ಚಿಕ್ಕಮಗಳೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಹೆಂಚುಗಳು ಸುಂಟರಗಾಳಿಗೆ ಸಿಲಿಕಿ ಕೆಳಗೆ ಬಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಗುರುವಾರ ಮಧ್ಯಾಹ್ನ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ.ಶಾಲೆಯ ವಿದ್ಯಾರ್ಥಿಗಳು ಎಂದಿನಂತೆ ಗುರುವಾರ ಮಧ್ಯಾಹ್ನ ಊಟಕ್ಕೆ ಶಾಲೆ ಹಾಲ್‌ನಲ್ಲಿ ಕುಳಿತು ಊಟ ಮಾಡಿದ್ದಾರೆ. ಕೈ ತೊಳೆಯುವುದಕ್ಕೆ ಎಲ್ಲ ವಿದ್ಯಾರ್ಥಿಗಳು ಎದ್ದು ಹೊರಗೆ ಹೋಗಿದ್ದಾರೆ.
ಆ ಸಮಯಕ್ಕೆ ಸರಿಯಾಗಿ (ಮಧ್ಯಾಹ್ನ 1.15) ಸುಂಟರಗಾಳಿ ಎದ್ದಿದ್ದು, ಭಾರೀ ರಭಸದಿಂದ ಬೀಸಿದ ಗಾಳಿ ಶಾಲೆಯ ಮೂರು ಕೊಠಡಿಗಳ ಸುಮಾರು 800ಕ್ಕೂ ಅಧಿಕ ಹೆಂಚುಗಳು ಚೆಲ್ಲಾಪಿಲ್ಲಿ ಆಗಿ ಕೆಳೆಗೆ ಬಿದ್ದು ಪುಡಿಪುಡಿ ಆಗಿವೆ. ಈ ವೇಳೆ ಒರ್ವ ವಿದ್ಯಾರ್ಥಿಗೆ ಮಾತ್ರ ಸಣ್ಣ ತರಚಿದ ಗಾಯವಾಗಿದೆ. ಉಳಿದಂತೆ ಯಾವುದೇ ಅನಾಹುತ ಉಂಟಾಗಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ ಮಾಹಿತಿ ನೀಡಿದ್ದಾರೆ.ಘಟನೆ ಕುರಿತು ತಕ್ಷಣ ಡಿಡಿಪಿಐ, ತಾಲೂಕು ತಹಸೀಲ್ದಾರ್, ಶಾಸಕರು, ಅಪರ ಜಿಲ್ಲಾಧಿಕಾರಿ ಸೇರಿದಂತೆ ಮೊದಲಾದವರಿಗೆ ಮಾಹಿತಿ ನೀಡಲಾಗಿದೆ. ವಿಪತ್ತು ಪರಿಹಾರ ನಿಧಿಯಡಿ ಶಾಲೆ ಹೆಂಚು ಅಳವಡಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದ್ದಾರೆ ಎಂದು ರುದ್ರಪ್ಪ ತಿಳಿಸಿದ್ದಾರೆ.
---ಬಾಕ್ಸ್---
ನಿಮಿಷದಲ್ಲಿ ತಪ್ಪಿದ ಭಾರೀ ಅನಾಹುತ
ಸುಂಟರಗಾಳಿ ಒಂದೆರಡು ನಿಮಿಷ ಮೊದಲು ಸೃಷ್ಟಿಯಾಗಿದ್ದರೆ, ಊಟಕ್ಕೆ ಕುಳಿತ ವಿದ್ಯಾರ್ಥಿಗಳ ಪೈಕಿ ಸುಮಾರು 40 ರಿಂದ 50 ಮಕ್ಕಳಿಗೆ ತೊಂದರೆ ಉಂಟಾಗುತ್ತಿತ್ತು. ಆದರೆ, ಮಕ್ಕಳು ಊಟ ಮಾಡಿ ಕೈತೊಳೆಯುವುದಕ್ಕೆ ಹೋದ ಸಮಯಕ್ಕೆ ಸುಂಟರ ಗಾಳಿ ಎದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಸುಂಟರ ಗಾಳಿ ರಭಸಕ್ಕೆ ನೆಲದ ಮೇಲಿದ್ದ ಸಿಮೆಂಟ್ ಕಲ್ಲಿನ ಚೇರು ಅಲ್ಲಾಡಿದೆ ಎಂದು ಶಾಲಾ ಶಿಕ್ಷಕರು ವಿವರಿಸಿದ್ದಾರೆ.