ಹುಬ್ಬಳ್ಳಿ:

ಹುಬ್ಬಳ್ಳಿ ಜಗ್ಗಲಗಿ ಹಬ್ಬ ಸಮಿತಿ ವತಿಯಿಂದ ಮಾ. 5ರಂದು ಹೋಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಮೂರು ಸಾವಿರಮಠದ ಆವರಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ. 30ಕ್ಕೂ ಹೆಚ್ಚು ಮಠಾಧೀಶರು, ನಾಗಾಸಾಧುಗಳು ಪಾಲ್ಗೊಳ್ಳಲಿದ್ದು, ಜಗ್ಗಲಗಿ ಕಲಾವಿದರು ಸೇರಿದಂತೆ 1500ಕ್ಕೂ ಅಧಿಕ ಕಲಾವಿದರು ಅಂದು ಹಬ್ಬದ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಆಯೋಜಕ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 14 ವರ್ಷದಿಂದ ಜಗ್ಗಲಗಿ ಹಬ್ಬ ಆಚರಿಸಲಾಗುತ್ತಿದೆ. ಹೋಳಿ ಹಬ್ಬ ಪ್ರೋತ್ಸಾಹಿಸಲು, ಹಿಂದೂ ಸಮಾಜ ಸಂಘಟಿಸಲು ಜಗ್ಗಲಗಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ‌. ಚರ್ಮ ವಾದ್ಯ ನುಡಿಸುವ ಕಲಾವಿದರ ತೊಡಗಿಸಿಕೊಳ್ಳಲಾಗುತ್ತದೆ ಎಂದರು.

ಜಗ್ಗಲಗಿ ಹಬ್ಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಲಿದ್ದು ಪಕ್ಷಾತೀತವಾಗಿ ಜನಪ್ರತಿನಿಧಿಗಳಿಗೆ ಆಹ್ವಾನಿಸಲಾಗಿದೆ. ಬಹುತೇಕ ಎಲ್ಲರೂ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ 30ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಹುಬ್ಬಳ್ಳಿ, ಧಾರವಾಡ, ವಿವಿಧ ಜಿಲ್ಲೆ, ರಾಜ್ಯಗಳಿಂದ 400ಕ್ಕೂ ಅಧಿಕ ಜಗ್ಗಲಗಿ ಕಲಾವಿದರು, ಮಹಾರಾಷ್ಟ್ರ ಇಚ್ಚಲಕರಂಜಿಯ ಜೀವಿಕಾ ಇವೆಂಟ್ಸ್ ತಂಡ 50 ಜನರ ತಂಡ, ಹುಬ್ಬಳ್ಳಿ ನ್ಯೂ ಆಲ್ ಮ್ಯೂಸಿಕಲ್‌ ಸ್ಟಾಪ್ ತಾಷಾರಾಮ್ ಡೋಲ್‌ ಕಮಂ ಹಾಗೂ ಸುಪರ್ ಕಿಂಗ್ ನಾಸಿಕ ಡೋಳ ತಂಡದ 40 ಜನ ಸದಸ್ಯರು ಭಾಗವಹಿಸಲಿದ್ದಾರೆ. ಉಡುಪಿ ಕಾಡು ಬೆಟ್ಟ ಪ್ರದೇಶದಿಂದ ಹುಲಿ ಕುಣಿತ, ಹನುಮಾನ, ನಂದಿ, ನಾಗಾಸಾಧುಗಳೊಂದಿಗೆ ಪರಮೇಶ್ವರ ನರಸಿಂಹ ಸೇರಿದಂತೆ 1 ಸಾವಿರ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.

ಮೆರವಣಿಗೆ:


ಮೂರುಸಾವಿರ ಮಠದಿಂದ ಮೆರವಣಿಗೆ ಆರಂಭವಾಗಿ ಎಸ್.ಟಿ. ಭಂಡಾರಿ ರಸ್ತೆ, ವಿಕ್ಟೋರಿಯಾ ರಸ್ತೆ, ಕೊಪ್ಪಿಕರ್ ರಸ್ತೆ, ಬಾನಿ ಓಣಿ, ಶಕ್ತಿ ರಸ್ತೆ, ಸ್ಟೇಷನ್ ರಸ್ತೆ, ಗಣೇಶಪೇಟ್ ವೃತ್ತ, ಮರಾಠಗಲ್ಲಿ, ಬ್ರಾಡ್‌ವೇ, ದುರ್ಗದಬೈಲ್, ಬೆಳಗಾವಿ ಗಲ್ಲಿ, ಪೆಂಡಾರ್ ಗಲ್ಲಿ, ತುಳಜಾಭವಾನಿ ವೃತ್ತದ ಮೂಲಕ ಮೂರುಸಾವಿರ ಮಠದ ತಲುಪಲಿದೆ ಎಂದು ಹೇಳಿದರು.

ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ, ದತ್ತುಮೂರ್ತಿ ಕುಲಕರ್ಣಿ, ಮಂಜುನಾಥ ಕಾಟಕರ, ಶಿವು ಮೆಣಸಿನಕಾಯಿ, ರವಿ ನಾಯಕ, ಸುಬ್ರಹ್ಮಣ್ಯ ಶಿರಕೋಳ ಇದ್ದರು.