ಅಪಘಾತದಲ್ಲಿ ವಾಹನದಲ್ಲಿದ್ದ 11 ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡವರನ್ನು ಸ್ಥಳೀಯರ ನೆರವಿನಿಂದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕಾರವಾರ: ಎದುರಿನಿಂದ ಬಂದ ಸ್ಯಾಂಟ್ರೋ ಕಾರನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನ ರಸ್ತೆ ಬದಿಗೆ ಪಲ್ಟಿಯಾದ ಘಟನೆ ತಾಲೂಕಿನ ಹೊಟೆಗಾಳಿ ಸಮೀಪ ಗುರುವಾರ ನಡೆದಿದೆ.ಹೈದರಾಬಾದ್‌ನಿಂದ 11 ಮಂದಿ ಪ್ರವಾಸಿಗರು ಬುಧವಾರ ತಿರುಮಲ ಟ್ರಾವೆಲ್ಸ್‌ನ ಟಿಟಿ ವಾಹನದಲ್ಲಿ ದಾಂಡೇಲಿಯಿಂದ ಕಾರವಾರದತ್ತ ಪ್ರಯಾಣಿಸುತ್ತಿದ್ದರು.

ಗುರುವಾರ ಮಧ್ಯಾಹ್ನ ವೇಳೆಗೆ ಹೊಟೆಗಾಳಿ ಸಮೀಪ ಎದುರಿನಿಂದ ಸ್ಯಾಂಟ್ರೋ ಕಾರೊಂದು ಬಂದಿದೆ. ಕಾರನ್ನು ತಪ್ಪಿಸಲು ಮುಂದಾದಾಗ ಟಿಟಿ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ ಎಂದು ಪ್ರವಾಸಿಗ ವಿಜಯಕುಮಾರ ನಾಗಯ್ಯ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಅಪಘಾತದಲ್ಲಿ ವಾಹನದಲ್ಲಿದ್ದ 11 ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಗೊಂಡವರನ್ನು ಸ್ಥಳೀಯರ ನೆರವಿನಿಂದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೂವರು ಅಂತರ ಜಿಲ್ಲಾ ಕಳ್ಳರ ಬಂಧನ

ಹೊನ್ನಾವರ: ಟಿಪ್ಪ‌ರ್ ಲಾರಿಯ ಡೀಸೆಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಅಂತರ ಜಿಲ್ಲಾ ಕಳ್ಳರ ಗ್ಯಾಂಗ್‌ನ ಮೂವರನ್ನು ಬಂಧಿಸಿದ್ದಾರೆ.ತಾಲೂಕಿನ ದಾಪಗಾಲಮಕ್ಕಿ ನಿವಾಸಿ ಮೂಸಾ ಹಸನ್ ಸಾಬ್ ಎಂಬವರು ತಮ್ಮ ಟಿಪ್ಪರ್ ಲಾರಿಯ ಡೀಸೆಲ್ ಬ್ಯಾಂಕ್‌ನಲ್ಲಿದ್ದ ಸುಮಾರು 140 ಲೀಟರ್ ಡೀಸೆಲ್, ಅಂದಾಜು 14,500 ಮೌಲ್ಯದ, ಕಳ್ಳತನವಾಗಿರುವ ಕುರಿತು ಸೆ. 1ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಘಟನೆ ಆ. 28ರ ರಾತ್ರಿ 9ರಿಂದ ಆ. 29ರ ಬೆಳಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ನಡೆದಿತ್ತು. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತಂಡಕ್ಕೆ ದೊರೆತ ಖಚಿತ ಮಾಹಿತಿ ಆಧರಿಸಿ ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾದ ಯೂನೂಸ್‌ ಶಬೀರ್ ಖಾನ್(28), ಮಹ್ಮದ್ ಗೌಸ್(38) ಹಾಗೂ ಸೈಯ್ಯದ್ ಸಿಕಂದ‌ರ್(22) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನ ಸೇರಿದಂತೆ ಡೀಸೆಲ್ ಕಳ್ಳತನಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಸ್ವತ್ತಿನ ಒಟ್ಟು ಮೌಲ್ಯ ಸುಮಾರು ₹1.50 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ 1 ಜಿ. ಕೃಷ್ಣಮೂರ್ತಿ, ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತಾ ಹಾಗೂ ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್‌ ನಿರೀಕ್ಷಕ ಸಿದ್ದರಾಮೇಶ್ವರ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಮಹಾಂತೇಶ ವಾಲ್ಮೀಕಿ ನೇತೃತ್ವದಲ್ಲಿ ನಡೆಸಲಾಯಿತು.

ಪೊಲೀಸ್ ಸಿಬ್ಬಂದಿಗಳಾದ ಮನೋಜ್ ಡಿ., ರವಿ ನಾಯ್ಕ, ಗಜಾನನ ನಾಯ್ಕ, ಶಿವಾನಂದ ನಾಗರದಿನ್ನಿ ಹಾಗೂ ಅಂಕೋಲಾ ಪೊಲೀಸ್ ಠಾಣೆಯ ಮಹ್ಮದ್ ಶಫೀ, ಗಿರೀಶ್ ಮತ್ತು ಶೇಖರ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.