ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ತಾಲೂಕಿನ ಕೆರಗೋಡು ಗ್ರಾಮದ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಏ.೧೦ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ ಹೇಳಿದರು.ಅಂದು ಬೆಳಗ್ಗೆ ೧೦ ಗಂಟೆಗೆ ಕ್ರೀಡಾ ಸ್ಪರ್ಧೆಗೆ ಶಾಸಕ ಪಿ.ರವಿಕುಮಾರ್ ಚಾಲನೆ ನೀಡುರವರು. ಕೆರಗೋಡು, ಮಾರಗೌಡನಹಳ್ಳಿ, ಹುಲಿವಾನ, ಹೊಡಾಘಟ್ಟ ಗ್ರಾಮದ ಮುಖಂಡರು ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಹಗ್ಗ-ಜಗ್ಗಾಟ, ಇಟ್ಟಿಗೆ ಹೊತ್ತು ಓಡುವ ಸ್ಪರ್ಧೆ, ಮ್ಯೂಸಿಕಲ್ ಚೇರ್, ಇಂಧನ ರಹಿತ ಅಡುಗೆ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈಗಾಗಲೇ ೧೫೦೦ ಮಹಿಳೆಯರು ಸ್ಪರ್ಧೆಗಳಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ನುಡಿದರು.ಸಂಜೆ ೩ ಗಂಟೆಗೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದ್ದು, ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶುಭದಾಯಿನಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್ ಉಪಸ್ಥಿತರಿರುವರು.
ಗೋಷ್ಠಿಯಲ್ಲಿ ಸುಜಾತಮಣಿ, ಅನುರಾಧ, ಶಕುಂತಲಾ, ರಾಧಾ, ಶಶಿಕಲಾ, ಜ್ಯೋತಿ, ಹನ್ಸಿಯಾಬಾನು ಇದ್ದರು.
ಬೆಂಗಳೂರಿನಲ್ಲಿ ಏ.24 ರಿಂದ 26ರವರೆಗೆ ರಾಜ್ಯ ಮಟ್ಟದ ವಿಶ್ವಕರ್ಮ ವಧು-ವರರ ಅನ್ವೇಷಣೆ: ಎಂ.ಪಿ.ಮಹೇಶ್
ಕನ್ನಡಪ್ರಭ ವಾರ್ತೆ ಮಂಡ್ಯಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾದಿಂದ ಏ.24ರಿಂದ 26ರವರೆಗೆ 3ನೇ ರಾಜ್ಯ ಮಟ್ಟದ ವಿಶ್ವಕರ್ಮ ವಧು-ವರರ ಅನ್ವೇಷಣಾ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮಹಾಸಭಾದ ಮದ್ದೂರು ತಾಲೂಕು ಅಧ್ಯಕ್ಷ ಎಂ.ಪಿ.ಮಹೇಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ರೇಸ್ ಕೋರ್ಸ್ ರಸ್ತೆಯ ಕನ್ನಡ ಚಲನಚಿತ್ರ, ವಾಣಿಜ್ಯ ಮಂಡಳಿ ಪಕ್ಕದ ಗುರುರಾಜ ಕಲ್ಯಾಣ ಮಂಟಪದಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರ ಸಾರಥ್ಯದಲ್ಲಿ ಮೂರು ದಿನ ಸಮುದಾಯದ ವಧು-ವರರ ಅನೇಷಣೆ ನಡೆಯಲಿದೆ ಎಂದರು.ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಸವರಾಜು ಕದಲೂರು ಹಾಗೂ ಅಶೋಕ್‌ಪುತ್ತಾರ್ ಅಧ್ಯಕ್ಷತೆ ವಹಿಸುವರು. ಮೊದಲ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ 200 ಜೋಡಿಗಳು, 2 ನೇ ಬಾರಿ 350 ಜೋಡಿಗಳು ಯಶಸ್ವಿ ಅನ್ವೇಷಣೆಗೊಂಡಿದ್ದವು. ಈ ಬಾರಿ 500ಕ್ಕೂ ಹೆಚ್ಚು ಜೋಡಿಗಳು ಅನ್ವೇಷಣೆಗೊಳ್ಳುವ ನಿರೀಕ್ಷೆಯಿದೆ ಎಂದರು.
ಜೋಡಿಗಳ ನಡುವೆ ಹೊಂದಾಣಿಕೆಯಾದಲ್ಲಿ ಸ್ಥಳದಲ್ಲೇ ವಿವಾಹ ನಿಶ್ಚಯಿಸಲು ಅವಕಾಶ ಕಲ್ಪಿಸಲಾಗುವುದು. ಸಾಮೂಹಿಕ ವಿವಾಹ ವೇದಿಕೆಯಲ್ಲಿ ಮಧುವೆಯಾಗಲು ಇಚ್ಛಿಸಿದರೆ ಅದನ್ನು ಏರ್ಪಡಿಸಲಾಗುವುದು. ಕೆ.ಪಿ.ನಂಜುಂಡಿ ಪುತ್ರಿಯರಿಗೂ ಇಲ್ಲಿಯೇ ವರರು ದೊರೆತಲ್ಲಿ ಅವರೂ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಸಲು ಸಿದ್ಧರಿದ್ದಾರೆ ಎಂದರು.ಈ ಕಾರ್ಯಕ್ರಮದಲ್ಲಿ ಸಮಾಜದ ವಿಧವೆಯರು, ವಿಧುರರು ಹಾಗೂ ವಿಚ್ಛೇದಿತರಿಗೂ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವ ವಧು-ವರರು ಅನ್ವೇಷಣೆ ಆರಂಭವಾಗುವ ಅವಧಿಯವರೆಗೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಮಾಜದ ವಾಟ್ಸಪ್ ಗುಂಪುಗಳಲ್ಲಿ ನೋಂದಣಿ ಅರ್ಜಿ ಮಾದರಿ ನೀಡಲಾಗಿದೆ. ಕಾರ್ಯಕ್ರಮದ ಮಾಹಿತಿ ಮತ್ತು ಉಸ್ತುವಾರಿ ವಹಿಸಿರುವ ಸುಂದರ್ (ಮೊ-9886423935) ಸಂಖ್ಯೆಯನ್ನು ನೋಂದಣಿಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜು ಕದಲೂರು, ಜಿಲ್ಲಾಧ್ಯಕ್ಷ ಎಂ.ಎನ್.ಸುದರ್ಶನ್, ಮುಖಂಡರಾದ ದೇವರಾಜು, ರವಿಪ್ರಸಾದ ಆಚಾರ್, ಸೋಮಣ್ಣ, ಈಶ್ವರ್ ಆಚಾರ್, ಎಂ.ಎನ್.ಕುಮಾರ್ ಇದ್ದರು.