ಟೊಮೆಟೊ ದರ ಕುಸಿತ ಬೆಳೆಗಾರ ಕಂಗಾಲು

| Published : Apr 18 2025, 12:42 AM IST

ಸಾರಾಂಶ

ಏಕಾಏಕಿ ಟೊಮೆಟೊ ದರ ಪಾತಾಳಕ್ಕೆ ಕುಸಿದಿದೆ. ಇದರಿಂದಾಗಿ ರೈತರು ತೀವ್ರ ಕಂಗಾಲಾಗಿದ್ದಾರೆ. ಇದರ ಪರಿಣಾಮ ರೈತರ ತಾನು ಮಾಡಿದ ವೆಚ್ಚ ಕೂಡ ಬರುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದಾನೆ. ಹೀಗಾಗಿ ರೈತರು ಟೊಮೆಟೊ ಬೆಳೆಯನ್ನು ಕೆಲವೆಡೆ ದನಗಳಿಗೆ ಮೇವಾಗಿ ಬಳಸುತ್ತಿದ್ದಾರೆ. ಮತ್ತೆ ಕೆಲವೆಡೆ ರೈತರು ತಾವೇ ತಂದು ಚರಂಡಿಗೆ ಹಾಕುತ್ತಿದ್ದಾರೆ. ಇನ್ನೂ ಕೆಲವೆಡೆ ರೈತರು ಟೊಮೆಟೊ ಹಣ್ಣನ್ನು ತೋಟಗಳಲ್ಲೇ ಬಿಟ್ಟು ಕೊಳೆವಂತೆ ಮಾಡುತ್ತಿದ್ದಾರೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಏಕಾಏಕಿ ಟೊಮೆಟೊ ದರ ಪಾತಾಳಕ್ಕೆ ಕುಸಿದಿದೆ. ಇದರಿಂದಾಗಿ ರೈತರು ತೀವ್ರ ಕಂಗಾಲಾಗಿದ್ದಾರೆ. ಇದರ ಪರಿಣಾಮ ರೈತರ ತಾನು ಮಾಡಿದ ವೆಚ್ಚ ಕೂಡ ಬರುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದಾನೆ. ಹೀಗಾಗಿ ರೈತರು ಟೊಮೆಟೊ ಬೆಳೆಯನ್ನು ಕೆಲವೆಡೆ ದನಗಳಿಗೆ ಮೇವಾಗಿ ಬಳಸುತ್ತಿದ್ದಾರೆ. ಮತ್ತೆ ಕೆಲವೆಡೆ ರೈತರು ತಾವೇ ತಂದು ಚರಂಡಿಗೆ ಹಾಕುತ್ತಿದ್ದಾರೆ. ಇನ್ನೂ ಕೆಲವೆಡೆ ರೈತರು ಟೊಮೆಟೊ ಹಣ್ಣನ್ನು ತೋಟಗಳಲ್ಲೇ ಬಿಟ್ಟು ಕೊಳೆವಂತೆ ಮಾಡುತ್ತಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಹೆಚ್ಚು ರೈತರು ಟೊಮೆಟೊ ಬೆಳೆದಿದ್ದಾರೆ. ಜತೆಗೆ ಬಿಸಿಲ ವಾತಾವರಣದಿಂದಾಗಿ ಕಾಯಿಗಳು ಬೇಗ ಹಣ್ಣಾಗುತ್ತಿವೆ. ಅಲ್ಲದೆ ಹೊರರಾಜ್ಯಗಳಲ್ಲೂ ಟೊಮೆಟೊ ಹೆಚ್ಚಾಗಿ ಬೆಳೆದಿರುವುದರಿಂದ ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಹಣ್ಣು