ನಾಳೆ ಸದ್ಗುರು ಪತ್ರೇಶ್ವರ ಶ್ರೀ, ಉಳವಿ ಚನ್ನಬಸವೇಶ್ವರ ಜಾತ್ರೆ

| Published : Feb 12 2025, 12:32 AM IST

ನಾಳೆ ಸದ್ಗುರು ಪತ್ರೇಶ್ವರ ಶ್ರೀ, ಉಳವಿ ಚನ್ನಬಸವೇಶ್ವರ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲಕಾಲಕ್ಕೆ ಅನೇಕ ಶರಣರು, ಸಂತರು, ಪವಾಡ ಪುರುಷರು, ಮಹಿಮರು ಸಮಾಜ ಸುಧಾರಣೆ ಕೈಗೊಂಡ ಇತಿಹಾಸ ಇದೆ. ಅಂತಹ ಶ್ರೇಷ್ಠ ಸಂತರ ಸಾಲಿನಲ್ಲಿ ಪುಣ್ಯ ಕ್ಷೇತ್ರ ಕದಾಂಪುರ ಗ್ರಾಮದಲ್ಲಿ ನೆಲೆಸಿರುವ ಸದ್ಗುರು ಶ್ರೀಪತ್ರೇಶ್ವರ ಮಹಾಸ್ವಾಮಿಗಳಾಗಿದ್ದಾರೆ

ರಿಯಾಜಅಹ್ಮದ ಎಂ ದೊಡ್ಡಮನಿ ಡಂಬಳ

ಸಮೀಪದ ಕದಾಂಪುರ ಗ್ರಾಮದ ಶ್ರೀ ಸದ್ಗುರು ಪತ್ರೇಶ್ವರ ಮಹಾಸ್ವಾಮೀಜಿ ಹಾಗೂ ಉಳವಿ ಚನ್ನಬಸವೇಶ್ವರ ಜಾತ್ರಾಮಹೋತ್ಸವ ಫೆ.13 ರಂದು ವಿಜೃಂಭಣೆಯಿಂದ ಜರುಗಲಿದೆ.

ಶ್ರೀಸದ್ಗುರು ಪತ್ರೇಶ್ವರ ಮಹಾಸ್ವಾಮಿಗಳು ಮೂಲತಃ ಕದಾಂಪುರ ಮಠದ ಪರಂಪರೆಯಿಂದ ಬಂದವರಾದರೂ ಲೋಕಸಂಚಾರ ಮಾಡಿದರು. ಅವರ ನಂತರ ಮೃಗೇಶ್ವರ ಮಹಾಸ್ವಾಮೀಜಿ, ಚೆನ್ನಬಸವೇಶ್ವರ ಮಹಾಸ್ವಾಮಿಗಳು ಮಠವನ್ನು ಮುನ್ನಡೆಸಿದ್ದು, ಅವರ ಐಕ್ಯ ಸ್ಥಳದ ಗದ್ದುಗೆ ಧಾರವಾಡದ ಕಮಲಾಪುರದಲ್ಲಿ ಇದೆ.

ಕಾಲಕಾಲಕ್ಕೆ ಅನೇಕ ಶರಣರು, ಸಂತರು, ಪವಾಡ ಪುರುಷರು, ಮಹಿಮರು ಸಮಾಜ ಸುಧಾರಣೆ ಕೈಗೊಂಡ ಇತಿಹಾಸ ಇದೆ. ಅಂತಹ ಶ್ರೇಷ್ಠ ಸಂತರ ಸಾಲಿನಲ್ಲಿ ಪುಣ್ಯ ಕ್ಷೇತ್ರ ಕದಾಂಪುರ ಗ್ರಾಮದಲ್ಲಿ ನೆಲೆಸಿರುವ ಸದ್ಗುರು ಶ್ರೀಪತ್ರೇಶ್ವರ ಮಹಾಸ್ವಾಮಿಗಳಾಗಿದ್ದಾರೆ.

