ಸಾರಾಂಶ
‘ನನ್ನ ಏಳಿಗೆಗೆ ನಾನೇ ಶಿಲ್ಪಿ’ ವಿವೇಕ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಬದುಕಿನ ಪ್ರತಿಕ್ಷಣವೂ ನಮ್ಮ ಭವಿಷ್ಯತ್ತನ್ನು ನಿರ್ಧಾರ ಮಾಡುತ್ತಾ ಹೋಗುತ್ತದೆ. ಯೋಚನಾ ಶಕ್ತಿಯು ನಮ್ಮ ಜ್ಞಾನದ ವಿಸ್ತಾರವನ್ನು ತಿಳಿಸುತ್ತದೆ. ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಅವನ ಭವಿಷ್ಯವನ್ನು ರೂಪಿಸುವಲ್ಲಿ ಕಾರ್ಯಮಗ್ನನಾಗಬೇಕಿದೆ. ಕಲಿಕೆ ಎಂಬುದು ವಿದ್ಯಾರ್ಥಿಗಳಿಗೆ ಸೀಮಿತವಾಗಬೇಕಿಲ್ಲ, ಜೀವನಪರ್ಯಂತ ನಿರಂತರವಾದ ಜ್ಞಾನಾರ್ಜನೆಗೆ ಅವಕಾಶವಿದೆ ಎಂದು ಮೈಸೂರು ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಸ್ವಾಮಿ ಮಹಾಮೇಧಾನಂದಜಿ ಹೇಳಿದರು.ಅವರು ರಾಮಕೃಷ್ಣ ಮಿಷನ್ ಮಂಗಳಾದೇವಿ, ಮಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳಗಂಗೋತ್ರಿ ಆಶ್ರಯದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಸಹಯೋಗದೊಂದಿಗೆ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಬುಧವಾರ ನಡೆದ ‘ನನ್ನ ಏಳಿಗೆಗೆ ನಾನೇ ಶಿಲ್ಪಿ’ ವಿವೇಕ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸತ್ಯದ ಪರಿಪಾಲನೆ, ಆತ್ಮಸಂಯಮ, ಪರೋಪಕಾರ ಈ ಮೂರು ಆದರ್ಶಗಳನ್ನು ನಾವು ಪರಿಪಾಲಿಸಿದಲ್ಲಿ ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳಾಗುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಸತೀಶ್ ರಾವ್ ಮಾತನಾಡಿ ಭಾರತೀಯ ಶಿಕ್ಷಣದ ಮೂಲತತ್ವ ಸಂಸ್ಕಾರದೊಂದಿಗೆ ಶಿಕ್ಷಣ ನೀಡುವುದಾಗಿದೆ. ಭಾರತೀಯ ಸನಾತನ ಸಂಸ್ಕೃತಿ,ಆಧ್ಯಾತ್ಮಿಕತೆ ಇವುಗಳಿಗೆ ಪೋಷಣೆಯನ್ನು ಒದಗಿಸುತ್ತದೆ. ಸ್ವಾಮಿ ವಿವೇಕಾನಂದರಂತಹ ಧೀಮಂತ ವ್ಯಕ್ತಿಯ ತತ್ವ ಸಿದ್ದಾಂತಗಳನ್ನು ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ನಿವೃತ್ತ ಯೋಧರಾದ ಬೆಳ್ಳಾಲ ಗೋಪಿನಾಥ್ ರಾವ್, ಮಂಗಳೂರು ವಿಶ್ವವಿದ್ಯಾಲಯ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳಗಂಗೋತ್ರಿಯ ಸಂಯೋಜಕ ಡಾ. ಚಂದ್ರು ಹೆಗ್ಡೆ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ., ಸದಸ್ಯ ಡಾ. ಕೆ.ಎನ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.ಕಾಲೇಜಿನ ಶೈಕ್ಷಣಿಕ ಸಂಯೋಜಕ ಶ್ರೀವತ್ಸ ಸ್ವಾಗತಿಸಿದರು. ಉಪನ್ಯಾಸಕಿ ಶೀತಲಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.