ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ತೊಕ್ಕೊಟ್ಟು ಶಾಖೆಯ 5ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ತೊಕ್ಕೊಟ್ಟು ಶಾಖೆಯಲ್ಲಿ ನಡೆಯಿತು.
ಉಳ್ಳಾಲ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ತೊಕ್ಕೊಟ್ಟು ಶಾಖೆಯ 5ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ತೊಕ್ಕೊಟ್ಟು ಶಾಖೆಯಲ್ಲಿ ನಡೆಯಿತು.
ಸಂಘದ ಸದಸ್ಯರಾದ ಮನೋಹರ, ಜೆ. ಲೋಕನಾಥ ಪೂಜಾರಿ, ಸುಧಾಕರ ಹಾಗೂ ಭಾರತಿ ಎಂ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸದಸ್ಯ ಮನೋಹರ ಅವರು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಉತ್ತಮ ಸೇವೆ ನೀಡುತ್ತಿದ್ದು, ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.ಸದಸ್ಯ ವಿವೇಕ್ ಪೂಂಜ ಮಾತನಾಡಿ, ಸಂಘದಲ್ಲಿ ಶೇ.95ರಷ್ಟು ಮಹಿಳಾ ಸಿಬ್ಬಂದಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳು ಆರಂಭವಾಗಲಿ ಎಂದು ಆಶಿಸಿದರು.
ಸದಸ್ಯೆ ಅಮಿತಾ ಮಾತನಾಡಿ, ಶಾಖೆಯ ಸಿಬ್ಬಂದಿ ನಗುಮುಖದಿಂದ ಉತ್ತಮ ಸೇವೆ ನೀಡುತ್ತಿದ್ದು, ದೈನಂದಿನ ಬ್ಯಾಂಕಿಂಗ್ ವ್ಯವಹಾರಗಳಿಗೆ ಅತ್ಯುತ್ತಮ ಸಹಕಾರಿ ಸಂಸ್ಥೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಗ್ರಾಹಕರ ಪ್ರೋತ್ಸಾಹದಿಂದ ಸಂಘವು ಉತ್ತಮ ಪ್ರಗತಿ ಸಾಧಿಸಿದ್ದು, ಬ್ಯಾಂಕಿಂಗ್ ಸೇವೆಗಳ ಜೊತೆಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ನಿರಂತರ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದರು. ಸದಸ್ಯರಿಗೆ ಸ್ಪರ್ಧಾತ್ಮಕ ದರದಲ್ಲಿ ವಿಮಾ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ತೊಕ್ಕೊಟ್ಟು ಶಾಖೆಯ 5ನೇ ವಾರ್ಷಿಕೋತ್ಸವದ ಅಂಗವಾಗಿ 500 ದಿನಗಳ ಠೇವಣಿಗಳಿಗೆ ಶೇ.10 ಹಾಗೂ 1000 ದಿನಗಳ ಠೇವಣಿಗಳಿಗೆ ಶೇ.10.50 ವಿಶೇಷ ಬಡ್ಡಿದರ ಘೋಷಿಸಲಾಗಿದೆ. ಚಿನ್ನಾಭರಣ ಸಾಲಗಳಿಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಪ್ರತಿ ಗ್ರಾಂಗೆ ಗರಿಷ್ಠ ಮೌಲ್ಯದ ಸಾಲ ಸೌಲಭ್ಯವನ್ನು ಸದಸ್ಯರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕ ಗೋಪಾಲ್ ಎಂ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು. ಶಾಖೆಯ ಸಿಬ್ಬಂದಿ ಪ್ರೀತಿಕಾ ಸ್ವಾಗತಿಸಿದರು. ಶಾಖಾಧಿಕಾರಿ ಭವ್ಯ ನಿರೂಪಿಸಿದರು.