ಶ್ರೀಸದ್ಗುರು ಪತ್ರೇಶ್ವರ ಶ್ರೀಗಳ ತಪೋ ಬಲದಿಂದ ಇಂದು ಕದಾಂಪುರ ಗ್ರಾಮವು ಪಾವನ ಕ್ಷೇತ್ರ, ಭಾವೈಕ್ಯತೆಯ ಸಂಗಮವಾಗಿ ಬೆಳೆದಿದ್ದು. ಅನಕ್ಷರತೆ, ಅಜ್ಞಾನ, ಬಡತನ, ಅಂಧಶ್ರದ್ಧೆ, ಮೂಢನಂಬಿಕೆಯಂತಹ ಪಿಡುಗುಗಳನ್ನು ಶ್ರೀಗಳು ಹೋಗಲಾಡಿಸಲು ಸತತ ಶ್ರಮಿಸಿದರು. ಅವರ ವಿಚಾರಗಳನ್ನು ಗ್ರಾಮಸ್ಥರು ಅಳವಡಿಸಿಕೊಂಡಿದ್ದರಿಂದ ಗ್ರಾಮವು ಸಮೃದ್ಧಿಯ ಬೀಡಾಗಿ, ಶಿಕ್ಷಣ ಕ್ಷೇತ್ರ, ಹತ್ತು ಹಲವು ಕ್ರೀಡಾ ಚಟುವಟಿಕೆಗಳ ತಾಣವಾಗಿ ಬದಲಾವಣೆಗೊಂಡಿದೆ. ಶ್ರೀಸದ್ಗುರು ಪತ್ರೇಶ್ವರ ಮಹಾಸ್ವಾಮಿಗಳು ಹಾಕಿಕೊಟ್ಟ ಸದ್ವಿಚಾರಗಳು ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿ, ಗ್ರಾಮಸ್ಥರಲ್ಲಿ ವಾತ್ಸಲ್ಯದ ಬದುಕು ನಿರ್ಮಾಣವಾಗಿದೆ.

ಸಂಸ್ಕಾರ ಭರಿತ ಜಾತ್ರೆ: ದುಡಿದು ದಣಿದ ಗ್ರಾಮೀಣ ಜನತೆಯಲ್ಲಿ ಜೀವನೋತ್ಸಾಹ ತುಂಬಲು, ಸುಗ್ಗಿಯ ಸಡಗರ ಸಾರ್ಥಕಗೊಳಿಸಲು ಸದ್ಗುರು ಪತ್ರೇಶ್ವರ ಶ್ರೀಗಳು ಸಂಸ್ಕಾರ ಭರಿತ ಜಾತ್ರಾ ಮಹೋತ್ಸವ ಆರಂಭಿಸಿದರು. ಗ್ರಾಮದ ಭಕ್ತರ ಮೂಲಕ ಜಾತ್ರೆ ಈಗ ವಿಶಿಷ್ಟ-ವೈಚಾರಿಕ ಜಾತ್ರಾ ಮಹೋತ್ಸವವಾಗಿ ಪರಿವರ್ತನೆಯಾಗಿದೆ. ಭಕ್ತರಿಂದಲೆ ಹಲವು ಕಾರ್ಯಕ್ರಮ ನಡೆಯುವ ಜಾತ್ರೆಯಾಗಿದ್ದು. ಸುತ್ತುಮುತ್ತಲಿನ ಗ್ರಾಮಗಳ ಭಕ್ತರು ಜಾತ್ರಾಮಹೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಕತೃ ಗದ್ದುಗೆ ಶ್ರೀಸದ್ಗುರು ಪತ್ರೇಶ್ವರರ ಮಹಾಸ್ವಾಮಿಗಳಿಗೆ ಭಕ್ತಿಯ ಪೂಜೆ ಸಲ್ಲಿಸಲಿದ್ದಾರೆ.

ಜಾತ್ರೆಯಲ್ಲಿ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಕಬಡ್ಡಿ, ಕುರಿ ಸಾಕಾಣಿಕೆಗೆ ಉತ್ತೇಜನ ನೀಡಲು ಟಗರಿನ ಕಾಳಗ ಹಾಗೂ ನಾಟಕಗಳ ಪ್ರದರ್ಶನ ಸೇರಿದಂತೆ ಇತರರ ಕಾರ್ಯಕ್ರಮ ಆಯೋಜನೆ ಮೂಲಕ ಭಾವೈಕ್ಯತೆಯ ಸಂಗಮವಾಗಿ ಬದಲಾವಣೆಗೊಂಡಿದೆ.

ಶ್ರೀಸದ್ಗುರು ಪತ್ರೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಹಿರಿಯರ ನೇತೃತ್ವದಲ್ಲಿ ಹಲವು ಕ್ರೀಡಾ ಚಟುವಟಿಕೆ, ನಾಟಕ, ಸಂಸ್ಕ್ರತಿಕ ಕಾರ್ಯಕ್ರಮದ ಆಯೋಜನೆ ಮಾಡುವುದರ ಮೂಲಕ ಯುವಕರಿಗೆ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ವರ್ಷ ಜಾತ್ರಾ ಮಹೋತ್ಸವವನ್ನು ಜಾತಿ ಮತ ಪಂಥ ಎನ್ನದೆ ಭಕ್ತರಿಂದಲೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಸಮಾಜ ಸೇವಕ ಶಿವಪ್ಪ ಹನಮಪ್ಪ ಬೀಡನಾಳ ಹೇಳಿದರು.