ಕುಂದಾಪುರ : ತಾಲೂಕು ವ್ಯಾಪ್ತಿಯಲ್ಲಿ ಸುಂಟರಗಾಳಿ : ಮರ ಬಿದ್ದ ಪರಿಣಾಮ ಮಹಿಳೆ, ಹಸು ಸಾವು

| Published : Aug 26 2024, 01:43 AM IST / Updated: Aug 26 2024, 07:21 AM IST

dead boady
ಕುಂದಾಪುರ : ತಾಲೂಕು ವ್ಯಾಪ್ತಿಯಲ್ಲಿ ಸುಂಟರಗಾಳಿ : ಮರ ಬಿದ್ದ ಪರಿಣಾಮ ಮಹಿಳೆ, ಹಸು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ವೇಳೆ ಬೀಸಿದ ಸುಂಟರಗಾಳಿಗೆ ಮರ ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ಕಟ್ಟಿದ್ದ ದನ ಹಾಗೂ ಅದನ್ನು ಬಿಡಿಸಲು ಹೋಗಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಕೆಂಚನೂರು ಗ್ರಾಮದಲ್ಲಿ ನಡೆದಿದೆ.

  ಕುಂದಾಪುರ  : ತಾಲೂಕು ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ವೇಳೆ ಬೀಸಿದ ಸುಂಟರಗಾಳಿಗೆ ಮರ ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ಕಟ್ಟಿದ್ದ ದನ ಹಾಗೂ ಅದನ್ನು ಬಿಡಿಸಲು ಹೋಗಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಕೆಂಚನೂರು ಗ್ರಾಮದಲ್ಲಿ ನಡೆದಿದೆ. ಕೆಂಚನೂರು ಗ್ರಾಮದ ನೀರಿನ ಟ್ಯಾಂಕ್ ಬಳಿಯ ಮಲ್ಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರಿ ಎಂಬವರ ಪತ್ನಿ ಸುಜಾತಾ ಆಚಾರ್ತಿ (53) ಮೃತ ದುರ್ದೈವಿ.

ಸುಜಾತ ಭಾನುವಾರ ಸಂಜೆ ಭಾರಿ ಸುಂಟರಗಾಳಿ ಬೀಸಿದ ಕಾರಣ ಮನೆ ಸಮೀಪದ ರಸ್ತೆ ಬದಿಯಲ್ಲಿ ಮೇಯಲು ಕಟ್ಟಿದ್ದ ದನವನ್ನು ಬಿಡಿಸಿ ಕೊಟ್ಟಿಗೆಗೆ ತರಲೆಂದು ಹೋಗಿದ್ದರು. ಈ ವೇಳೆ ಮರವೊಂದು ದನ ಹಾಗೂ ಸುಜಾತ ಆಚಾರ್ತಿ ಅವರ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮದಿಂದ ದನ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಗಂಭೀರವಾಗಿ ಗಾಯಗೊಂಡಿದ್ದ ಸುಜಾತಾ ಅವರನ್ನು ತಕ್ಷಣ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ರಕ್ಷಣೆಗೆ ಯುವಕರ ಹರಸಾಹಸ:

ಮರದ ಅಡಿಭಾಗದಲ್ಲಿ ಸಿಲುಕಿ ಸಾವನ್ನಪ್ಪಿರುವ ದನವನ್ನು ಸ್ಥಳೀಯ ಯುವಕರ ತಂಡ ಹರಸಾಹಸಪಟ್ಟು ಹೊರತೆಗೆದಿದ್ದು ಮಣ್ಣು ಮಾಡುವಲ್ಲಿ ಸಹಕರಿಸಿದರು. ಮರದಡಿ ಸಿಲುಕಿದ್ದ ಸುಜಾತ ಅವರನ್ನು ಹೊರತೆಗೆಯಲು ಸರಿಸುಮಾರು 15 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದರೂ ಸಾಧ್ಯವಾಗಲಿಲ್ಲ. ಬಳಿಕ ಜೆಸಿಬಿ ಮೂಲಕ ಮರ ತೆರವುಗೊಳಿಸಿ ಗಾಯಾಳು ಸುಜಾತ ಅವರನ್ನು ಆಸ್ಪತ್ರೆಗೆ ಸಾಗಿಸುವ ಯತ್ನ‌ ನಡೆಸಲಾಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಸ್ಥಳೀಯ ಯುವಕರಾದ ಅನಿಲ್, ನವೀನ, ಸುಮಂತ್ ನೆಂಪು, ನಿತಿನ್, ಪ್ರವೀಣ, ಮಂಜುನಾಥ ಮತ್ತು ಅಮಿತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ದುರಂತದಲ್ಲಿ ಸಾವನ್ನಪ್ಪಿರುವ ಸುಜಾತಾ ಆಚಾರ್ಯ ಅವರ ಪತಿ ಅಣ್ಣಪ್ಪಯ್ಯ ಆಚಾರಿ, ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.