ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮಳೆ ಬಂದಾಗ ಧರೆಗುರುಳುವ ಮರ ಹಾಗೂ ಮರದ ರೆಂಬೆ-ಕೊಂಬೆ ತೆರವುಗೊಳಿಸಲು ಬಿಬಿಎಂಪಿಯ ಅರಣ್ಯ ವಿಭಾಗವು ದಿನಕ್ಕೆ ₹3.5 ಲಕ್ಷ ನಂತೆ ವರ್ಷಕ್ಕೆ ಬರೋಬ್ಬರಿ ₹13 ಕೋಟಿ ವೆಚ್ಚ ಮಾಡುತ್ತಿದೆ.
ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದ ಮಳೆ ಬಂದರೂ ನೂರಾರು ಸಂಖ್ಯೆಯ ಮರ ಹಾಗೂ ಮರದ ರೆಂಬೆ-ಕೊಂಬೆಗಳು ಧರೆಗುರುಳುವ ವರದಿಯಾಗಲಿವೆ. ಬಿದ್ದ ಮರ ಮತ್ತು ಮರದ ಕೊಂಬೆಗಳನ್ನು ತ್ವರಿತವಾಗಿ ತೆರವುಗೊಳಿಸಬೇಕಾಗಲಿದೆ. ಅದಕ್ಕಾಗಿ ಬಿಬಿಎಂಪಿಯ ಅರಣ್ಯ ವಿಭಾಗವು ವಿಧಾನಸಭಾ ಕ್ಷೇತ್ರವಾರು ತಲಾ ಒಂದು ಹಾಗೂ ಹೆಚ್ಚುವರಿಯಾಗಿ ಎರಡು ತಂಡ ಸೇರಿದಂತೆ ಒಟ್ಟು 30 ಮರಗಳ ವ್ಯವಸ್ಥಿತ ನಿರ್ವಹಣಾ ತಂಡಗಳನ್ನು ಗುತ್ತಿಗೆ ಮೂಲಕ ಪಡೆದುಕೊಂಡಿದೆ.
ಇಷ್ಟೊಂದು ತಂಡಗಳನ್ನು ನಿಯೋಜನೆ ಮಾಡಿಕೊಂಡರೂ ನಗರದ ಹಲವು ಪಾದಚಾರಿ ಮಾರ್ಗ ಹಾಗೂ ರಸ್ತೆ ಬದಿಯಲ್ಲಿ ಬಿದ್ದ ಮರಗಳ ತೆರವು ಕಾರ್ಯ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ತಿಂಗಳ ಹಿಂದೆ ಬಿದ್ದ ಮರದ ರೆಂಬೆ-ಕೊಂಬೆಗಳು ಈಗಲೂ ಅದೇ ಸ್ಥಳದಲ್ಲಿ ಬಿದ್ದಿರುವ ದೃಶ್ಯಗಳನ್ನು ಹಲವು ಕಡೆ ಕಾಣಬಹುದಾಗಿದೆ. ಹೀಗೆ, ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ.
ದಿನಕ್ಕೆ ತಲಾ ₹11,964 ವೆಚ್ಚ:
ಬಿಬಿಎಂಪಿಯ ಆರಣ್ಯ ವಿಭಾಗವು ಮರ ತೆರವುಗೊಳಿಸುವ ಒಂದು ತಂಡಕ್ಕೆ ದಿನಕ್ಕೆಬರೋಬ್ಬರಿ ₹11,964 ಪಾವತಿ ಮಾಡಲಿದೆ. ಅದರಂತೆ 30 ತಂಡಕ್ಕೆ ದಿನಕ್ಕೆ ₹3,58,920 ವೆಚ್ಚ ಮಾಡಲಾಗುತ್ತಿದೆ. ಒಂದು ವರ್ಷಕ್ಕೆ ಬರೋಬ್ಬರಿ ₹12,92 ಕೋಟಿ ವೆಚ್ಚವಾಗುತ್ತಿದೆ. ನಿಯೋಜನೆಗೊಂಡ ತಂಡಗಳಿಗೆ ವರ್ಷದ 365 ದಿನವೂ ಕೆಲಸ ಇರುವುದಿಲ್ಲ. ಆದರೂ ದಿನದ ಲೆಕ್ಕದಲ್ಲಿ ₹11,964 ಪ್ರತಿಯೊಂದು ತಂಡಕ್ಕೂ ಪಾವತಿ ಮಾಡಲಾಗುತ್ತಿದೆ.
