ಮಾಯಮುಡಿ: ಡಿ.8ರಂದು ‘ತೋಕ್ ನಮ್ಮೆ’ ರಾಜ್ಯಮಟ್ಟದ ಸ್ಪರ್ಧೆ

| Published : Nov 25 2024, 01:04 AM IST

ಸಾರಾಂಶ

ಡಿ. 8ರಂದು ಮಾಯಾಮುಡಿ ಶಾಲಾ ಮೈದಾನದಲ್ಲಿ ತೋಕ್‌ನಮ್ಮೆ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿದೆ. 400 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಜೆಸಿಐ ಪೊನ್ನಂಪೇಟೆ ನಿಸರ್ಗದ ಸಂಯುಕ್ತಾಶ್ರಯದಲ್ಲಿ ಡಿ.8 ರಂದು ಮಾಯಮುಡಿ ಶಾಲಾ ಮೈದಾನದಲ್ಲಿ ‘ತೋಕ್ ನಮ್ಮೆ’ ಪ್ರಯುಕ್ತ ತೆಂಗಿನಕಾಯಿಗೆ ಗುಂಡುಹೊಡೆಯುವ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡವ ಸಮುದಾಯದಲ್ಲಿ ತೋಕ್ ಅಂದರೆ ಕೋವಿಗೆ ಪೂಜನೀಯ ಸ್ಥಾನ ನೀಡಲಾಗಿದೆ. ಧಾರ್ಮಿಕ ಆಚರಣೆಗಳಲ್ಲೂ ಕೋವಿ ಅವಿಭಾಜ್ಯ ಅಂಗವಾಗಿದೆ. ಈ ಹಿನ್ನೆಲೆ ಅಕಾಡೆಮಿ ವತಿಯಿಂದ ಪ್ರಥಮ ಬಾರಿಗೆ ಜೆಸಿಐ ಸೇವಾ ಸಂಸ್ಥೆಯ ಸಹಕಾರದೊಂದಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶೂಟಿಂಗ್ ಸ್ಪರ್ಧೆ .22 ಬಂದೂಕು, ಟುವೆಲ್ತ್ ಬೋರ್ ಬಂದೂಕು ಮತ್ತು ಏರ್ ಗನ್ ವಿಭಾಗಗಳಲ್ಲಿ ನಡೆಯಲಿದೆ. ಮೊದಲ ಎರಡು ಸ್ಪರ್ಧೆಗಳು 18 ವರ್ಷ ಮೇಲ್ಪಟ್ಟವರಿಗೆ ನಡೆಯಲಿದೆ. ಏ‌ರ್‌ ಗನ್ ಸ್ಪರ್ಧೆ ಮುಕ್ತವಾಗಿರಲಿದೆ. ಈಗಾಗಲೆ 150 ಕ್ಕೂ ಹೆಚ್ಚಿನ ಸ್ಪರ್ಧಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ದು, 400 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

22 ವಿಭಾಗದಲ್ಲಿ ವಿಜೇತರಾದವರಿಗೆ 30 ಸಾವಿರ ರು. ಮತ್ತು ಟ್ರೋಫಿ, ದ್ವಿತೀಯ 20 ಸಾವಿರ ರು. ಮತ್ತು ಟ್ರೋಫಿ, ತೃತೀಯ 10 ಸಾವಿರ ರು. ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ. ಟುವೆಲ್ತ್ ಬೋರ್ ವಿಭಾಗದಲ್ಲಿ ಪ್ರಥಮ 25 ಸಾವಿರ ರು. ಮತ್ತು ಟ್ರೋಫಿ, ದ್ವಿತೀಯ 15 ಸಾವಿರ ರು. ಮತ್ತು ಟ್ರೋಫಿ, ತೃತೀಯ 10 ಸಾವಿರ ರು. ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ. ಏರ್‌ ಗನ್‌ ವಿಭಾಗದಲ್ಲಿ ಪ್ರಥಮ 10 ಸಾವಿರ ರು. ಮತ್ತು ಟ್ರೋಫಿ, ದ್ವಿತೀಯ 8 ಸಾವಿರ ಮತ್ತು ಟ್ರೋಫಿ ಹಾಗೂ ತೃತೀಯ 6 ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ ಎಂದರು. ಏರ್‌ ಗನ್‌ ವಿಭಾಗದಲ್ಲಿ ಸ್ಪರ್ಧಾ ಶುಲ್ಕ 100 ರು. ಮತ್ತು ಉಳಿದ ಎರಡು ವಿಭಾಗಗಳಿಗೆ 250 ರು. ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಅಪ್ಪಂಡೇರಂಡ ದಿನು ಮೊ. 9148978919 ಮತ್ತು ಆಪಟ್ಟಿರ ಟಾಟು ಮೊಣ್ಣಪ್ಪ ಮೊ. 9449255081, ಚೋನಿರ ಸೋಮಣ್ಣ ಮೊ. 9611011241, ಪೆಮ್ಮಂಡ ಮಂಜು ಬೋಪಣ್ಣ ಮೊ. 9945375157 ಅವರನ್ನು ಸಂಪರ್ಕಿಸಬಹುದು.

ಉದ್ಘಾಟನೆ: ತೋಕ್ ನಮ್ಮೆಯನ್ನು ಅಂದು ಬೆಳಗ್ಗೆ 9 ಗಂಟೆಗೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಕೋವಿ ಪ್ರಾಮುಖ್ಯತೆ ವಿಷಯದ ಕುರಿತು ಬಲ್ಲಮಾಡ ಮಧು ಮಾದಪ್ಪ ವಿಷಯ ಮಂಡಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಸಿಐ ಅಧ್ಯಕ್ಷ ಪೆಮ್ಮಂಡ ಮಂಜು ಬೋಪಣ್ಣ, ಜೆಸಿಐ ಪೊನ್ನಂಪೇಟೆ ಮಾಜಿ ಅಧ್ಯಕ್ಷ ಅಪ್ಪಂಡೇರಂಡ ದಿನು, ಜೆಸಿಐ ಜೋನಲ್ ಆಫೀಸರ್ ಪಾರುವಂಗಡ ದಿಲನ್ ಚಂಗಪ್ಪ, ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಹಾಗೂ

ಪಾಣಿಕುಟೀರ ಕುಟ್ಟಪ್ಪ ಇದ್ದರು.