ಸೆಪ್ಟಂಬರ್‌ 7ರಿಂದ ಬೈಪಾಸ್‌ ರಸ್ತೆಯ ಟೋಲ್‌ ಸಂಗ್ರಹಣೆ ಸ್ಥಗಿತ

| Published : Sep 04 2024, 01:47 AM IST

ಸೆಪ್ಟಂಬರ್‌ 7ರಿಂದ ಬೈಪಾಸ್‌ ರಸ್ತೆಯ ಟೋಲ್‌ ಸಂಗ್ರಹಣೆ ಸ್ಥಗಿತ
Share this Article
  • FB
  • TW
  • Linkdin
  • Email

ಸಾರಾಂಶ

ನಂದಿ ಹೈವೇ ಟೋಲ್‌ ಸಂಗ್ರಹಣೆ ಕಳೆದ ಐದಾರು ತಿಂಗಳ ಹಿಂದೆಯೇ ಮುಗಿದಿತ್ತು. ಆದರೆ, ಕೋವಿಡ್‌ ಸಮಯದಲ್ಲಿ ಟೋಲ್‌ ಸಂಗ್ರಹಣೆ ಆಗಿಲ್ಲ ಎಂದು ನೆಪ ಹೇಳಿದ ನಂದಿ ಹೈವೇ ಐದಾರು ತಿಂಗಳು ಹೆಚ್ಚುವರಿ ಟೋಲ್‌ ಸಂಗ್ರಹಿಸಿ ಇದೀಗ ಸೆ. 7ರಿಂದ ಟೋಲ್‌ ಸಂಗ್ರಹಣೆ ನಿಲ್ಲಿಸಲಿದೆ.

ಧಾರವಾಡ:

ಕಿಲ್ಲರ್‌ ಬೈಪಾಸ್‌ ಎಂದೇ ಗುರುತಿಸಿಕೊಂಡಿದ್ದ ಹುಬ್ಬಳ್ಳಿಯ ಗಬ್ಬರ ಕ್ರಾಸ್‌ನಿಂದ ನರೇಂದ್ರ ಕ್ರಾಸ್‌ ವರೆಗಿನ ಬೈಪಾಸ್‌ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಇನ್ಮುಂದೆ ಟೋಲ್‌ ಹಣ ನೀಡದೇ ಉಚಿತವಾಗಿ ಸಂಚರಿಸಬಹುದು.

ಹೌದು. ಕಳೆದ 25 ವರ್ಷಗಳಿಂದ ನಂದಿ ಹೈವೇ ಡೆವಲಪರ್ಸ್‌ ಲಿಮಿಟೆಡ್‌ ನಿರ್ವಹಿಸುತ್ತಿದ್ದ ಈ ರಸ್ತೆಯ ಗುತ್ತಿಗೆ ಸಮಯ ಇದೇ ಸೆ. 7ರಂದು ಮುಕ್ತಾಯವಾಗಿದ್ದು ನಂದಿ ಹೈವೇ ಸೆ. 7ರ ಬೆಳಗ್ಗೆ 6ರಿಂದ ಟೋಲ್‌ ಸಂಗ್ರಹಣೆ ನಿಲ್ಲಿಸುತ್ತಿದೆ. ಈ ಕುರಿತು ನಂದಿ ಹೈವೇ ಸಾರ್ವಜನಿಕ ಪ್ರಕಟಣೆ ಸಹ ಹೊರಡಿಸಿದೆ. ಸೆ. 7ರಿಂದ ಈ ರಸ್ತೆಯ ಸಂಚಾರದಲ್ಲಿ ಉಂಟಾಗುವ ಅಡೆ-ತಡೆ ಅಪಘಾತಗಳು ಮತ್ತಿತರ ಘಟನೆಗಳು ಸಂಭವಿಸಿದರೆ ತೆರವುಗೊಳಿಸುವ ಜವಾಬ್ದಾರಿ ತಮ್ಮದಲ್ಲ. ಇನ್ಮುಂದೆ ಸಂಸ್ಥೆಯು ಟೋಲ ಸಂಗ್ರಹಣೆ ಸಹ ಸ್ಥಗಿತಗೊಳಿಸುತ್ತೇವೆ ಎಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

