ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಯಶಸ್ವಿಗಾಗಿ ಸಿಂದಗಿ ಅಂಚೆ ವಿಭಾಗವು ತ್ರಿವರ್ಣ ಧ್ವಜದ ಕುರಿತು ಜನಜಾಗೃತಿ ಅಭಿಯಾನಕ್ಕೆ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಯಶಸ್ವಿಗಾಗಿ ಸಿಂದಗಿ ಅಂಚೆ ವಿಭಾಗವು ತ್ರಿವರ್ಣ ಧ್ವಜದ ಕುರಿತು ಜನಜಾಗೃತಿ ಅಭಿಯಾನಕ್ಕೆ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಚಾಲನೆ ನೀಡಿದರು.ಮತಕ್ಷೇತ್ರದ ಕುದುರಿಸಾಲವಾಡಗಿ ಗ್ರಾಮದಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರ್ದೇಶನದಂತೆ 78ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಆ.13 ರಿಂದ 15 ವರೆಗೆ ಹರ್ ಗರ್ ತಿರಂಗಾ ಅಭಿಯಾನ ರಾಷ್ಟ್ರದ್ದುದ್ದಕ್ಕೂ ಹಮ್ಮಿಕೊಳ್ಳಲಾಗಿದೆ. ಹರ್ ಘರ್ ತಿರಂಗಾ ಅಭಿಯಾನ ಕುರಿತು ಈ ಮೂರು ದಿನಗಳ ಕಾಲ ಕ್ಷೇತ್ರದ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕು ಎಂದು ಮನವಿ ಮಾಡಿದರು.ಸಿಂದಗಿ ಅಂಚೆ ನಿರೀಕ್ಷಕ ಮಹಾಂತೇಶ ಕುರ್ಲೆ ಮಾತನಾಡಿ, ಕಳೆದ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಭಾರತೀಯ ಅಂಚೆ ಇಲಾಖೆಯ ಪಾತ್ರ ಬಹಳ ಮಹತ್ತರವಾಗಿತ್ತು. ಅದೇ ರೀತಿ ಈ ಬಾರಿಯೂ ಸ್ವಾತಂತ್ರ್ಯೋತ್ಸವವನ್ನು ಮೂರು ದಿನಗಳ ಕಾಲ ವಿಜೃಂಭಣೆ ಆಚರಿಸಲು ಇಲಾಖೆಗೆ ಸೂಚನೆ ಬಂದಿದೆ. ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಈಗಾಗಲೇ ಯಶಸ್ವಿಯಾಗಿ ಮಾಡಲಾಗುತ್ತಿದೆ. ಇಂದು ಶಾಸಕರಿಗೆ ಧ್ವಜ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂಚೆ ಮೇಲ್ವಿಚಾರಕರಾದ ಸದ್ದಾಮ ಆಲಗೂರ, ಪ್ರವೀಣ್ ಕುಲಕರ್ಣಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.