ನಾಳೆ ಶ್ರೀ ಲಕ್ಷ್ಮಿದೇವಿ ಅಗ್ನಿಕುಂಡ ಜಾತ್ರೆ

| Published : Mar 31 2024, 02:08 AM IST

ಸಾರಾಂಶ

ಕುದೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮಿದೇವಿ ಅಮ್ಮನವರ ಅಗ್ನಿಕುಂಡ ಜಾತ್ರೆಯನ್ನು ಏ.1 ರಂದು ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕುದೂರು

ಕುದೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮಿದೇವಿ ಅಮ್ಮನವರ ಅಗ್ನಿಕುಂಡ ಜಾತ್ರೆಯನ್ನು ಏ.1 ರಂದು ಏರ್ಪಡಿಸಲಾಗಿದೆ. ಗ್ರಾಮದ ಅಧಿ ದೇವತೆಯಾಗಿದ್ದುಕೊಂಡು ಗ್ರಾಮವನ್ನು ರಕ್ಷಿಸುತ್ತಿರುವ ಶಕ್ತಿದೇವತೆ ಕುದೂರಮ್ಮ ಎಂದೇ ಹೆಸರಾಗಿದೆ. ಕುದೂರು ಗ್ರಾಮ ಮೊದಲು ಭೈರವೇಶ್ವರ ಸ್ವಾಮಿ ಬೆಟ್ಟದ ಮೇಲಿತ್ತು. ಈಗಿರುವ ಪ್ರದೇಶ ಸಂಪೂರ್ಣವಾಗಿ ಕಾಡು ಪ್ರದೇಶವಾಗಿತ್ತು. ಬೆಟ್ಟದ ಮೇಲೆ ಅನ್ನ ನೀರಿಗೆ ಬರ ಬಂದಾಗ ಜನರು ಕಾಡಿನ ಪ್ರದೇಶವಾಗಿದ್ದ ಈಗಿನ ಕುದೂರಿನ ಪ್ರದೇಶಕ್ಕೆ ವಲಸೆ ಬರುತ್ತಾರೆ. ಹೀಗೆ ಬೆಟ್ಟದಿಂದ ಇಳಿದು ಬಂದು ನಿರ್ಮಾಣವಾದದ್ದೆ ಕುದೂರು ಗ್ರಾಮ. ಇಲ್ಲಿಗೆ ಹೊಂಬಾಳೆಯ ರೂಪದಲ್ಲಿ ಶ್ರೀಲಕ್ಷ್ಮೀದೇವಿ ಅಮ್ಮನವರನ್ನು ಪ್ರತಿಷ್ಟಾಪಿಸಿ ಪೂಜೆಯನ್ನಾರಂಭಿಸಿ ಇಂದಿಗೆ 450 ವರ್ಷಗಳಾಯಿತು.

ಮಾಂಸಾಹಾರ ಹಾಗೂ ಮೆಣಸಿನ ಕಾಯಿ ಘಾಟು ನಿಶಿದ್ಧ:

ಕುದೂರು ಗ್ರಾಮದಲ್ಲಿ ಮಾಂಸಾಹಾರಿ ಮತ್ತು ಸಸ್ಯಾಹಾರಿ ಎರಡೂ ರೀತಿಯ ಜನರಿರುವ ಗ್ರಾಮ. ಆದರೆ ಕುದೂರಮ್ಮನ ಜಾತ್ರೆಯ ಒಂದು ವಾರ ಮುನ್ನ ಸಾರಿಕ್ಕುವ ಕೆಲಸ ಮಾಡುತ್ತಾರೆ. (ತಮಟೆ ಮೂಲಕ ಜಾತ್ರೆಯ ಪ್ರಕ್ರಿಯೆಯನ್ನು ಘೋಷಿಸುವುದು) ಆ ದಿನದಿಂದ ಜಾತ್ರೆ ಮುಗಿದು ಎರಡು ದಿನಗಳ ನಂತರ ಕಂಬ ವಿಸರ್ಜನೆ ಮಾಡುವವರೆವಿಗೂ ಗ್ರಾಮದಲ್ಲಿ ಮಾಂಸಾಹಾರ ಸೇವಿಸುವಂತಿಲ್ಲ. ಇಂದಿಗೂ ಕೂಡಾ ಅಷ್ಟು ಕಟ್ಟುನಿಟ್ಟಾಗಿ ಈ ಪದ್ದತಿಯನ್ನು ನಡೆಸಿಕೊಂಡು ಬರಲಾಗಿದೆ.

