ನಾಳೆ ಶಿವಕುಮಾರ ಸ್ವಾಮೀಜಿ 5ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ

| Published : Jan 20 2024, 02:03 AM IST

ಸಾರಾಂಶ

ನಾಳೆ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಅವರ 5ನೇ ವರ್ಷದ ಪುಣ್ಯಸ್ಮರಣೆ

ಕನ್ನಡಪ್ರಭ ವಾರ್ತೆ ತುಮಕೂರು

ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮಿಗಳ 5ನೇ ವರ್ಷದ ಪುಣ್ಯ ಸಂಸ್ಮರಣೋತ್ಸವವನ್ನು ಜ. 21 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಿದ್ಧಗಂಗಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಗಂಗಾ ಸಂಸ್ಥೆ ಕಾರ್ಯದರ್ಶಿ ನಂಜುಂಡಪ್ಪ ತಿಳಿಸಿದರು.

ಅಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಹಿಸಲಿದ್ದಾರೆ. ನೇತೃತ್ವವನ್ನು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ವಹಿಸಲಿದ್ದು ಸಾನಿಧ್ಯವನ್ನು ಡಾ. ತೋಂಟದ ಸಿದ್ಧರಾಮಸ್ವಾಮಿಗಳು ವಹಿಸಲಿದ್ದು ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮಿಗಳು ಉಪಸ್ಥಿತರಿರುವರು.

ಡಾ. ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯ ಎಸ್ಎಂಸಿಆರ್‌ಐ ಉದ್ಘಾಟನೆಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಡಲಿದ್ದು ಶಿವಕುಮಾರ ಸ್ವಾಮೀಜಿ ಅವರ ಸ್ಮೃತಿವನ ಉದ್ಘಾಟನೆಯನ್ನು ಅರಣ್ಯ ಹಾಗೂ ಪರಿಸರ ವಿಜ್ಞಾನ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ. ಸಿದ್ಧಗಂಗಾ ಫಾರ್ಮಸಿ ಕಾಲೇಜು ನೂತನ ಕಟ್ಟಡವನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಉದ್ಘಾಟಿಸಲಿದ್ದಾರೆ.

ಸ್ನಾತಕೋತ್ತರ ವಿಭಾಗದ ಎಸ್ಎಂಸಿಆರ್‌ಐ ಕಟ್ಟಡದ ಶಂಕುಸ್ಥಾಪನೆಯನ್ನು ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು ನೆರವೇರಿಸಲಿದ್ದು, ವಸತಿ ಗೃಹಗಳ ಕಟ್ಟಡದ ಶಂಕುಸ್ಥಾಪನೆಯನ್ನು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನಯ್ಯ ನೆರವೇರಿಸುವರು.

ಮುಖ್ಯ ಅತಿಥಿಯಾಗಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಮುಖ್ಯಮಂತ್ರಿ ಸಲಹೆಗಾರ ಬಿ.ಆರ್‌. ಪಾಟೀಲ್, ಸಂಸದ ಜಿ.ಎಸ್. ಬಸವರಾಜು ಹಾಗೂ ವಿಶೇಷ ಆಹ್ವಾನಿತರಾಗಿ ಶಾಸಕರಾದ ಬಾಲಕೃಷ್ಣಪ್ಪ, ಬಿ. ಸುರೇಶಗೌಡ, ಜ್ಯೋತಿ ಗಣೇಶ್ ಮತ್ತು ಎನ್. ಶ್ರೀನಿವಾಸ್ ಭಾಗವಹಿಸಲಿದ್ದಾರೆ ಎಂದರು.

ಶ್ರೀಗಳ ಸಂಸ್ಮರಣೋತ್ಸವ ಅಂಗವಾಗಿ ಅನ್ನ ದಾಸೋಹವನ್ನು ಏರ್ಪಡಿಸಿದ್ದು ಬೆಳಿಗ್ಗೆ ಉಪಹಾರಕ್ಕೆ ಉಪ್ಪಿಟ್ಟು ಕೇಸರಿಬಾತು, ಊಟಕ್ಕೆ ಕೀರು, ಸಿಹಿ ಬೂಂದಿ, ಖಾರಬೂಂದಿ, ಚಿತ್ರನ್ನ, ಅನ್ನ ಸಾಂಬಾರು ವ್ಯವಸ್ಥೆ ಮಾಡಲಾಗಿದೆ ಎಂದು ಅನ್ನದಾಸೋಹದ ವ್ಯವಸ್ಥಾಪಕ ವಿಶ್ವನಾಥಯ್ಯ ತಿಳಿಸಿದರು.

ಪತ್ರಿಕಾಗೋಷ್ಢಿಯಲ್ಲಿ ಕೇಂದ್ರ ಸರ್ಕಾರದ ಕೈಗಾರಿಕಾ ಇಲಾಖೆ ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನಯ್ಯ, ಸಿದ್ಧಗಂಗಾ ಸಂಸ್ಥೆಯ ಸಹ ಕಾರ್ಯದರ್ಶಿ ಶಿವಕುಮಾರಯ್ಯ, ಮಠದ ಪತ್ರಿಕಾ ಸಂಚಾಲಕ ಎಸ್ಐಟಿ ಮೋಹನ ಕುಮಾರ್ ಇದ್ದರು.