‘ಜಾಗತಿಕ ನವೋದ್ಯಮದಲ್ಲಿ ರಾಜ್ಯಕ್ಕೆ ಟಾಪ್‌ 5 ಗುರಿ’

| Published : Nov 21 2025, 01:45 AM IST

‘ಜಾಗತಿಕ ನವೋದ್ಯಮದಲ್ಲಿ ರಾಜ್ಯಕ್ಕೆ ಟಾಪ್‌ 5 ಗುರಿ’
Share this Article
  • FB
  • TW
  • Linkdin
  • Email

ಸಾರಾಂಶ

ಡೀಪ್ ಟೆಕ್ನಾಲಜಿ ಕ್ಷೇತ್ರದ ನವೋದ್ಯಮಗಳಿಗೆ ನೆರವಾಗಲು ರಾಜ್ಯ ಸರ್ಕಾರ ಮತ್ತು ಸಾಹಸೋದ್ಯಮಿಗಳಿಂದ 400 ಕೋಟಿ ರು. ಅನ್ನು ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ವಿತರಿಸಲಾಗಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಡೀಪ್ ಟೆಕ್ನಾಲಜಿ ಕ್ಷೇತ್ರದ ನವೋದ್ಯಮಗಳಿಗೆ ನೆರವಾಗಲು ರಾಜ್ಯ ಸರ್ಕಾರ ಮತ್ತು ಸಾಹಸೋದ್ಯಮಿಗಳಿಂದ 400 ಕೋಟಿ ರು. ಅನ್ನು ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ವಿತರಿಸಲಾಗಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ನಗರದ ಬಿಐಇಸಿಯಲ್ಲಿ ಗುರುವಾರ ಮುಕ್ತಾಯಗೊಂಡ 3 ದಿನಗಳ ಬೆಂಗಳೂರು ಟೆಕ್ ಸಮ್ಮಿಟ್‌ನ ಸಮಾರೋಪದಲ್ಲಿ ಮಾತನಾಡಿದ ಅವರು, ಮುಂದಿನ 10 ವರ್ಷಗಳು ರಾಜ್ಯದ ಪಾಲಿಗೆ ವೈಜ್ಞಾನಿಕ ನಾವೀನ್ಯತೆ ಆಧರಿಸಿದ ತಂತ್ರಜ್ಞಾನಗಳಾದ ಅರ್ಟಿಫಿಷಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್, ಕ್ವಾಂಟಂ ಕಂಪ್ಯೂಟಿಂಗ್ ಮತ್ತು ಜೈವಿಕ ತಂತ್ರಜ್ಞಾನಗಳ ಯುಗವಾಗಿರಲಿದೆ. ಬೆಂಗಳೂರು ಈ ಕ್ಷೇತ್ರದಲ್ಲಿ ನಾಯಕನ ಸ್ಥಾನ ಹೊಂದಲಿದೆ ಎಂದರು.

ಕರ್ನಾಟಕಕ್ಕಷ್ಟೇ ಪ್ರಯೋಜನ ಅಲ್ಲ:

ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಹಾಗೂ ಮಾರುಕಟ್ಟೆಗಳನ್ನು ಸೃಷ್ಟಿಸುವಲ್ಲಿ ಡೀಪ್ ಟೆಕ್ ಕ್ಷೇತ್ರಗಳಲ್ಲಿನ ಆವಿಷ್ಕಾರಗಳನ್ನು, ಮಾರುಕಟ್ಟೆ ಅವಕಾಶಗಳ ಮಹತ್ವ ಮನದಟ್ಟು ಮಾಡಿಕೊಡುವಲ್ಲಿ ಶೃಂಗಸಭೆ ಗಮನಾರ್ಹ ಯಶಸ್ಸು ಸಾಧಿಸಿದೆ. ಡೀಪ್ ಟೆಕ್‌ನ ಪ್ರಯೋಜನ ಬರೀ ಕರ್ನಾಟಕಕ್ಕೆ, ಭಾರತಕ್ಕೆ ಸೀಮಿತವಾಗಿರದೆ ಇಡೀ ವಿಶ್ವಕ್ಕೆ ದೊರೆಯಲಿದೆ. ನವೋದ್ಯಮಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕರ್ನಾಟಕವು ಜಾಗತಿಕ ನವೋದ್ಯಮಗಳಲ್ಲಿ ಟಾಪ್ 5ರಲ್ಲಿ ಸ್ಥಾನ ಗಳಿಸುವ ಮಹತ್ವಾಕಾಂಕ್ಷೆ ಇದೆ ಎಂದು ಹೇಳಿದರು.

ಮಹಿಳಾ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿ ರಿಚಾ ಘೋಷ್ ಮಾತನಾಡಿ, ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ ಗೆದ್ದ ನಂತರ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್‌ ಕಡೆ ಆಕರ್ಷಿತರಾಗುತ್ತಿದ್ದಾರೆ. ಹೆಣ್ಣುಮಕ್ಕಳು ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು.

ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಾತನಾಡಿ, ಕ್ರೀಡಾಂಗಣದಲ್ಲಿ ಒತ್ತಡವನ್ನು ಸಮಚಿತ್ತದಿಂದ ಎದುರಿಸಿದರೆ ಸೋಲನ್ನೂ ಗೆಲುವಾಗಿ ಬದಲಾಯಿಸಬಹುದು. ಕ್ರೀಡೆಯಲ್ಲಿನ ಸೋಲು ಹಲವಾರು ಪಾಠ ಕಲಿಸುತ್ತದೆ. ಯಾವುದೇ ಕ್ಷೇತ್ರದಲ್ಲಿರಲಿ ಸೋಲಿನಿಂದ ಧೃತಿಗೆಡಬಾರದು ಎಂದು ಕಿವಿಮಾತು ಹೇಳಿದರು.

ಜೆಫ್ಟೊ ಸಹ ಸ್ಥಾಪಕ ಕೈವಲ್ಲ ವೋಹ್ರಾ, ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳ ಮತ್ತಿತರರು ಉಪಸ್ಥಿತರಿದ್ದರು.