ಜಾತ್ರೆಯ ಘೋಷಣೆ ಕೇಳಿದ ದಿನ ಗ್ರಾಮದಲ್ಲಿದ್ದರೆ ಅವರು ಜಾತ್ರೆಯ ದಿನ ಬಂದು ದೇವರ ಪೂಜೆ ಮಾಡಿಸಿಕೊಂಡು ಹೋಗಬೇಕು ಎಂಬುದು ಪ್ರತೀತಿ. ಜಾತ್ರೆ ಘೋಷಣೆಯಾದ ದಿನದಿಂದ ಕೇವಲ ಮಾಂಸಾಹಾರ ನಿಶಿದ್ದ ಮಾತ್ರವಲ್ಲ. ಖಾರದ ಪುಡಿ ಮಾಡುವಂತಿಲ್ಲ. ಮೆಣಸಿನಕಾಯಿ ಘಾಟು ಹಾಕುವಂತಿಲ್ಲ. ಇಂತಹ ಪದ್ದತಿಗಳನ್ನು ಚಾಚೂ ತಪ್ಪದೆ ಜನರು ಆಚರಿಸಿಕೊಂಡು ಬರುತ್ತಿದ್ದಾರೆ.

ಇಲ್ಲಿನ ಲಕ್ಷ್ಮೀದೇವಿ ಅಮ್ಮನವರ ಅಗ್ನಿಕುಂಡ ಮಾಗಡಿ ತಾಲೂಕಿನಲ್ಲಿಯೇ ಅತ್ಯಂತ ಉದ್ದನೆಯ ಕೊಂಡ ಎಂದು ಹೆಸರಾಗಿದೆ. ಅರವತ್ತು ಅಡಿ ಉದ್ದ, ನಾಲ್ಕು ಅಡಿ ಅಗಲ ಇರುತ್ತದೆ. ಇದರ ತುಂಬ ಕಗ್ಗಲಿ ಮರದ ತುಂಡುಗಳನ್ನು ಹಾಕಿ ಕೆಂಡವನ್ನಾಗಿಸುತ್ತಾರೆ. ಅದರ ಮೇಲೆ ಹರಕೆ ಹೊತ್ತವರು ಓಡುತ್ತಾರೆ.

ಕಗ್ಗಲಿಮರವೇ ಏಕೆ? :

ಕಗ್ಗಲಿಮರ ಕಾಡು ಪ್ರದೇಶಗಳಲ್ಲಿ ಬೆಳೆಯುವ ಮರವಾಗಿದ್ದು. ಇದನ್ನು ಸುಟ್ಟಾಗ ಇದರ ಕೆಂಡಗಳು ಬಿಡಿಬಿಡಿಯಾಗಿ ದಪ್ಪನೆಯ ಆಕಾರದಲ್ಲಿ ರೂಪುಗೊಳ್ಳುತ್ತವೆ. ಇದರ ಮೇಲೆ ಜನರು ಹರಕೆ ಹೊತ್ತು ಕೆಂಡದಲ್ಲಿ ಓಡಿ ಹರಕೆ ತೀರಿಸುತ್ತಾರೆ. ನಿಗಿನಿಗಿ ಉರಿವ ಕೆಂಡದ ಮೇಲೆ ಓಡುವಾಗ ಜನರು ಕಡ್ಡಾಯವಾಗಿ ವೃತಧಾರಿಯಾಗಿರಬೇಕು. ಬೆಳಗಿನಿಂದ ಉಪವಾಸ ಇದ್ದು, ಊರ ಹೊರಗೆ ಪ್ರಕೃತಿಯ ಮಡಿಲೊ ಅಥವಾ ದೇವಾಲಯದಲ್ಲಿ ದೇವರ ನಾಮ ಪಠಿಸುತ್ತಾ ಕಾಲಿಗೆ ಚಪ್ಪಲಿ ಧರಿಸದೆ ಅತ್ಯಂತ ಶಿಸ್ತಾಗಿ ಇರಬೇಕು. ರಾತ್ರಿ ಹತ್ತರ ಸುಮಾರಿಗೆ ದೇವಾಲಯ ಪೂಜಾ ಪದ್ದತಿಗಳೆಲ್ಲ ಮುಗಿದ ನಂತರ ಒಬ್ಬರ ಹಿಂದೆ ಒಬ್ಬರು ಬಂದು ತಮ್ಮ ಕೈಯಲಿದ್ದ ಶ್ರೀಲಕ್ಷ್ಮೀದೇವಿ ಅಮ್ಮನವರ ಸ್ವರೂಪ ಎಂಬ ಹೊಂಬಾಳೆಯನ್ನು ಹಿಡಿದು ಕೆಂಡದ ಮೇಲೆ ಓಡಬೇಕು. ಹೀಗೆ ಹರಕೆ ಹೊತ್ತು ಓಡುವವರನ್ನು ವೀರಮಕ್ಕಳು ಎಂದು ಕರೆಯಲ್ಪಡುತ್ತಾರೆ.

