ಕನ್ನಡಪ್ರಭ ವಾರ್ತೆ ಬೈಲಹೊಂಗಲ

ನಗರ ಸೇರಿದಂತೆ ತಾಲೂಕಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ಸುಮಾರು ಎರಡು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ಹಲವು ದಿನಗಳ ಬಿಸಿಲಿನ ಧಗೆಯಿಂದ ಬಸವಳಿದಿದ್ದ ಜನರು ಸೋಮವಾರ ಸಂಜೆ ಸುರಿದ ಮಳೆಯಿಂದ ನಿರಾಳರಾಗಿದ್ದಾರೆ. ಏಕಾಏಕಿ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಆರಂಭವಾದ ಮಳೆ ಕೆಲಕಾಲ ಭಾರೀ ಪ್ರಮಾಣದಲ್ಲಿ ಸುರಿಯಿತು. ಪರಿಣಾಮ ರಸ್ತೆಗಳು ಜಲಾವೃತವಾಗಿ ವಾಹನಗಳ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜೋರಾದ ಮಳೆಯಿಂದ ನಗರದ ಚರಂಡಿ ಹಾಗೂ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಕೆಲ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಇನ್ನು, ಮಳೆ ಗಾಳಿಯಿಂದಾಗಿ ಕೆಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ನಗರದ ಮುರಕೀಭಾವಿ ರಸ್ತೆಯಲ್ಲಿ ಮರ ಹಾಗೂ ವಿದ್ಯುತ್ ಕಂಬ ಧರೆಗುರಳಿವೆ. ಇದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಯಾವುದೇ ಅಪಾಯ ಸಂಭವಿಸಿದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹೊಸೂರ ರಸ್ತೆಯ ಪೊಲೀಸ್ ಠಾಣೆ ಸಮೀಪದ ರಸ್ತೆ ಜಲಾವೃತಗೊಂಡು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ ಮಾರ್ಗದರ್ಶನದಲ್ಲಿ ನಗರಸಭೆ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಚರಂಡಿಗಳಲ್ಲಿ ಸಿಲುಕಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿದರು. ಮಳೆಗೆ ರೈತರು ಸಂತಸ ವ್ಯಕ್ತಪಡಿಸಿದ್ದು, ಮುಂಗಾರು ಪೂರ್ವ ಹಂತದಲ್ಲಿ ಸುರಿದ ಮಳೆ ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.