ರವಾನೆಯಾಗುತ್ತಿಲ್ಲ. ಇರುವ ಮಾರುಕಟ್ಟೆಯಲ್ಲೇ ಮಾರಾಟವಾಗಬೇಕಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರುಕಟ್ಟೆಗೆ ಬರುತ್ತಿದೆ. ಆದರೆ, ಬೇಡಿಕೆಯಿಲ್ಲದೆ ಬೆಲೆ ಕುಸಿದಿದೆ ಎನ್ನುತ್ತಾರೆ ರೈತರು. ರೈತರು ಪ್ರತಿ ಎಕರೆಗೆ ₹೩-೪ ಲಕ್ಷ ಖರ್ಚು ಮಾಡಿದ್ದಾರೆ. ಹಾಕಿದ ಬಂಡವಾಳದಲ್ಲಿ ಕಾಲು ಭಾಗವೂ ಸಿಗುತ್ತಿಲ್ಲ. ಇದರಿಂದಾಗಿ ರೈತರನ್ನು ಟೊಮೆಟೊ ನಷ್ಟದ ಕೂಪಕ್ಕೆ ದೂಡುವಂತಾಗಿದೆ. ಲೋಕಾಪೂರ ಮಾರುಕಟ್ಟೆಯಲ್ಲಿ ೧೫ ಕೆ.ಜಿ.ಯ ಒಂದು ಬಾಕ್ಸ್ ₹೫೦-೧೭೦ ದರವಿದೆ. ಅಂದರೆ, ಕೆಜಿಗೆ ₹೩.೨೫ ನಿಂದ ಆರಂಭವಾಗಿ, ಗುಣಮಟ್ಟದ ಹಣ್ಣು ₹೧೦ ವರೆಗೆ ಮಾತ್ರ ಬೆಲೆ ಇದೆ. ಆದರೆ, ರೈತರು ೧೫ ಕೆಜಿಯ ಹಣ್ಣು ಕಿತ್ತು ಮಾರುಕಟ್ಟೆಗೆ ತರುವ ವೇಳೆಗೆ ಅವರಿಗೆ ಸಾಕಷ್ಟು ಖರ್ಚುಗಳಾಗಿರುತ್ತದೆ. ಅಂದರೆ ಶೇ.೧೦-೧೫ರಷ್ಟು ಕಮಿಷನ್ ಸಾರಿಗೆ ವೆಚ್ಚ ಹಣ್ಣು ಬಿಡಿಸುವ ಕೂಲಿ ಹೀಗೆ ನಾನಾ ವೆಚ್ಚಗಳು ಸೇರಿದರೆ, ರೈತರಿಗೆ ಒಂದು ರೂಪಾಯಿಯೂ ಕೈಗೆ ಬರುವುದಿಲ್ಲ. ಹೀಗಾಗಿ, ಹೆಚ್ಚಿನ ರೈತರು ಹಣ್ಣು ಕೀಳದೆ ತೋಟಗಳಲ್ಲೇ ಬಿಡುವಂತಾಗಿದೆ. ಟೊಮೆಟೊಗೆ ಬೆಲೆ ಇಲ್ಲದೆ ಇರುವುದರಿಂದ ಕೊಳ್ಳುವವರಿಗೂ ನಷ್ಟವಾಗುತ್ತಿದೆ. ಸಾಗಣೆ ವೆಚ್ಚ ಮತ್ತು ಕಡಿಮೆ ಸಮಯದಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯ ಲಾಭವನ್ನು ತಗ್ಗಿಸಿದೆ. ೧ ಬಾಕ್ಸ್ ಟೊಮೆಟೋ ೧೦೦ ಇಲ್ಲವೆ ೧೨೦ಕ್ಕೂ ತಂದು ಮಾರಾಟ ಮಾಡಿದರೂ ನಿರ್ವಹಣಾ ವೆಚ್ಚದ ಏರಿಕೆಯಿಂದ ಟೊಮೆಟೊ ಕಟಾವು ಮಾಡಲಾಗದ ಸ್ಥಿತಿ ಇದೆ. ಇದರಿಂದ ಹಣ್ಣು ಗಿಡದಲ್ಲಿ ಕೊಳೆತು ಉದುರುತ್ತಿದೆ ಎನ್ನುತ್ತಾರೆ ಬೆಳೆಗಾರರು. ಹೊಜಿ ನೊಣದ ಭಾದೆ:

