ನಾಳೆ ಕೆ. ಎಚ್. ಪಾಟೀಲ ಜನ್ಮ ಶತಮಾನೋತ್ಸವ, ಕಾಟನ್ ಸೇಲ್ ಸೊಸೈಟಿ ನವೀನ ಕಟ್ಟಡ ಉದ್ಘಾಟನೆ

| Published : Mar 15 2025, 01:06 AM IST

ನಾಳೆ ಕೆ. ಎಚ್. ಪಾಟೀಲ ಜನ್ಮ ಶತಮಾನೋತ್ಸವ, ಕಾಟನ್ ಸೇಲ್ ಸೊಸೈಟಿ ನವೀನ ಕಟ್ಟಡ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾ. 16ರಂದು ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ದಿ. ಕೆ. ಎಚ್. ಪಾಟೀಲ ಜನ್ಮ ಶತಮಾನೋತ್ಸವ ಆಚರಣೆ ಮತ್ತು ಗದಗ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸೈಟಿ ನವೀನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಮಾಜಿ ಶಾಸಕ ಡಿ. ಆರ್. ಪಾಟೀಲ ಹೇಳಿದರು.

ಗದಗ: ಮಾ. 16ರಂದು ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ದಿ. ಕೆ. ಎಚ್. ಪಾಟೀಲ ಜನ್ಮ ಶತಮಾನೋತ್ಸವ ಆಚರಣೆ ಮತ್ತು ಗದಗ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸೈಟಿ ನವೀನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಮಾಜಿ ಶಾಸಕ ಡಿ. ಆರ್. ಪಾಟೀಲ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ್ಮ ಶತಮಾನೋತ್ಸವದ ಅಂಗವಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆ. ಎಚ್. ಪಾಟೀಲ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸಹಕಾರಿ ರಂಗದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಎಪಿಎಂಸಿ ಅಧ್ಯಕ್ಷರಾಗಿ ಮಾರುಕಟ್ಟೆಯನ್ನು ಉನ್ನತೀಕರಣ ಮಾಡಿದರು. ಅವರು ವಹಿಸಿಕೊಂಡ ಸ್ಥಾನಮಾನದಲ್ಲಿ ನೆನಪಿನಲ್ಲಿ ಉಳಿಯುವ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದರು ಎಂದರು.

ರೈತರಿಗೆ ಯಾವ ಸರ್ಕಾರದ ಸಬ್ಸಿಡಿ ಬೇಕಾಗಿಲ್ಲ. ತಾವು ಬೆಳೆದ ಬೆಳೆಗಳ ಬೆಲೆಯನ್ನು ತಾವೇ ನಿರ್ಧರಿಸಬೇಕು ಎನ್ನುವುದು ಅವರ ಕನಸಾಗಿತ್ತು. ಆದರೆ, ರಾಜಕೀಯ ಪಕ್ಷಗಳು ನಗರ ಪ್ರದೇಶದ ನಾಯಕರು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದ ನಾಯಕರು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದಾಗ ಮಾತ್ರ ಈ ವ್ಯವಸ್ಥೆ ಬರಲು ಸಾಧ್ಯವಾಗುತ್ತದೆ ಎನ್ನುವುದು ಕೆ.ಎಚ್. ಪಾಟೀಲರ ಕನಸಾಗಿತ್ತು ಎಂದರು.

ಅವರ ಜನ್ಮ ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದು, ಗದಗ ಕೋ-ಆಪರೇಟಿವ್ ಕಾಟನ್ ಸೇಲ್ ಸೊಸೈಟಿ ನವೀನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ವಿಪ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ ಶಿವಕುಮಾರ, ಸಹಕಾರ ಸಚಿವ ಕೆ. ಎನ್. ರಾಜಣ್ಣ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಕೆ. ಪಾಟೀಲ ವಹಿಸಿಕೊಳ್ಳಲಿದ್ದಾರೆ.

ದಿ.ಕೆ.ಎಚ್.ಪಾಟೀಲರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಗಳಿದ್ದವು ಅಂತ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್ ನಂತಹ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೇರ ನುಡಿಗಳ ಮೂಲಕ ರಾಜಕೀಯದಲ್ಲಿ ವಿಶೇಷ ನಾಯಕತ್ವವನ್ನು ಅವರು ವಹಿಸಿಕೊಂಡಿದ್ದರು. ಅವರು ತಮ್ಮ ಜೊತೆ ಗುರುತಿಸಿಕೊಂಡಿರುವ ಹಿಂಬಾಲಕರನ್ನು ಯಾವತ್ತೂ ಕೈ ಬಿಟ್ಟಿರಲಿಲ್ಲ ಎಂದು ಸ್ಮರಿಸಿದರು.

ಈ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಗುರುರಾಜ ಬಳಗಾನೂರ, ವಾಸಣ್ಣ ಕುರಡಗಿ, ನಗರಸಭೆ ಸದಸ್ಯ ಎಲ್. ಡಿ. ಚಂದಾವರಿ, ಶಹರ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಅಕ್ಬರಸಾಬ್ ಬಬರ್ಚಿ, ಜೆ.ಕೆ. ಜಮಾದಾರ, ಸಿದ್ದಲಿಂಗೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.