ಕುಶಾಲನಗರ: ಕುಶಾಲನಗರ ಪಟ್ಟಣ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳಿಂದ ಚರಂಡಿ ಮೂಲಕ ಶೌಚ ತ್ಯಾಜ್ಯ ಹರಿಸಿ ಕಾವೇರಿ ನದಿಗೆ ಸೇರುತ್ತಿರುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.ದಿನ ನಿತ್ಯ ರಾತ್ರಿ ವೇಳೆ ಗಣಪತಿ ದೇವಸ್ಥಾನ ಬಳಿ ಕೆಲವು ಕಟ್ಟಡಗಳಿಂದ ಚರಂಡಿಗೆ ಶೌಚಾಲಯದ ನೀರು ಹರಿಸುತ್ತಿರುವ ಕಾರಣ ದುರ್ವಾಸನೆ ಮೂಲಕ ಇಡೀ ವಾತಾವರಣ ವಾಸನಾಮಾಯವಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಅವರಿಗೆ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್. ನಾಗೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್. ನಾಗೇಶ್ ಈ ಬಗ್ಗೆ ಮಾತನಾಡಿ, ಶೌಚಾಲಯದ ನೀರು ಚರಂಡಿ ಮೂಲಕ ಕಾವೇರಿ ನದಿಗೆ ಹರಿಸುತ್ತಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮುಖ್ಯಾಧಿಕಾರಿ ಗಿರೀಶ್ ಮನವಿ ಸ್ವೀಕರಿಸಿ, ತಕ್ಷಣವೇ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುವುದು. ಎಚ್ಚೆತ್ತುಕೊಳ್ಳದಿದ್ದರೆ ಕೋರ್ಟ್ ಮೂಲಕ ದೊಡ್ಡ ಮಟ್ಟದ ದಂಡ ವಿಧಿಸುವ ಮೂಲಕ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.
ಕರ್ನಾಟಕ ರಕ್ಷಣಾ ಪಡೆ ಜಿಲ್ಲಾಧ್ಯಕ್ಷ ದೀಪಕ್, ದಿನೇಶ್ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ,ಕಾಂಗ್ರೆಸ್ ಮುಖಂಡ ಎಚ್.ಕೆ. ನಟೇಶ್ ಗೌಡ, ಪುರಸಭೆ ಮಾಜಿ ಸದಸ್ಯ ಎಂ.ಕೆ. ದಿನೇಶ್, ಪ್ರಕಾಶ್, ಪ್ರಮುಖರಾದ ಎಂ.ಡಿ. ಕೃಷ್ಣಪ್ಪ, ಆನಂದ್, ಪುರಸಭೆ ಆರೋಗ್ಯಾಧಿಕಾರಿ ಉದಯ್ ಮತ್ತಿತರರು ಇದ್ದರು.
(ಕ್ಯಾಪ್ಸನ್): ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಗೆ ಸಂಘ ಸಂಸ್ಥೆಗಳಿಂದ ಮನವಿ ಸಲ್ಲಿಕೆ.