ಸಸಿ ನೆಡುವ ಕಾರ್ಯಕ್ಕಿಂತ ಅಧಿಕ ವೆಚ್ಚ:
ಬಿಬಿಎಂಪಿಯ ಅರಣ್ಯ ವಿಭಾಗವು ಪ್ರಸಕ್ತ 2024-25ನೇ ಸಾಲಿನಲ್ಲಿ 1.5 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವುದಕ್ಕೆ ಯೋಜನೆ ರೂಪಿಸಿದೆ. ಅದಕ್ಕಾಗಿ ₹12 ಕೋಟಿ ಅಂದಾಜು ಪಟ್ಟಿ ಸಿದ್ಧಪಡಿಸಿದೆ. ಆದರೆ, ಅದಕ್ಕಿಂತ ಹೆಚ್ಚು ಹಣವನ್ನು ಬಿದ್ದ ಮರ ಹಾಗೂ ಮರದ ರೆಂಬೆ ಕೊಂಬೆ ತೆರವುಗೊಳಿಸುವುದಕ್ಕೆ ದುಬಾರಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಿ ಬಿದ್ದ ಮರ ತೆರವುಗೊಳಿಸುವುದರೊಂದಿಗೆ ಇತರೆ ಅವಧಿಯಲ್ಲಿ ಸಾರ್ವಜನಿಕರಿಗೆ ಅಪಾಯ ಉಂಟು ಮಾಡುವ ಮರ ಹಾಗೂ ಮರದ ರೆಂಬೆಕೊಂಬೆ ತೆರವುಗೊಳಿಸುವುದಕ್ಕೆ ಈ ತಂಡಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಕೌಶಲ್ಯ ಇರುವ ಸಿಬ್ಬಂದಿ, ಉಪಕರಣ ಅಗತ್ಯವಿದೆ. ಅತ್ಯಂತ ಅಪಾಯದ ಸ್ಥಿತಿಯಲ್ಲಿ ಕಾರ್ಯವಹಿಸುವುದರಿಂದ ₹11,964 ದಿನಕ್ಕೆ ಒಂದು ತಂಡಕ್ಕೆ ಪಾವತಿಸಲಾಗುತ್ತಿದೆ.
-ಬಿಎಲ್‌ಜಿ ಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ ಅರಣ್ಯ ವಿಭಾಗ.ತಂಡ ಹೇಗಿರಲಿದೆ?
ಮರಗಳ ವ್ಯವಸ್ಥಿತ ನಿರ್ವಹಣಾ ತಂಡದಲ್ಲಿ ನುರಿತ ಮೇಲ್ವಿಚಾರಕ, ಮೂವರು ಮರ ಕತ್ತರಿಸುವವರು, ಮೂವರು ಸಹಾಯಕರು, ತೆರವುಗೊಳಿಸಿದ ಮರ ಸಾಗಿರುವುದಕ್ಕೆ ವಾಹನ, ವಾಹನ ಚಾಲಕ, ಮರ ತೆರವುಗೊಳಿಸುವುದಕ್ಕೆ ಬೇಕಾದ ಸಾಧನ ಸಲಕರಣೆಗಳು ಇರಲಿವೆ.
ಈ ಬಾರಿ 1,221 ಮರ ಧರೆಗೆ
ನಗರದಲ್ಲಿ ಮೇ ತಿಂಗಳಿನಿಂದ ಈವರೆಗೆ ನಗರದಲ್ಲಿ ಬರೋಬ್ಬರಿ 1,221 ಮರ ಸಂಪೂರ್ಣವಾಗಿ ಧರೆಗುರುಳಿವೆ. ಇದೇ ಅವಧಿಯಲ್ಲಿ 3286 ಮರದ ರೆಂಬೆ-ಕೊಂಬೆ ಧರೆಗುರುಳಿವೆ. ಈ ಪೈಕಿ ಮೇ ಮತ್ತು ಜೂನ್ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯ ಮರ ಹಾಗೂ ಮರದ ರೆಂಬೆ-ಕೊಂಬೆ ಬಿದ್ದಿವೆ.