ಉಡುಪಿ ಜಿಲ್ಲೆಯಲ್ಲಿರುವ ರಾ.ಹೆ. ಟೋಲ್ ಗೇಟ್‌ಗಳಲ್ಲಿ ಏಕಾಏಕಿ ಶುಲ್ಕವನ್ನು ಏರಿಸಲಾಗಿದ್ದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಉಡುಪಿ: ಉಡುಪಿ ಜಿಲ್ಲೆಯಲ್ಲಿರುವ ರಾ.ಹೆ. ಟೋಲ್ ಗೇಟ್‌ಗಳಲ್ಲಿ ಏಕಾಏಕಿ ಶುಲ್ಕವನ್ನು ಏರಿಸಲಾಗಿದ್ದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯ ದಕ್ಷಿಣದ ಗಡಿಭಾಗದ ಹೆಜಮಾಡಿ, ಉತ್ತರದ ಗಡಿಭಾಗದ ಶಿರೂರು ಹಾಗೂ ಬ್ರಹ್ಮಾವರದ ಸಾಸ್ತಾನಗಳಲ್ಲಿ ಸೇರಿ ಒಟ್ಟು 3 ಟೋಲ್ ಗೇಟ್ ಗಳಿವೆ. ಈ ಎಲ್ಲಾ ಟೋಲ್ ಗಳಲ್ಲಿ ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ ಟೋಲ್ ಶುಲ್ಕ 5-10 ರು.ಗಳವರೆಗೆ ಹೆಚ್ಚಿಸಲಾಗಿದೆರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊಸ ಸೂಚನೆಯಂತೆ ಟೋಲ್ ದರ ಏರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪೂರ್ವ ಸೂಚನೆ, ಪತ್ರಿಕಾ ಪ್ರಕಟಣೆ ಇಲ್ಲದೆ ಏಕಾಏಕಿ ಈ ರೀತಿ ದರ ಏರಿಕೆಯ ಬಗ್ಗೆ ವಾಹನ ಮಾಲಕರು - ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದುವರೆಗೆ 60 ರು. ಇದ್ದ ಕಾರು ಜೀಪು ವ್ಯಾನ್ ಗಳ ಟೋಲ್ ಶುಲ್ಕವನ್ನು 65 ರು.ಗೇರಿಸಲಾಗಿದೆ. ಅದೇ ರೀತಿ ಬಸ್, ಟ್ರಕ್, ಲಾರಿಗಳ ಶುಲ್ಕವನ್ನು 210-215 ರು.ಗೆ, ಮೂರರಿಂದ ಆರು ಆ್ಯಕ್ಸೆಲ್ ವಾಹನಗಳಿಗೆ 325 ರಿಂದ 335 ರು.ಗಳಿಗೆ ಟೋಲ್ ದರ ಹೆಚ್ಚಿಸಲಾಗಿದೆ. ಇನ್ನು ಮುಂದೆ ಟೋಲ್ ಶುಲ್ಕ ನಗದಾಗಿ ಸ್ವೀಕರಿಸುವುದಿಲ್ಲ, ಯುಪಿಐ ಮೂಲಕವೇ ಪಾವತಿಸಬೇಕು ಎಂದೂ ನಿಮಯ ಜಾರಿಗೊಳಿಸಲಾಗಿದೆ. ಇದರಿಂದ ಬುಧವಾರ ಈ ಟೋಲ್‌ಗಳಲ್ಲಿ ಸಂಚರಿಸಿದ ವಾಹನ ಚಾಲಕರಿಗೆ ಶಾಕ್ ಆಗಿದೆ.ಉಡುಪಿ ಜಿಲ್ಲೆ ಧಾರ್ಮಿಕ ಮತ್ತು ಬೀಚ್ ಟೂರಿಸಂಗೆ ಪ್ರಸಿದ್ಧವಾಗಿದ್ದು, ಇಲ್ಲಿ ಹೊರ ಜಿಲ್ಲೆ - ರಾಜ್ಯಗಳಿಂದ ಹೆಚ್ಚು ಸಂಖ್ಯೆಯ ಪ್ರವಾಸಿಗರು ಬರುತ್ತಾರೆ, ಪ್ರತಿದಿನ ಈ ಟೋಲ್ ಗಳಲ್ಲಿ ಲಕ್ಷಾಂತರ ವಾಹನಗಳು ಹಾದುಹೋಗುತ್ತವೆ. ಈ ರೀತಿ ಏಕಾಏಕಿ ಟೋಲ್ ಶುಲ್ಕ ಏರಿಕೆಯಿಂದ ಟೋಲ್ ಸಂಸ್ಥೆಗಳು ಪ್ರತಿದಿನ ಲಕ್ಷಾಂತರ ರು. ಲಾಭ ಹೊಡೆಯುವ ಹುನ್ನಾರ ಮಾಡಲಾಗಿದೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
