ಸಾರಾಂಶ
ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ : ಮುಂಡರಗಿ ತಾಲೂಕಿನ ಡಂಬಳ ಹೋಬಳಿಯಲ್ಲಿ ಬೆಳೆದಿರುವ ಟೊಮೊಟೋ ಮಾರುಕಟ್ಟೆಯಲ್ಲಿ (ಮಂಡಿಗಳಲ್ಲಿ) ಬೆಲೆ ದಿಢೀರ್ ಕುಸಿತಗೊಂಡಿದ್ದು, ಇದರಿಂದ ರೈತಾಪಿ ವರ್ಗ ಅಕ್ಷರಶಃ ಕಂಗಾಲಾಗಿದ್ದಾರೆ.
ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿದಿನ ರೈತರು ಸಾವಿರಾರು ಬಾಕ್ಸ್‌ಗಳಲ್ಲಿ ಟೊಮೆಟೋ ತುಂಬಿಕೊಂಡು ಗದಗ, ಮುಂಡರಗಿಯಲ್ಲಿ ಟೊಮೆಟೋ ಮಾರುಕಟ್ಟೆ (ಮಂಡಿಗಳಲ್ಲಿ)ಗೆ ಹರಾಜಿಗೆ ತಂದಿದ್ದರು. ಪ್ರತಿ 15 ಕೆಜಿ ತೂಕದ ಒಂದು ಬಾಕ್ಸ್ ಕೇವಲ 50ರಿಂದ 100 ರು. ಗಳಿಗೆ ಬಿಕರಿಯಾಗುತ್ತಿದ್ದು, ಇದರಿಂದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ.
ಎಕರೆಗೆ ₹2 ಲಕ್ಷ ವೆಚ್ಚ: ಒಂದು ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆಯಲು ಸುಮಾರು ಎರಡು ಲಕ್ಷ ಖರ್ಚು ಬರುತ್ತದೆ. ರೈತರು ಮಾಡಿದ ವೆಚ್ಚಕ್ಕೆ ಸರಿಯಾಗಿ ಬೆಲೆ ಸಿಗದೆ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಟೊಮೆಟೋಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ರೈತರ ಕೈಗೆ ಕೇವಲ ರು. 10ರಿಂದ 20 ಸಾವಿರ ಸಿಗುವಂತಾಗಿದೆ.
ಕಳೆದ 3 ತಿಂಗಳುಗಳಿಂದ ಟೊಮೆಟೋ ಬೆಲೆ ಇದ್ದಕ್ಕಿದ್ದಂತೆ ಪಾತಾಳಕ್ಕೆ ಇಳಿದಿದ್ದು ರೈತರು ಕಂಗಾಲಾಗಿದ್ದಾರೆ ಬೆಳೆಗಾರರು ಕೋಟ್ಯಂತರ ರು.ಗಳ ನಷ್ಟ ಅನುಭವಿಸುತ್ತಿದ್ದು, ಕನಿಷ್ಠ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾರ್ಕೆಟ್, ರೈತರ ಟೊಮೆಟೋ ತೋಟಗಳಿಗಾಗಲಿ ಭೇಟಿ ನೀಡಿ ಪರಿಶೀಲಿಸಿಲ್ಲ, ಇದರಿಂದ ರೈತಾಪಿ ವರ್ಗದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೂಡಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ನಷ್ಟಕ್ಕೆ ಪರಿಹಾರ ತಲುಪಿಸಲು ಮುಂದಾಗಬೇಕಾಗಿದೆ.
ಈಗಾಗಲೆ ಸಾಕಷ್ಟು ಹಣ ಖರ್ಚು ಮಾಡಿ ಟೊಮೆಟೋ ಹಣ್ಣು ಬೆಳೆದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಜಮೀನಿನಲ್ಲಿಯೆ ಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದವರು ನಮಗೆ ಸೂಕ್ತ ಪರಿಹಾರವನ್ನು ನೀಡಲು ಮುಂದಾಗಬೇಕು ಡಂಬಳ ರೈತರಾದ ರೇವಣಪ್ಪ ಹೊಸೂರ, ಅಲ್ಲಿಸಾಬ ಸರಕಾವಾಸ ಹೇಳುತ್ತಾರೆ.