ಧಾರಾಕಾರ ಮಳೆ: ಗಿರಿಯಪ್ಪ ಮನೆ ತಗ್ಗು ಪ್ರದೇಶ ಜಲಾವೃತ

| Published : Aug 15 2024, 01:49 AM IST

ಸಾರಾಂಶ

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಭಾರಿ ಗುಡುಗು ಸಿಡಿಲು ಸಹಿತ ಒಂದು ಗಂಟೆ ಕಾಲ ಮಳೆ ಸುರಿದಿದ್ದು, ಗಿರಿಯಪ್ಪ ಮನೆಯ ತಗ್ಗು ಪ್ರದೇಶದ ನಿವಾಸಿಗಳ ಮನೆಗಳಿಗೆ ಮಳೆಯ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಭಾರಿ ಗುಡುಗು ಸಿಡಿಲು ಸಹಿತ ಒಂದು ಗಂಟೆ ಕಾಲ ಮಳೆ ಸುರಿದಿದ್ದು, ಗಿರಿಯಪ್ಪ ಮನೆಯ ತಗ್ಗು ಪ್ರದೇಶದ ನಿವಾಸಿಗಳ ಮನೆಗಳಿಗೆ ಮಳೆಯ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.

ಕುಶಾಲನಗರದಲ್ಲಿ ಕೆಲವು ಬಡಾವಣೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿಂದಾಗ್ಗೆ ಮಳೆಯಿಂದಾಗಿ ಕೃತಕ ಪ್ರವಾಹ ಸಮಸ್ಯೆ ಒಂದೆಡೆಯಾದರೆ, ಮಡಿಕೇರಿ ಭಾಗದಲ್ಲಿ ಕೆಲವು ಬಡಾವಣೆಗಳಲ್ಲಿ ಬರೆ ಕುಸಿಯುವ ಅತಂಕ ಕಳೆದ 6 ವರ್ಷಗಳಿಂದ ಕಾಡುತ್ತಿದೆ.

ಸುಂಟಿಕೊಪ್ಪ ಈ ಮಾದರಿಯ ಗಂಭೀರ ಸಮಸ್ಯೆಗಳಿಂದ ಹೊರತಾಗಿತ್ತು. ಇತ್ತೀಚಿನ ವರ್ಷಗಳಿಂದ ಸುಂಟಿಕೊಪ್ಪವೂ ಇಂಥದ್ದೆ ಸಮಸ್ಯೆಗೆ ಸಿಲುಕಿಕೊಳ್ಳುವ ಪ್ರಕರಣ ಕಂಡುಬರುತ್ತಿದೆ.

ಕಳೆದ 2 ತಿಂಗಳುಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಯಾವುದೇ ದೊಡ್ಡ ಅವಾಂತರ ಸೃಷ್ಟಿಸಿರಲಿಲ್ಲ. ಮಂಗಳವಾರ ಸಂಜೆ 7 ಗಂಟೆ ವೇಳೆಗೆ ಏಕಾಏಕಿ ಭಾರಿ ಗುಡುಗು ಸಿಡಿಲಿನೊಂದಿಗೆ ಮಳೆ ಧಾರಾಕಾರ ಸುರಿಯಿತು. ಮಳೆಯ ರಭಸಕ್ಕೆ ಸುಂಟಿಕೊಪ್ಪದಿಂದ ಗದ್ದೆಹಳ್ಳಕ್ಕಾಗಿ ಹರಿಯುವ ತೋಡು ನೀರು ತುಂಬಿಕೊಂಡ ಪರಿಣಾಮ ಗದ್ದೆಹಳ್ಳ ಗಿರಿಯಪ್ಪ ಮನೆ ತಗ್ಗು ಪ್ರದೇಶದಲ್ಲಿ ನಿರ್ಮಿಸಲಾಗಿರುವ 10-12 ಮನೆಗಳಿಗೆ ಕೊಳಚೆ ನೀರು ನುಗ್ಗಿತು.