2000ರಲ್ಲಿ ನರೇಂದ್ರ ಗಬ್ಬೂರ ಕ್ರಾಸ್‌ನಿಂದ ನರೇಂದ್ರ ಕ್ರಾಸ್‌ ವರೆಗೆ 29 ಕಿಮೀ ವರೆಗೆ ನಂದಿ ಹೈವೇ ಕಂಪನಿ ಈ ರಸ್ತೆ ನಿರ್ಮಿಸಿತ್ತು. ಬರೀ ಎರಡು ಪಥಗಳಿರುವ ಕಾರಣ ಈ ರಸ್ತೆಯಲ್ಲಿ ಆರಂಭದಿಂದಲೂ ಅಪಘಾತ, ಸಾವು-ನೋವು ಸಂಭವಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗಿತ್ತು. ಅದರಲ್ಲೂ ದಾವಣಗೆರೆ ಮೂಲದ 13 ಜನರು ಅಪಘಾತದಲ್ಲಿ ಮೃತಪಟ್ಟಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ತದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಈ ರಸ್ತೆ ಅಗಲೀಕರಣಕ್ಕೆ ಅಸ್ತು ಎಂದಿತ್ತು. ಕಳೆದ 2023ರ ಜೂನ್‌ ತಿಂಗಳಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಸದ್ಯ ಅಗಲೀಕರಣ ನಡೆಸಿದೆ. 2025ರ ಸೆಪ್ಟೆಂಬರ್‌ ತಿಂಗಳಲ್ಲಿ ಅಗಲೀಕರಣ ಕಾರ್ಯ ಮುಗಿಯುವ ಸಾಧ್ಯತೆಯನ್ನು ಅಧಿಕಾರಿಗಳು ಹೊಂದಿದ್ದಾರೆ.

ನಂದಿ ಹೈವೇ ಟೋಲ್‌ ಸಂಗ್ರಹಣೆ ಕಳೆದ ಐದಾರು ತಿಂಗಳ ಹಿಂದೆಯೇ ಮುಗಿದಿತ್ತು. ಆದರೆ, ಕೋವಿಡ್‌ ಸಮಯದಲ್ಲಿ ಟೋಲ್‌ ಸಂಗ್ರಹಣೆ ಆಗಿಲ್ಲ ಎಂದು ನೆಪ ಹೇಳಿದ ನಂದಿ ಹೈವೇ ಐದಾರು ತಿಂಗಳು ಹೆಚ್ಚುವರಿ ಟೋಲ್‌ ಸಂಗ್ರಹಿಸಿ ಇದೀಗ ಸೆ. 7ರಿಂದ ಟೋಲ್‌ ಸಂಗ್ರಹಣೆ ನಿಲ್ಲಿಸಲಿದೆ.

ಕಳೆದ 25 ವರ್ಷಗಳಿಂದ ಹಿಡಿದು ಇತ್ತೀಚಿನ ವರೆಗೂ ಈ ನಂದಿ ಹೈವೇಯ ಬೈಪಾಸ್‌ ರಸ್ತೆಯ ಟೋಲ್‌ ಹಾಗೂ ಇತರೆ ಕಾರ್ಯಗಳಿಗೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಈ ಗುತ್ತಿಗೆ ಮುಕ್ತಾಯದೊಂದಿಗೆ ಕೈ ಬಿಡಲಾಗುತ್ತಿದೆ. ನೂರಾರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು ಅವರೀಗ ನಿರುದ್ಯೋಗಿಗಳಾಗುತ್ತಿದ್ದು ಅವರ ಭವಿಷ್ಯ ಮಂಕಾಗಿದೆ.