ಜಾತ್ರೆಯ ಎರಡು ದಿನ ಹಿಂದೆ ಎತ್ತಿನ ಗಾಡಿಗಳ ಮೂಲಕ ಕಗ್ಗಲಿಸೌದೆಯನ್ನು ಗ್ರಾಮದ ಪುರಬೀದಿಯಲ್ಲಿ ಮೆರವಣಿಗೆ ಮಾಡಿ ತರುತ್ತಾರೆ. ಅಂದಿನ ರಾತ್ರಿ ದಾಸಪ್ಪನಹಾಳ್ಯದಿಂದ ಹೊಂಬಾಳೆ ಜೊತೆಗೆ ಅಲ್ಲಿಯ ಮಜ್ಜನ ಬಾವಿಯಿಂದ ನೀರು ತರಲಾಗುತ್ತದೆ. ಆ ಗ್ರಾಮದ ಎಲ್ಲಾ ಜನರು ಇಂದಿಗೂ ಶ್ರೀಲಕ್ಷ್ಮೀದೇವಿ ಅಮ್ಮನವರಿಗೆ ಪ್ರತಿಮನೆಯವರು ಮಡಿಲಕ್ಕಿ ಕಟ್ಟಿ ಸಂಭ್ರಮಿಸುತ್ತಾರೆ.

ಸೋಮವಾರ ರಾತ್ರಿ ಹತ್ತು ಗಂಟೆಗೆ ವೀರಮಕ್ಕಳು ಅಗ್ನಿಕುಂಡದಲ್ಲಿ ಓಡುವ ದೃಶ್ಯ. ನೂರಾರು ಮಕ್ಕಳು, ಮಹಿಳೆಯರು ಗಂಡಸರು ಬಾಯಿ ಬೀಗ ಎಂಬ ಸೇವೆ ಮಾಡುತ್ತಾರೆ. ಇದನ್ನು ನೋಡಲು ಸಾವಿರಾರು ಜನರು ಸಾಕ್ಷಿಯಾಗುತ್ತಾರೆ.450 ವರ್ಷಗಳ ಚರಿತ್ರೆಯುಳ್ಳ ಈ ದೇವಾಲಯದ ಜಾತ್ರೆ ಬಹಳ ಮಹತ್ವವನ್ನು ಪಡೆದಿದೆ. ಹೊಂಬಾಳೆಯ ಮೂಲಕ ತಾಯಿ ಲಕ್ಷ್ಮೀದೇವಿಯನ್ನು ಪೂಜಿಸಲಾಗುತ್ತದೆ. ಜಾತ್ರೆಯ ಎರಡು ದಿನ ಹಿಂದಿನಿಂದಲೇ ನಾವು ಎಳನೀರು ಸೇವಿಸಿ ಉಪವಾಸ ಮಾಡಲಾಗುತ್ತದೆ. ಜಾತ್ರೆ ಮುಗಿವವರೆಗೂ ಶಿಸ್ತಿನ ವ್ರತಗಳನ್ನು ಆಚರಿಸುತ್ತೇವೆ. ಕುದೂರು ಗ್ರಾಮದ ಪ್ರತಿ ಹಂತದಲ್ಲೂ ಕುದೂರಮ್ಮನ ಕೃಪೆ ಇರುವುದರಿಂದ ಇಲ್ಲಿ ಬರ ಬರುವುದಿಲ್ಲ.

- ಮಲ್ಲೇಶಯ್ಯ, ಪ್ರಧಾನ ಅರ್ಚಕರು