ಪಕ್ಷಗೊಂಡ ಹಣ್ಣಿಗೆ ಕೀಟ ಬಾಧೆಯೂ ಸೇರಿಕೊಂಡು ಹಣ್ಣಿನ ಗುಣಮಟ್ಟವನ್ನು ತಗ್ಗಿಸಿದೆ. ೧ ಟನ್ ಟೊಮೆಟೊ ಕೊಯ್ಲು ಮಾಡಿದರೆ, ೫೦ ರಿಂದ ೧೦೦ ಕೆಜಿಗೂ ಹೆಚ್ಚಿನ ಹಣ್ಣು ಕೊಳೆತು ಹೋಗುತ್ತದೆ. ಸಗಟು ವ್ಯಾಪಾರಿಗಳು ಈ ಹಣ್ಣನ್ನು ಪ್ರತ್ಯೇಕಿಸಿ ನಂತರ ಟೊಮೆಟೊಗೆ ಬೆಲೆ ನಿರ್ಧರಿಸುತ್ತಾರೆ. ಬೆಲೆ ಇಲ್ಲದೆ ಇರುವ ಕಾರಣ ಹಾಗೂ ಹಣ್ಣಿನಲ್ಲಿ ಕಾಣಿಸಿಕೊಂಡಿರುವ ಹೊಝಿ ಮತ್ತು ನುಶಿ ಕೀಟದ ನಿರ್ವಹಣೆಗೆ ರೈತರು ಮುಂದಾಗುತ್ತಿಲ್ಲ. ಇದರಿಂದ ಕೃಷಿಕರಿಗೂ ನಿರಾಸೆಯಾಗಿದೆ ಎಂದು ವ್ಯಾಪಾರಿ ಗುಲಾಬ ಬಾಗವಾನ ಹೇಳುತ್ತಾರೆ.

ನಾವು ೩ ಎಕರೆಗೆ ಟೊಮೆಟೊ ಹಾಕಿದ್ದೇವೆ. ಪ್ರತಿ ಎಕರೆಗೆ ₹೩-೪ ಲಕ್ಷ ಖರ್ಚು ಬಂದಿದೆ. ಆದರೆ, ಒಂದು ರೂಪಾಯಿಯನ್ನು ನೋಡಲಾಗದ ಪರಿಸ್ಥಿತಿಯಿದೆ.

- ಸಿದ್ದು ಚೌಧರಿ,

ಟೊಮೆಟೊ ಬೆಳೆಗಾರ, ವರ್ಚಗಲ್ ಗ್ರಾಮ.

ದೇಶದ ರಾಜಧಾನಿ ಹೊಸದಿಲ್ಲಿ, ಪಶ್ಚಿಮ ಬಂಗಾಳದ ಕೋಲ್ಕತಾ, ನೆರೆಯ ಆಂಧ್ರಪ್ರದೇಶ ಸೇರಿದಂತೆ ನಾನಾ ರಾಜ್ಯಗಳಿಗೆ ಮುಧೋಳ ಎಪಿಎಂಸಿಯಿಂದ ಟೋಮೆಟೊ ಹಣ್ಣು ಮಾರ್ಚ್‌- ಏಪ್ರಿಲ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿತ್ತು. ಆದರೆ, ಈ ಬಾರಿ ಆಯಾ ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಟೊಮೆಟೊ ಬೆಳೆದಿರುವುದರಿಂದ ಹೊರ ರಾಜ್ಯಗಳಿಗೆ ಹೋಗುತ್ತಿಲ್ಲ. ಎಲ್ಲಾ ಕಡೆಯೂ ಹೆಚ್ಚಿನ ಟೊಮೆಟೊ ಬೆಳೆದಿರುವುದರಿಂದ ಬೆಲೆ ಇಳಿಕೆಯಾಗಿದೆ.

- ರಮೇಶ, ಮುಧೋಳ

ಎಪಿಎಂಸಿ ರೈಟರ್