ಪರಿಣಾಮ ಮನೆಯ ಗೃಹೋಪಯೊಗಿ ವಸ್ತುಗಳು ಹಾಗೂ ಪೀಠೋಪಕರಣಗಳನ್ನು ಮಳೆಯ ನೀರಿನಿಂದ ರಕ್ಷಿಸಲು ರಾತ್ರಿಯಿಡಿ ಹರಸಾಹಸ ಪಡುವಂತಾಯಿತು.

ಈ ಭಾಗದಲ್ಲಿ ಬಡ ಕೂಲಿ ಕಾರ್ಮಿಕರು ಒಂದು ಸೂರು ನಿರ್ಮಿಸುವ ಕನಸು ಹೊತ್ತುಕೊಂಡು ಬ್ಯಾಂಕ್ ಸೇರಿದಂತೆ ಇತರೆ ಮೂಲಗಳಿಂದ ಹಣವನ್ನು ಸಾಲ ಪಡೆದು ಸ್ವಂತ ಸೂರು ನಿರ್ಮಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈ ಭಾಗದ ಗದ್ದೆಹಳ್ಳ ಗಿರಿಯಪ್ಪ ಮನೆ ಭಾಗದಲ್ಲಿ ಹರಿಯುತ್ತಿರುವ ತೋಡಿನ ನೀರು ಮಳೆ ಬರುವಾಗ ತೊರೆಯಾಗಿ ಹರಿಯುತ್ತದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುತ್ತಿದೆ.

ಈ ಕುರಿತು ಸಂಬಂಧಿಸಿದ ಇಲಾಖೆಯವರಿಗೆ ದೂರು ನೀಡಿದರೂ ಅಧಿಕಾರಿಗಳು ಭೇಟಿ ಮಾತ್ರ ನೀಡುತ್ತಿದ್ದಾರೆ, ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಇದರಿಂದ ಯಾವಾಗ ನೀರು ಮನೆಗಳಿಗೆ ನುಗ್ಗುವುದೋ ಎಂಬ ಆತಂಕದಲ್ಲೇ ದಿನ ದೂಡುವಂತಾಗಿದೆ ಎನ್ನುತ್ತಾರೆ ಈ ಭಾಗದ ನಿವಾಸಿಗಳು.

ಸ್ಥಳಕ್ಕೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಪಂಚಾಯಿತಿ ಸದಸ್ಯರಾದ ಪಿ.ಎಫ್.ಸಬಾಸ್ಟೀನ್ ಭೇಟಿ ನೀಡಿ ಅವಲೋಕಿಸಿದರು.

..........................

ಈ ಭಾಗದಲ್ಲಿ ಹರಿಯುವ ತೋಡು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ಭಾಗದ ನಿವಾಸಿಗಳು ಮಳೆಗಾಲದಲ್ಲಿ ನಿತ್ಯ ಸಂಕಷ್ಟ ಎದುರಿಸುವಂತಾಗಿದೆ ಸಂಬಂಧಿಸಿದ ಇಲಾಖೆ ವೈಜ್ಞಾನಿಕ ಕಾಮಗಾರಿ ನಿರ್ವಹಿಸಲು ಕೂಡಲೇ ಮುಂದಾಗಬೇಕು. ಮುಂದಿನ ದಿಗಳಲ್ಲಿ ಅನಾಹುತ ಹಾಗೂ ಪ್ರಾಣಹಾನಿಗಳನ್ನು ಸಂಭವಿಸುವ ಮೊದಲೇ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕು. ಸಂಬಂಧಿಸಿದ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಸಮಸ್ಯೆ ಗಂಭೀರತೆಯ ಬಗ್ಗೆ ಪತ್ರ ಬರೆಯಲಾಗಿದೆ.

-ಪಿ.ಆರ್‌.ಸುನಿಲ್‌ ಕುಮಾರ್‌, ಗ್ರಾ.ಪಂ. ಅಧ್ಯಕ್ಷ.