ಕೇಂದ್ರ-ರಾಜ್ಯ ಸರ್ಕಾರಗಳ ಇಲಾಖೆಗಳಲ್ಲಿ 12 ಲಕ್ಷಕ್ಕೂ ಅಧಿಕ ಉದ್ಯೋಗ ಖಾಲಿ ಇದ್ದರೂ, ಹುದ್ದೆಗಳ ಭರ್ತಿಗೆ ಮುಂದಾಗದ ಸರ್ಕಾರಗಳು ವಿದ್ಯಾರ್ಥಿಗಳ ಬದುಕಿನ ಜತೆ ಚಲ್ಲಾಟ ಆಡುತ್ತಿವೆ. ಉದ್ಯೋಗ ಭರ್ತಿಗೆ ಆಗ್ರಹಿಸಿ ಉದ್ಯೋಗಕಾಂಕ್ಷಿಗಳ ಹೋರಾಟ ಸಮಿತಿ ನಡೆಸುವ ಹೋರಾಟ ನ್ಯಾಯ ಸಮ್ಮತವಿದೆ.

ಧಾರವಾಡ:

ಉಭಯ ಸರ್ಕಾರದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಕಾಂಕ್ಷಿಗಳ ಹೋರಾಟ ಸಮಿತಿ ಡಿ.10ರಂದು ಧಾರವಾಡದಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಹೋರಾಟಗಾರ ಶರಣು ಗೋನಾವರ ಮಾಹಿತಿ ನೀಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ-ರಾಜ್ಯ ಸರ್ಕಾರಗಳ ಇಲಾಖೆಗಳಲ್ಲಿ 12 ಲಕ್ಷಕ್ಕೂ ಅಧಿಕ ಉದ್ಯೋಗ ಖಾಲಿ ಇದ್ದರೂ, ಹುದ್ದೆಗಳ ಭರ್ತಿಗೆ ಮುಂದಾಗದ ಸರ್ಕಾರಗಳು ವಿದ್ಯಾರ್ಥಿಗಳ ಬದುಕಿನ ಜತೆ ಚಲ್ಲಾಟ ಆಡುತ್ತಿವೆ. ಉದ್ಯೋಗ ಭರ್ತಿಗೆ ಆಗ್ರಹಿಸಿ ಉದ್ಯೋಗಕಾಂಕ್ಷಿಗಳ ಹೋರಾಟ ಸಮಿತಿ ನಡೆಸುವ ಹೋರಾಟ ನ್ಯಾಯ ಸಮ್ಮತವಿದೆ. ಈ ಹೋರಾಟಕ್ಕೆ ರಾಜ್ಯ ರೈತ ಸಂಘ, ರಾಜ್ಯ ರೈತ ಸಂಘ ಹಸಿರು ಸೇನೆ, ಕರ್ನಾಟಕ ರಾಜ್ಯ ರೈತ ಸೇನಾ ಬೆಂಬಲ ನೀಡಿವೆ ಎಂದರು.

ಇದಲ್ಲದೇ, ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಬಣ, ಚುಕ್ಕಿ ನಂಜುಂಡಸ್ವಾಮಿ ಬಣ, ಕೋಡಿಹಳ್ಳಿ ಬಣ, ಭಾರತೀಯ ಕೃಷಿಕ್ ಸಮಾಜ, ಉತ್ತರ ಕರ್ನಾಟಕ ರೈತ ಸಂಘ, ಕೃಷಿ ಕಾರ್ಮಿಕರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.

ಪರವಾನಗಿ ನೀಡದಿದ್ದರೂ ಹೋರಾಟ:

ಹೋರಾಟಗಾರ್ತಿ ದೀಪಾ ಧಾರವಾಡ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕಿಗೆ ಹೋರಾಡುವುದು ಸಂವಿಧಾನ ಬದ್ಧವಿದೆ. ಈ ಉದ್ಯೋಗಾಕಾಂಕ್ಷಿಗಳ ಹೋರಾಟವನ್ನು ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ಹತ್ತಿಕ್ಕುವಂತಹ ಹುನ್ನಾರ ನಡೆಸಿದೆ. ಡಿ. 10ರ ಶಾಂತಿಯುತ ಧರಣಿಗೂ ಇನ್ನೂ ಪರವಾನಗಿ ನೀಡಿಲ್ಲ. ಅನುಮತಿ ಕೊಡದಿದ್ದರೂ, ರೈತಪರ, ಕಾರ್ಮಿಕ ಪರ, ದಲಿತಪರ ಸಂಘಟನೆಗಳ ಬೆಂಬಲದೊಂದಿಗೆ ಡಿ. 10ರಂದು ಶ್ರೀನಗರ ವೃತ್ತದಲ್ಲಿ ಶಾಂತಿಯುತ ಧರಣಿ ನಡೆಸುವುದು ಶತಸಿದ್ಧ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.