ಪಷ್ಟನೆ ನೀಡಿದ್ದಾರೆ.
ಮಾಗಡಿ: ವಿದ್ಯಾರ್ಥಿನಿ ಕೈಯಲ್ಲಿ ಶಾಲಾ ಶೌಚಾಲಯ ಸ್ವಚ್ಛಗೊಳಿಸಿಲ್ಲ ಎಂದು ತಾಲೂಕಿನ ತೂಬಿನಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಿದ್ದಲಿಂಗಯ್ಯ ಸ್ಪಷ್ಟನೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3ನೇ ತರಗತಿ ವಿದ್ಯಾರ್ಥಿನಿ ಹೇಮಲತಾ ಕೈಯಲ್ಲಿ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ್ದರಿಂದ ಅಸ್ವಸ್ಥಗೊಂಡಿದ್ದಳೆಂದು ಸುದ್ದಿಯಾಗಿತ್ತು. ಆದರೆ, ಅಡುಗೆ ಸಿಬ್ಬಂದಿ ಶೌಚಾಲಯ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದರು. ಸಂಜೆ 3.30ರಲ್ಲಿ ವಿದ್ಯಾರ್ಥಿನಿ ಶೌಚಾಲಯಕ್ಕೆ ತೆರಳಿ 4.15ಕ್ಕೆ ಶಾಲೆಯಿಂದ ಮನೆಗೆ ತೆರಳಿದ್ದಾಳೆ. ಬಳಿಕ ರಾತ್ರಿ 7 ವೇಳೆಯಲ್ಲಿ ನನಗೆ ಕರೆ ಮಾಡಿ ಶಾಲಾ ಶೌಚಾಲಯ ಸ್ವಚ್ಛಗೊಳಿಸಿದ್ದಕ್ಕೆ ಮಗು ಅಸ್ವಸ್ಥಗೊಂಡಿದ್ದಾಳೆಂದು ಪೋಷಕರು ಕರೆ ಮಾಡಿ ತಿಳಿಸಿದರು. ಮಗುವಿನ ಸಂಬಂಧಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು ದ್ವೇಷ ಸಾಧಿಸಲು ಮಗುವಿನಿಂದ ಸುಳ್ಳು ಹೇಳಿಸಿದ್ದಾರೆಂದು ಆರೋಪಿಸಿದರು. ನಾನು ದಲಿತನೆಂಬ ಕಾರಣಕ್ಕೆ ಹಾಗೂ ನನ್ನ ಮೇಲಿನ ಹಳೆಯ ದ್ವೇಷದಿಂದ ನನ್ನನ್ನು ಶಾಲೆಯಿಂದ ಓಡಿಸಲು ಇಂತಹ ಸುಳ್ಳು ಆರೋಪ ಮಾಡಿದ್ದು, ಮಾಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಮೇಲಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದಿದ್ದಾರೆ. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು. ರಾಜ್ಯ ಎಸ್ಸಿ/ ಎಸ್ ಟಿ ಸರ್ಕಾರಿ ನೌಕರ ಸಮನ್ವಯ ಸಮಿತಿ ತಾಲೂಕು ಕಾರ್ಯದರ್ಶಿ ಶ್ರೀನಿವಾಸ್, ಶಿಕ್ಷಕ ಮಂಜುನಾಥ್ ಇತರರು ಭಾಗವಹಿಸಿದ್ದರು.