ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಕಾರಿಗೆ ಮುತ್ತಿಗೆ

| Published : Jul 06 2025, 01:48 AM IST

ಸಾರಾಂಶ

ಅಂಬಿಗ ಸಮುದಾಯ ಮತ್ತು ಇತರೆ ಸಮುದಾಯದ ಜನರ ನಡುವೆ ವಾಗ್ವಾದ ನಡೆಯಿತು. ಆಗ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆ ಉಂಟಾಗುವುದನ್ನು ತಪ್ಪಿಸಿ ಪರಿಸ್ಥಿತಿ ಹತೋಟಿಗೆ ತಂದರು. ಇದರಿಂದಾಗಿ ಸಚಿವರು ಐಕ್ಯಮಂಟಪ ವೀಕ್ಷಣೆ ಮಾಡದೆ ಅಲ್ಲಿಂದ ತೆರಳಿದರು.

ರಾಣಿಬೆನ್ನೂರು: ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪದ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮದ ಕೆಲ ಸಮುದಾಯಗಳ ಮುಖಂಡರು ಕಾರು ತಡೆದು ಘೇರಾವ್‌ ಹಾಕಿದ ಘಟನೆ ಶುಕ್ರವಾರ ರಾತ್ರಿ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ನಡೆದಿದೆ.ಸಚಿವ ಎಚ್.ಕೆ. ಪಾಟೀಲ ಅವರು ಜು. 4ರಂದು ತಾಲೂಕಿನ ವಿವಿಧ ಪ್ರವಾಸಯೋಗ್ಯ ಸ್ಥಳಗಳಿಗೆ ಭೇಟಿ ನೀಡಿದ್ದರು. ಅದರಂತೆ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಮುಕ್ತೇಶ್ವರ ದೇವಸ್ಥಾನ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪ ವೀಕ್ಷಣೆಗೆ ಸಂಜೆ 5 ಗಂಟೆಗೆ ಸಮಯ ನಿಗದಿಯಾಗಿತ್ತು.

ಆದರೆ ಸಂಜೆ 7.30ರ ಸುಮಾರಿಗೆ ಆಗಮಿಸಿದ ಸಚಿವರು ದೇವಸ್ಥಾನ ಹಾಗೂ ಐಕ್ಯಮಂಟಪದ ಬಳಿ ಹೋಗದೆ ಗ್ರಾಮದ ಒಡೆಯರ ಚಿತ್ರಶೇಖರ ಶಿವಾಚಾರ್ಯ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ನಂತರ ಅಲ್ಲಿಂದ ನೇರವಾಗಿ ಸಮೀಪದ ನರಶೀಪುರ ಪೀಠಕ್ಕೆ ತೆರಳಿದ್ದಾರೆ.

ಇನ್ನೊಂದೆಡೆ ಚೌಡಯ್ಯದಾನಪುರ ಗ್ರಾಮದ ಅಂಬಿಗ ಸಮುದಾಯದವರು ಐಕ್ಯಮಂಟಪದ ಬಳಿ ಸಚಿವರನ್ನು ಕಾಯುತ್ತಾ ಇದ್ದರು. ಆದರೆ ಸಚಿವರು ಐಕ್ಯಮಂಟಪದ ಬಳಿ ಬಾರದೇ ನರಶೀಪುರ ಪೀಠಕ್ಕೆ ತೆರಳಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅಂಬಿಗ ಸಮುದಾಯದ ಮುಖಂಡರು ನರಶೀಪುರ ಪೀಠಕ್ಕೆ ತೆರಳಿ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಸಚಿವರು ಚೌಡಯ್ಯದಾನಪುರ ಗ್ರಾಮಕ್ಕೆ ಆಗಮಿಸಿ ಐಕ್ಯಮಂಟಪ ವೀಕ್ಷಣೆ ಮಾಡದೆ ಹೋಗುತ್ತಿರುವುದು ಬೇಸರವೆನಿಸಿದೆ. ಆದ್ದರಿಂದ ಮುಳುಗಡೆಯಾಗಿರುವ ಐಕ್ಯಮಂಟಪದ ಸ್ಥಿತಿಯನ್ನು ನೋಡಲೇಬೇಕು ಎಂದು ಸಚಿವರನ್ನು ಮನವೊಲಿಸಲಾಯಿತು. ಆಗ ಸಚಿವರು ಪೀಠದ ಶಾಂತಭೀಷ್ಮ ಚೌಡಯ್ಯ ಅವರನ್ನು ತಮ್ಮ ಕಾರಿನಲ್ಲಿಯೇ ಕೂರಿಸಿಕೊಂಡು ರಾತ್ರಿ 9 ಗಂಟೆಗೆ ಗ್ರಾಮಕ್ಕೆ ಆಗಮಿಸಿದರು. ಆಗ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಾರನ್ನು ತಡೆದು ಗ್ರಾಮದ ಚಿತ್ರಶೇಖರ ಸ್ವಾಮೀಜಿಯನ್ನು ಹೊರತುಪಡಿಸಿ ಮತ್ತೊಬ್ಬ ಸ್ವಾಮೀಜಿಯನ್ನು ವೀಕ್ಷಣೆಗೆ ಬಿಡುವುದಿಲ್ಲ ಎಂದು ಹಠ ಹಿಡಿದರು.

ಇದರಿಂದ ಅಂಬಿಗ ಸಮುದಾಯ ಮತ್ತು ಇತರೆ ಸಮುದಾಯದ ಜನರ ನಡುವೆ ವಾಗ್ವಾದ ನಡೆಯಿತು. ಆಗ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆ ಉಂಟಾಗುವುದನ್ನು ತಪ್ಪಿಸಿ ಪರಿಸ್ಥಿತಿ ಹತೋಟಿಗೆ ತಂದರು. ಇದರಿಂದಾಗಿ ಸಚಿವರು ಐಕ್ಯಮಂಟಪ ವೀಕ್ಷಣೆ ಮಾಡದೆ ಅಲ್ಲಿಂದ ತೆರಳಿದರು. ಶಾಸಕ ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೇರಿದಂತೆ ಮತ್ತಿತರರು ಇದ್ದರು.