ಸಾರಾಂಶ
ಡಿ.ಶ್ರೀನಿವಾಸ್ಕನ್ನಡಪ್ರಭ ವಾರ್ತೆ ಹಾರೋಹಳ್ಳಿ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾದ ಹಾರೋಹಳ್ಳಿಯಲ್ಲಿ ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ಶೌಚಗೃಹ ಕೊರತೆ ತೀವ್ರವಾಗಿ ಕಾಡುತ್ತಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶೌಚಗೃಹ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿಗೆ ಬರುವ ವಾಹನ ಚಾಲಕರು ಹಾಗೂ ಇತರೆ ಸಾರ್ವಜನಿಕರು ಶೌಚಕ್ಕೆ ಬಯಲನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ.ಕೈಗಾರಿಕಾ ಪ್ರದೇಶದಲ್ಲಿ 400 ರಿಂದ 450ಕ್ಕೂ ಹೆಚ್ಚಿನ ಕೈಗಾರಿಕಾ ಘಟಕಗಳು ಕೆಲಸ ನಿರ್ವಹಿಸುತ್ತಿದೆ. ಮೊದಲನೆಯ ಹಂತ ಹಾಗೂ ಎರಡನೇ ಹಂತದ ದೊಡ್ಡ ದೊಡ್ಡ ಕಾರ್ಖಾನೆಗಳು ಚಾಲನೆಯಲ್ಲಿವೆ. ಸ್ವಚ್ಛ ಅಭಿಯಾನದ ಅಡಿ ಪ್ರತಿ ಮನೆ ಹಾಗೂ ಗ್ರಾಮಗಲ್ಲಿ ಶೌಚಗೃಹ ನಿರ್ಮಿಸಿ ಬಯಲು ಶೌಚ ಮುಕ್ತ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ, ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಮಾತ್ರ ಸ್ವಚ್ಚ ಭಾರತ್ ಅಭಿಯಾನಕ್ಕೆ ವಿರುದ್ಧವಾದ ವಾತಾವರಣ ನಿರ್ಮಾಣವಾಗಿದೆ.ಕೈಗಾರಿಕಾ ಪ್ರದೇಶದಲ್ಲಿ ಹಲವೆಡೆ ಮಲಮೂತ್ರದ ವಾಸನೆ ತುಂಬಿದ್ದರೂ ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ದೊರಕಿಸಲು ಕ್ರಮ ವಹಿಸಿಲ್ಲ. ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಹಾಗೂ ಹೊರಗಡೆಯಿಂದ ಬಂದಂತ ನೂರಾರು ವಾಹನಗಳ ಚಾಲಕರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸುಲಭ ಶೌಚಗೃಹ ನಿರ್ಮಿಸುವ ಗೋಜಿಗೆ ಹೋಗಿಲ್ಲ. ಸರ್ಕಾರಗಳು ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಡಿ, ಮಾನ, ಪ್ರಾಣ, ರೋಗ, ರಕ್ಷಣೆಗೆಗಾಗಿ ಶೌಚಗೃಹ ನಿರ್ಮಿಸಿ ರೋಗಮುಕ್ತರಾಗಿ ಎಂಬ ಘೋಷಣೆಗಳು ಗಾಳಿಗೆ ತೂರಿ ಹೋಗಿವೆ.ಅಲ್ಲದೆ ರಾತ್ರಿಯಲ್ಲಿ ಕೈಗರಿಕಾ ಪ್ರದೇಶಕ್ಕೆ ಬರುವ ಚಾಲಕರು ಕತ್ತಲಲ್ಲೇ ಎಲ್ಲೆಂದರಲ್ಲಿ ಶೌಚ ಮಾಡುವ ಸ್ಥಿತಿಯಿದೆ. ಕತ್ತಲಲ್ಲಿ ಓಡಾಡುವ ವಿಷ ಜಂತುಗಳ ಹಾವಳಿಯಿಂದ ಅಪಾಯಗಳು ಹೆಚ್ಚಾಗಿರುವುದರಿಂದ ಪ್ರಾಣ ಕಳೆದುಕೊಳ್ಳುವ ಭೀತಿಯೂ ಎದರಾಗುತ್ತದೆ.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ಗಮನಹರಿಸಬೇಕು. ಮೊದಲನೆಯ ಹಾಗೂ ಎರಡನೇ ಹಂತದಲ್ಲಿ ಸುಲಭ ಶೌಚಗೃಹ ಮಾಡುವುದರಿಂದ ಚಾಲಕರು ಹಾಗೂ ಸ್ಥಳೀಯ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ....ಬಾಕ್ಸ್ ...ಬಯಲು ಮುಕ್ತ ಶೌಚಗೃಹ ಏಕಿಲ್ಲ:ಕಳೆದ 6 ವರ್ಷಗಳ ಹಿಂದೆ ಇಡೀ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಎಂದು ಘೋಷಣೆಯಾಗಿದೆ. ನಂತರದ ವರ್ಷದಲ್ಲೂ ಬಯಲು ಬಹಿರ್ದಸೆ ಮುಕ್ತ ದೇಶ ಎಂದು ಘೊಷಣೆಯಾಗಿದೆ. ಇಷ್ಟಾದರೂ ಹಾರೋಹಳ್ಳಿ ಪ್ರಮುಖ ಕೈಗಾರಿಕಾ ಪ್ರದೇಶದಲ್ಲಿ ಬಯಲು ಮುಕ್ತ ಶೌಚಗೃಹ ವೆಂದು ಯಾವಾಗ ಮುಕ್ತಿ ಕಾಣಲಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಕೋಟ್ಯಂತರ ರುಪಾಯಿ ವಹಿವಾಟು ನಡೆಯುವ ಸ್ಥಳದಲ್ಲಿ ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮವಾಗಲಿ ಅಥವಾ ಕಾರ್ಖಾನೆಯ ಮಾಲೀಕರಾಗಲಿ ಗಮನ ಹರಿಸದಿರುವುದು ವಿಪರ್ಯಾಸ..